mango story 
ಬೆಂಗಳೂರು ಗ್ರಾಮಾಂತರ

ಹಣ್ಣುಗಳ ರಾಜನಿಗೆ ಬಿಸಿಲ ತಾಪ

ಶಿವರಾಜ.ಎಂ
ಶಿವರಾಜ ಎಂ ಬೆಂಗಳೂರು ಗ್ರಾಮಾಂತರ
ಹಣ್ಣುಗಳ ರಾಜ ಎನಿಸಿರುವ ಮಾವಿಗೆ ಬಿಸಿಲ ತಾಪ ಹೊಡೆತ ನೀಡುತ್ತಿದ್ದು, ಮಾರುಕಟ್ಟೆಗಳಲ್ಲಿ ಮಾವಿನ ದರ ದುಬಾರಿಯಾಗಿದೆ. ಇಳುವರಿ ಕುಂಠಿತದಿಂದಾಗಿ ಬೆಳೆಗಾರರಿಗೆ ಆರ್ಥಿಕ ನಷ್ಟ ಎದುರಾಗಿದ್ದರೆ, ದುಬಾರಿ ದರದಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ.
ತೀವ್ರ ಬಿಸಿಲ ತಾಪದಿಂದಾಗಿ ಮಾವಿನ ಮರಗಳಲ್ಲಿ ಹೂವುಗಳು ಒಣಗಿ ಉದುರುತ್ತಿವೆ, ನೀರಿನ ಅಭಾವದಿಂದ ಮರಗಳಿಗೆ ತೇವಾಂಶ ಕೊರತೆ ಎದುರಾಗಿದ್ದು, ಗುಣಮಟ್ಟದ ಹಣ್ಣು ದೊರೆಯುವುದು ಕಷ್ಟಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸೂರ್ಯನ ಕಿರಣಗಳು ನೇರವಾಗಿ ಮಾವಿನ ಕಾಯಿಗಳ ಮೇಲೆ ಬೀಳುತ್ತಿದ್ದು ಗುಣಮಟ್ಟ ಕುಸಿಯುವಂತಾಗಿದೆ. ಬಿಸಿಲ ಹೊಡೆತಕ್ಕೆ ಮರಗಳಲ್ಲಿ ಕಾಯಿ ಕಚ್ಚುವುದೇ ದುಸ್ತರ ಎಂಬಂತಾಗಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷಿತ ಸಲು ದೊರಕುವುದು ಅನುಮಾನ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಗುಣಮಟ್ಟದ ಹಣ್ಣು ಸಿಗುತ್ತಿಲ್ಲ:
ಮಾರುಕಟ್ಟೆಗಳಿಗೆ ಮಾವಿನ ಹಣ್ಣು ಆಗಮಿಸುತ್ತಿದ್ದರೂ ಗುಣಮಟ್ಟದ ಹಣ್ಣಿಗೆ ಹುಡುಕಾಟ ನಡೆಸುವಂತಾಗಿದೆ. ಬಿಸಿಲ ಬೇಗೆಗೆ ಮಾಗಿದಂತೆ ಕಾಣುವ ಹಣ್ಣುಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ವಿಲವಾಗುತ್ತಿವೆ. ದಪ್ಪ ಗಾತ್ರದ ಹಣ್ಣುಗಳೇ ಕಾಣುತ್ತಿಲ್ಲ. ಬದಲಿಗೆ ಪೀಚಿನಂತೆ ಇರುವ ಮಾವಿನ ಹಣ್ಣುಗಳು ಕಂಡುಬರುತ್ತಿವೆ. ಅಲ್ಲದೆ ಅವುಗಳನ್ನು ಕೃತಕವಾಗಿ ಹಣ್ಣು ಮಾಡುತ್ತಿರುವುದರಿಂದ ನಿಜವಾದ ಮಾವಿನ ಸವಿ ಸವಿಯಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯ ಗುಣಮಟ್ಟದ ಹಣ್ಣಿಗೆ ಕೆಜಿಗೆ 120 ರೂ.ನಿಂದ 150 ರೂಪಾಯಿ ದರ ಕಂಡುಬರುತ್ತಿದೆ, ಸ್ವಲ್ಪ ಗುಣಮಟ್ಟದ ಹಣ್ಣು ಕೆಜಿಗೆ 200 ರೂಪಾಯಿಗೂ ಅಧಿಕ ದರದಲ್ಲಿ ಮಾರಾಟವಾಗುತ್ತಿದೆ. ಹಣ್ಣುಗಳ ಮೇಲ್ಮೈ ಚೆನ್ನಾಗಿ ಕಂಡರು ಒಳಗೆ ಕೊಳೆತ ರೀತಿ, ಹುಳಿಹುಳಿಯಾದ ರುಚಿ ಕಂಡುಬರುತ್ತಿದೆ ಇದರಿಂದ ಗ್ರಾಹಕರೂ ಮಾವಿನ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಇತ್ತೀಚಿನ ಬಾರಿ ಬಿಸಿಲಿನಿಂದಾಗಿ ಹೂಗಳು ಒಣಗಿ ಉದುರುತ್ತಿದೆ. ಕಟ್ಟಿದ ಕಾಯಿಗಳು ನೆಲಕಚ್ಚಿದೆ. ಇಳುವರಿ ಕುಂಠಿತಗೊಂಡಿದೆ. ಬಯಲ ಸೀಮೆ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಉಷ್ಣಾಂಶ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ತೇವಾಂಶ ಕೊರತೆಯಿಂದಾಗಿ ಸಂಪೂರ್ಣವಾಗಿ ಇಳುವರಿ ಕುಸಿದಿದೆ. ಇದರಿಂದ ತೋಟ ಖರೀದಿಸಿದ್ದ ವ್ಯಾಪಾರಿಗಳಿಗೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ. ಅಳಿದು-ಉಳಿದು ಕಾಯಿಗಳು ಕುಯ್ಲಗಿ ಮಾರುಕಟ್ಟೆಗೆ ಬಂದಿದ್ದು. ಬೆಲೆ ಏರಿಕೆಯಿಂದ ಗ್ರಾಹಕರು ಬೇಸರಗೊಳ್ಳುವಂತಾಗಿದೆ.
20 ಸಾವಿರ ಮೆಟ್ರಿಕ್ ಟನ್ ಸಿಕ್ಕರೂ ಪುಣ್ಯ:
ಜಿಲ್ಲೆಯಲ್ಲಿ ಸುಮಾರು 5 ಸಾವಿರ ಹೆಕ್ಟರ್ ಪ್ರದೇಶದಲ್ಲಿನ ಮಾವು ಬೆಳೆಯಲಾಗಿದ್ದು ಈ ಬಾರಿ ಉತ್ತಮ ಸಲಿನ ನಿರೀಕ್ಷೆ ಇತ್ತು. ಈ ವರ್ಷ ಪ್ರಾರಂಭದಲ್ಲಿ 30 ಸಾವಿರ ಮೆಟ್ರಿಕ್ ಟನ್‌ಗಳಷ್ಟು ಮಾವು ಉತ್ಪಾದನೆ ಆಗುವ ನಿರೀಕ್ಷೆ ಇತ್ತು. ಸದ್ಯದ ವಾತಾವರಣ ಗಮನಿಸಿದರೆ ಇದು ಕಷ್ಟಸಾಧ್ಯ ಎನ್ನುವಂತಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲೂ ಉಷ್ಣಾಂಶ 36 ರಿಂದ 38 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಹೂ ಕಟ್ಟಿದ್ದ ಮಾವಿನ ಮರಗಳು ತೇವಾಂಶದ ಕೊರತೆಯಾಗಿ ಬಿಸಿಲ ಹೊಡೆತಕ್ಕೆ ಬಾಡುತ್ತಿವೆ. ಕಾಯಿ ಕಟ್ಟುವ ಪ್ರಮಾಣ ಕುಸಿತ ಕಂಡಿದೆ. ಇದೇ ಪರಿಸ್ಥಿತಿ ಮುಂದುವರಿದರೆ 20 ಸಾವಿರ ಮೆಟ್ರಿಕ್‌ಟನ್ ಗಳಷ್ಟು ಮಾವು ಕೈ ಸೇರಿದರೆ ಹೆಚ್ಚು ಎಂಬಂತಹ ಪರಿಸ್ಥಿತಿ ಬಂದಿದೆ.
ಬಿಸಿಲಿನ ತಾಪಮಾನ ಹೆಚ್ಚಳವಾಗಿರುವುದರಿಂದ ಮಾವಿನ ಇಳುವರಿ ಕುಸಿತ ಕಾಣುತ್ತಿದೆ. ಮಾವಿನ ತೋಟಗಳನ್ನು ಖರೀದಿ ಸಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದೇ ರೀತಿ ಬಿಸಿಲು ಮುಂದುವರೆದರೆ ಬೆಳೆಗಾರರಿಗೂ ನಷ್ಟ, ಖರೀದಿದಾರರಿಗೂ ಕಷ್ಟ ಎಂಬಂತ ಪರಿಸ್ಥಿತಿ ನಿರ್ಮಾಣವಾಗಲಿದೆ.
ಜಗದೀಶ್‌ಕುಮಾರ್, ಮಾವು ಬೆಳೆಗಾರ ದೇವನಹಳ್ಳಿ
ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಮಾವು ಬೆಳೆಗೆ ಹೊಡೆತ ನೀಡಲಿದೆ. ಜಿಲ್ಲೆಯಲ್ಲಿ 35 ರಿಂದ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬರುತ್ತಿದೆ. ಮಾವಿನ ಮರದ ಹೂಗಳು ಒಣಗಿ ಉದುರುತ್ತಿವೆ. ಇದರಿಂದ ಕಾಯಿ ಕಟ್ಟುವ ಪ್ರಮಾಣ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ ಮಾವು ಇಳುವರಿ ತಡವಾಗಿ ಬರಲಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರಬಹುದೆಂದು ಕಾದುನೋಡಬೇಕಿದೆ.
ಗುಣವಂತ ಜಂಟಿ ನಿರ್ದೇಶಕ, ತೋಟಗಾರಿಕೆ ಇಲಾಖೆ ಬೆಂ.ಗ್ರಾಮಾಂತರ