madure utsava 
ಬೆಂಗಳೂರು ಗ್ರಾಮಾಂತರ

ಕನಸವಾಡಿಯಲ್ಲಿ ಶಕ್ತಿದೇವತೆಗಳ ಸಮಾಗಮ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿಯಲ್ಲಿನ ಚಿಕ್ಕಮಧುರೆ ಬ್ರಹ್ಮರಥೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಶಕ್ತಿ ದೇವತೆಗಳ ಉತ್ಸವ ಅದ್ದೂರಿಯಾಗಿ ನೆರವೇರಿತು.
ಇದೇ ಮೊದಲ ಬಾರಿಗೆ ಯಾವುದೇ ರಾಜಕೀಯ ಸುಳಿವಿಲ್ಲದೆ ಅಪ್ಪಟ ಭಕ್ತರ ಉತ್ಸವವಾಗಿ ನಡೆದಿದ್ದು ಈ ಬಾರಿಯ ವಿಶೇಷವಾಗಿದೆ. ಯಾವುದೇ ರಾಜಕೀಯ ವ್ಯಕ್ತಿಗಳ ಬ್ಯಾನರ್, ಬಂಟಿಂಗ್ಸ್ ಇಲ್ಲದೆ ರಾಜಕೀಯ ಮುಖಂಡರ ಹಸ್ತಕ್ಷೇಪವಿಲ್ಲದೆ ನಡೆದಂತಹ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಭಕ್ತಿಪರವಶತೆ ಮೆರೆದರು.
118 ದೇವತೆಗಳ ಮೆರವಣಿಗೆ:
ಚಿಕ್ಕಮಧುರೆ ಶನೇಶ್ವರ ದೇವರ ಬ್ರಹ್ಮರಥೋತ್ಸವ ಕಾರ್ಯಕ್ರಮದ ಭಾಗವಾಗಿ 101 ದೇವತೆಗಳ ಉತ್ಸವದಲ್ಲಿ ಪಟಾಕಿ ಬಾಣ ಬಿರುಸಿನ ಸಂಭ್ರಮ ಮುಗಿಲುಮುಟ್ಟಿತ್ತು. 101 ಶಕ್ತಿ ದೇವತೆಗಳ ಉತ್ಸವವಾದರೂ ಹೆಚ್ಚುವರಿಯಾಗಿ ಇನ್ನು 17 ದೇವತೆಗಳು ಭಾಗಿಯಾಗಿದ್ದು 118 ದೇವತೆಗಳು ಮಧುರೆ ಹೋಬಳಿ ಸುತ್ತಮುತ್ತಲ್ಲಿನಿಂದ ಆಗಮಿಸಿತ್ತು. ಇದು ಮಾತ್ರವಲ್ಲದೇ, ಬೆಂಗಳೂರಿನ ಅಣ್ಣಮ್ಮ ಸೇರಿ ವಿವಿಧ ದೇವತೆಗಳನ್ನು ಆರಾಧನೆ ಮಾಡಲಾಯಿತು. ಶನೇಶ್ವರ ದೇವರು ಸೇರಿ ಆಗಮಿಸಿದ ದೇವತೆಗಳ ಉತ್ಸವದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ತೆರಳಲಾಯಿತು. ಭಕ್ತರಿಗೆ ಪ್ರವಾದ ವ್ಯವಸ್ಥೆ ಮಾಡಲಾಗಿತ್ತು. ದಿನವಿಡೀ ಧಾರ್ಮಿಕ ಪೂಜಾ ಕಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಕಾಲೇಜು ಆವರಣದಲ್ಲಿ ವಿಶೇಷ ಪೂಜೆ:
ಕನಸವಾಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಶನೇಶ್ವರ ದೇವಾಲಯದ ಸಮೇತವಾಗಿ 118 ಶಕ್ತಿ ದೇವತೆಗಳ ಉತ್ಸವ ನಡೆಯಿತು. ಇಲ್ಲಿನ ಕಾಲೇಜಿನ ಆವರಣದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ದೂರದೂರುಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಒಂದೇ ಆವರಣದಲ್ಲಿ ಅಷ್ಟೂ ದೇವತೆಗಳನ್ನು ದರ್ಶನ ಪಡೆದು ಪುನೀತರಾದರು. ದೇವತೆಗೆಳಿಗೆ ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥನೆ ಸಲ್ಲಿಸಿದರು.
ಸಾಂಸ್ಕೃತಿಕ ಮೆರಗು:
ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ವಿಶೇಷ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹಿನ್ನೆಲೆ ಗಾಯಕ ಹೇಮಂತ್ ತಂಡದ ವತಿಯಿಂದ ಸಂಗೀತ ಸಂಭ್ರಮೋತ್ಸವ ಜತೆಗೆ ತುಮಕೂರಿನ ಫೈರ್ ವರ್ಕ್ ತಂಡದಿಂದ ವಿಶೇಷ ಸಿಡಿಮದ್ದು ಪ್ರದರ್ಶನ ಗಮನ ಸೆಳೆಯಿತು ರವೀಂದ್ರ ಕಲಾ ಕ್ಷೇತ್ರದ ಮಹಿಳಾ ತಂಡದಿಂದ ನಾಟಕ ಪ್ರದರ್ಶನ ತಮಟೆ ಸೇರಿ ವಿವಿಧ ಕಲಾತಂಡಗಳು ಪ್ರದರ್ಶನ ಉತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸಿತು. ಶನೇಶ್ವರ ದೇವಾಲಯದಿಂದ ಕನಸವಾಡಿ ಮುಖ್ಯ ರಸ್ತೆಯಲ್ಲಿ ಶನೇಶ್ವರ ದೇವರ ಸಮೇತವಾಗಿ ವಿಶೇಷ ಕಲಾತಂಡದೊಂದಿಗೆ ದೇವತೆಗಳ ಮೆರವಣಿಗೆ ಗಮನ ಸೆಳೆಯಿತು. ಭಕ್ತರು ದೇವರಿಗೆ ಜಯಕಾರ ಕೂಗುತ್ತಾ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.