madure traffice 
ಬೆಂಗಳೂರು ಗ್ರಾಮಾಂತರ

ಮಧುರೆ ದೇಗುಲದ ಬಳಿ ಭಕ್ತರು ಹೈರಾಣ

ಶಿವರಾಜ.ಎಂ
ಚೇತನ್ ಮಧುರೆ
ಬಾದಾಮಿ ಅಮಾವಾಸ್ಯೆ (ಶನಿ ಅಮಾವಾಸ್ಯೆ) ಹಾಗೂ ಶನಿದೇವರ ಜಯಂತಿ ಅಂಗವಾಗಿ ಮಧುರೆ ಶನಿಮಮಹಾತ್ಮ ದೇಗುಲಕ್ಕೆ ಹರಿದುಬಂದಿದ್ದ ಭಕ್ತಸಾಗರ ಸಂಚಾರ ಸಿಕ್ಕಿನಲ್ಲಿ ಸಿಲುಕಿ ನಲುಗುವಂತಾಯಿತು.
ಶನೇಶ್ವರನಿಗೆ ಅತ್ಯಂತ ಪ್ರಿಯವಾದ ಮತ್ತು ಶಕ್ತಿಶಾಲಿ ದಿನವೆಂಬ ಪ್ರತೀತಿ ಇರುವ ಬಾದಾಮಿ ಅಮವಾಸ್ಯೆ ದಿನ ದೇಗುಲದ ಆವರಣದಲ್ಲಿ ಭಕ್ತಸಾಗರವೇ ನೆರೆದಿತ್ತು. ಸಾಮಾನ್ಯವಾಗಿ ಶ್ರಾವಣ ಶನಿವಾರ ಹಾಗೂ ಜಾತ್ರಾಮಹೋತ್ಸವದಂದು ಸೇರುತ್ತಿದ್ದ ಭಕ್ತಸಾಗರಕ್ಕಿಂತ ವಿಶೇಷ ದಿನವಾದ ಶನಿವಾರ ನಿರೀಕ್ಷೆಗೂ ಮೀರಿ ಭಕ್ತರ ಜಮಾವಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ದೇಗುಲದ ಆವರಣ ಸೇರಿ ಹೆದ್ದಾರಿಯುದ್ದಕ್ಕೂ ಜನಸಾಗರ ಕಿಕ್ಕಿರಿದು ತುಂಬಿದ್ದ ದೃಶ್ಯ ಕಂಡುಬಂತು.
ಪೊಲೀಸರು ಹೈರಾಣ:
ದ್ವಿಚಕ್ರವಾಹನ, ಕಾರು ಸೇರಿ ಸಾವಿರಾರು ವಾಹನಗಳು ಬಂದಿದ್ದರಿಂದ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲದೆ ಎಲ್ಲೆಂದರಲ್ಲಿ ನಿಲುಗಡೆ ಮಾಡಿದ್ದ ದೃಶ್ಯ ಕಂಡುಬಂತು ಇದರಿಂದ ಮತ್ತಷ್ಟು ಸಂಚಾರ ಸಿಕ್ಕಿಗೆ ಕಾರಣವಾಯಿತು. ಬೆರಳೇಣಿಕೆ ಪೊಲೀಸರನ್ನು ನಿಯೋಜಿಸಿದ್ದರಿಂದ ಸಾವಿರಾರು ಭಕ್ತರನ್ನು ನಿಯಂತ್ರಿಸಲು ಪೊಲೀಸರು ಪರದಾಡುವಂತಾಯಿತು. ಹೆದ್ದಾರಿಯಲ್ಲಿ ಲಾರಿ ಸೇರಿ ಬೃಹತ್ ವಾಹನಗಳ ಸಂಚಾರದಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು.
ಬಸ್‌ಗಳಿಲ್ಲದೆ ಪರದಾಟ:
ಬೆರಳೇಣಿಗೆ ಬಸ್‌ಗಳ ಸಂಚಾರದಿಂದ ಪ್ರಯಾಣಿಕರು ಪರದಾಡುವಂತಾಯಿತು. ಗಂಟೆಗಟ್ಟಲೆ ರಸ್ತೆಯಲ್ಲಿ ನಿಂತು ಜನ ಬಸ್‌ಗಳಿಗೆ ಕಾಯುತ್ತಿದ್ದ ದೃಶ್ಯ ಕಂಡುಬಂತು ಇದರಿಂದ ಇನ್ನಿತರ ವಾಹನಗಳ ಸಂಚಾರಕ್ಕೂ ಸಮಸ್ಯೆ ಉದ್ಭವಿಸಿತ್ತು.
ನಿರೀಕ್ಷೆ ಇರಲಿಲ್ಲವಂತೆ:
ಸಾವಿರಾರು ಭಕ್ತರು ಆಗಮಿಸಿದ್ದರಿಂದ ನೂರಾರು ಭಕ್ತರಿಗೆ ದೇವರ ದರ್ಶನ ಪಡೆಯಲೇ ಅವಕಾಶ ಸಿಗಲಿಲ್ಲ. ಬಸ್‌ಗಳ ಸೌಲಭ್ಯವಿಲ್ಲದೆ ಗಂಟೆಗಟ್ಟಲೆ ಕಾದ ಜನ ವಾಪಸ್ ತೆರಳುವಂತಾಯಿತು. ಇನ್ನು ನಾಲ್ಕೈದು ಪೊಲೀಸರ ನಿಯೋಜನೆ ಮಾಡಿದ್ದರಿಂದ ಅಷ್ಟು ಜನರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸುವ ದೇಗುಲದ ಆಡಳಿತ ಮಂಡಳಿ ಇಷ್ಟೊಂದು ಭಕ್ತರು ಆಗಮಿಸುವ ನಿರೀಕ್ಷೆ ಇರಲಿಲ್ಲ ಆದ್ದರಿಂದ ಮತ್ತಷ್ಟು ಮುಂಜಾಗ್ರತೆ ಬಗ್ಗೆ ಗಮನ ನೀಡಲು ಸಾಧ್ಯವಾಗಲಿಲ್ಲ ಎಂಬ ಉತ್ತರ ಬರುತ್ತಿದೆ ಎಂದು ಹಲವು ಭಕ್ತರು ಬೇಸರ ತೋಡಿಕೊಂಡರು.
ಈ ರೀತಿಯ ಜನಸಾಗರವನ್ನು ನಾನು ಈ ಹಿಂದೆ ಎಂದಿಗೂ ನೋಡಿರಲಿಲ್ಲ, ಸಾವಿರಾರು ಭಕ್ತರು ಆಗಮಿಸಿದ್ದರು. ದೂರದ ಊರಿಂದ ಬಂದಿದ್ದರೂ ಇಷ್ಟೊಂದು ಜನರ ನಡುವೆ ದೇವರ ದರ್ಶನ ಪಡೆಯಲೂ ಸಾಧ್ಯವಾಗಲಿಲ್ಲ. ಹೊರಗಡೆಯೇ ಎಳ್ಳುಬತ್ತಿ ಹಚ್ಚಿ ದೇವರಿಗೆ ಕೈ ಮುಗಿದು ಮನೆ ಕಡೆಗೆ ಹೊರಟೆವು. ಬಸ್‌ಗಳಿಲ್ಲದೆ ಸುಮಾರು 3 ತಾಸು ಕಾಯುವಂತಾಯಿತು.
ನಾಗರಾಜು, ಚಿಕ್ಕಬಳ್ಳಾಪುರ