ದೊಡ್ಡಬಳ್ಳಾಪುರದ ಸೋಮಶೆಟ್ಟಿಹಳ್ಳಿಯ ಕೋಳಿಾಮ್ರ್ನಲ್ಲಿ ಮೃತಪಟ್ಟಿರುವ ಕೋಳಿಗಳು.
- 950ಕ್ಕೂ ಹೆಚ್ಚು ಕೋಳಿಮರಿಗಳ ಮಾರಣಹೋಮ
950ಕ್ಕೂ ಹೆಚ್ಚು ಕೋಳಿಮರಿಗಳ ಮಾರಣಹೋಮ
ದೊಡ್ಡಬಳ್ಳಾಪುರ: ಸೋಮಶೆಟ್ಟಿಹಳ್ಳಿಯಲ್ಲಿ ಶನಿವಾರ ತಡರಾತ್ರಿ ಕೋಳಿಫಾಮ್ರ್ ಮೇಲೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು ಸತ್ತಿವೆ.
ಕೆಂಪೇಗೌಡ ಅವರು ಕೋಳಿಫಾಮ್ರ್ನಲ್ಲಿ 10 ಸಾವಿರಕ್ಕೂ ಅಧಿಕ ಕೋಳಿಮರಿಗಳನ್ನು ಸಾಕಿದ್ದು, ಚಿರತೆಗಳು ಫಾಮ್ರ್ಗೆ ನುಗ್ಗಿ ದಾಳಿ ನಡೆಸಿವೆ ಎನ್ನಲಾಗಿದೆ. ಭಾನುವಾರ ಬೆಳಗ್ಗೆ ಫಾಮ್ರ್ಗೆ ಬಂದಾಗ ಕೋಳಿಮರಿಗಳ ಕಳೆಬರಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಚಿರತೆ ಹಾಗೂ ಅದರ ಮರಿಗಳು ಸೇರಿ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಸ್ಥಳಿಯರು ಶಂಕಿಸಿದ್ದಾರೆ. ಕೋಳೂರು ಮೀಸಲು ಅರಣ್ಯ ಪ್ರದೇಶದಿಂದ ಚಿರತೆಗಳು ಗ್ರಾಮಕ್ಕೆ ಬಂದಿರಬಹುದು ಎನ್ನಲಾಗುತ್ತಿದೆ. ಆದರೆ ದಾಳಿ ನಡೆಸಿರುವುದು ಒಂದೇ ಚಿರತೆಯೇ ಅಥವಾ ಚಿರತೆ ಮರಿಗಳೂ ಸೇರಿದ್ದವೇ ಎಂಬುದು ಅರಣ್ಯ ಇಲಾಖೆ ಪರಿಶೀಲನೆಯ ಬಳಿಕ ಸ್ಪಷ್ಟವಾಗಬೇಕಿದೆ.
ಅರಣ್ಯ ಇಲಾಖೆ ಪರಿಶೀಲನೆ: ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೃತಪಟ್ಟ ಕೋಳಿಮರಿಗಳನ್ನು ಪರಿಶೀಲಿಸಿ, ಚಿರತೆ ದಾಳಿಯಾಗಿರುವ ಸಾಧ್ಯತೆ ಹಾಗೂ ಇತರ ಕಾರಣಗಳ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ದಾಳಿ ನಡೆಸಿದ ವನ್ಯಜಿವಿಗಳ ಚಲನವಲನ ಪತ್ತೆಹಚ್ಚಲು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
ಗ್ರಾಮಸ್ಥರಲ್ಲಿ ಆತಂಕ: ಸೋಮಶೆಟ್ಟಿಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಗಳ ಓಡಾಟದ ಬಗ್ಗೆ ಈ ಹಿಂದೆಯೂ ಆತಂಕ ವ್ಯಕ್ತವಾಗಿತ್ತು. ಇದೀಗ ಕೋಳಿಫಾಮ್ರ್ ಮೇಲೆ ದಾಳಿ ನಡೆದಿರುವುದು ಗ್ರಾಮಸ್ಥರ ಭಯವನ್ನು ಮತ್ತಷ್ಟು ಹೆಚ್ಚಿಸಿದೆ. ರಾತ್ರಿ ವೇಳೆ ಜಮೀನು ಹಾಗೂ ಗ್ರಾಮ ಹೊರವಲಯದಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸುವಂತೆ ಸ್ಥಳಿಯರು ಪರಸ್ಪರ ಸೂಚನೆ ನೀಡಿಕೊಳ್ಳುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಳ ಚಲನವಲನದ ಕುರಿತು ಹೆಚ್ಚಿನ ನಿಗಾ ವಹಿಸಿ, ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.