madure lake 
ಬೆಂಗಳೂರು ಗ್ರಾಮಾಂತರ

ಕಸ ತುಂಬುವ ತಾಣವಾಗುತ್ತಿದೆ ಮಧುರೆ ಕೆರೆ!

ಶಿವರಾಜ.ಎಂ

ಮಧುರೆ ಚೇತನ್

ಜಿಲ್ಲೆಯಲ್ಲಿನ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿರುವ ಚಿಕ್ಕಮಧುರೆಯ ಶ್ರೀ ಶನಿಮಹಾತ್ಮಾ ದೇವಾಲಯಕ್ಕೆ ಹೊಂದಿಕೊಂಡಂತಿರುವ ‘ಮಧುರೆ ಕೆರೆ’ ಕಸ ತುಂಬುವ ತಾಣವಾಗಿ ಬಳಕೆಯಾಗುತ್ತಿದೆ. ಕೋಳಿ ತ್ಯಾಜ್ಯದ ಜತೆಗೆ ದೇವಸ್ಥಾನದ ಪೂಜಾ ತ್ಯಾಜ್ಯಗಳು ಕೆರೆ ಒಡಲು ಸೇರುತ್ತಿದ್ದು ಕೆಲವೇ ದಿನಗಳಲ್ಲಿ ಕೆರೆ ಚಿತ್ರಣವೇ ಬದಲಾಗುವ ಸಾಧ್ಯತೆ ನಿಚ್ಛಳವಾಗಿದೆ..!
ಸುಮಾರು 980 ಎಕರೆಯಷ್ಟು ವಿಸ್ತಾರವಾಗಿರುವ ಈ ದೊಡ್ಡ ಕೆರೆ ಸುತ್ತಲೂ ಗಿಡಗಂಟಿಗಳು ಆವರಿಸಿದ್ದು ಕೆರೆಯ ಇರುವಿಕೆಯನ್ನೇ ಮರೆಮಾಚಿದೆ. ತೀವ್ರ ಮಳೆ ಕೊರತೆಯಿಂದ ಕೆರೆಯಲ್ಲಿನ ನೀರು ಬತ್ತಿ ಹೋಗುತ್ತಿದೆ. ಇದನ್ನೆ ಬಂಡವಾಳ ಮಾಡಿಕೊಳ್ಳುತ್ತಿರುವ ಮಣ್ಣು ಮಾಫಿಯಾದವರು ಲೋಡ್‌ಗಟ್ಟಲೆ ಕೆರೆ ಮಣ್ಣನ್ನು ಟಿಪ್ಪರ್‌ಗಳ ಮೂಲಕ ಸಾಗಿಸುತ್ತಿದ್ದಾರೆ. ಹಗಲಿನ ವೇಳೆಯೇ ರಾಜಾರೋಷವಾಗಿ ಮಣ್ಣು ಸಾಗಾಣಿಕೆ ನಡೆಯುತ್ತಿದ್ದರೂ ಸ್ಥಳೀಯ ಆಡಳಿತಗಳು ಕಣ್ಮುಚ್ಚಿ ಕುಳಿತಿವೆ.
ಹೆಸರುಘಟ್ಟ ಕೆರೆ ಸೇರುತ್ತದೆ:
ಕಾಡನೂರು, ಕಾಡನೂರುಪಾಳ್ಯದ ಕೆರೆ, ಹೊನ್ನಾವರ ಕೆರೆ ಸೇರಿ ಅನೇಕ ಹಳ್ಳಿಗಳ ಸಣ್ಣಪುಟ್ಟ ಕೆರೆಗಳು ತುಂಬಿ ಕೋಡಿ ಹರಿದು ಬರುವ ನೀರು ಮಧುರೆ ಕೆರೆಗೆ ಸೇರಿ ಕೆರೆ ಒಡಲು ಭರ್ತಿಯಾಗಿದೆ,. ಇಲ್ಲಿ ಕೋಡಿ ಬಿದ್ದು ಮುಂದೆ ಬ್ಯಾತ ಕೆರೆ ಮೂಲಕ ಅರ್ಕಾವತಿ ನದಿ ಪಾತ್ರದ ಹೆಸರಘಟ್ಟ ಕೆರೆ ಸೇರುತ್ತದೆ. ಉತ್ತಮ ಮಳೆಯಾದರೆ ಮಧುರೆ ಕೆರೆಯಲ್ಲಿ ಜಲರಾಶಿಯೇ ತುಂಬಿ ತುಳುಕುತ್ತಿರುತ್ತದೆ. ದುರಾದೃಷ್ಟವಶಾತ್ ಅಭಿವೃದ್ಧಿಯಿಂದ ವಂಚಿತವಾದ ಕೆರೆಯಲ್ಲಿ ಜಲರಾಶಿಯೂ ಕಣ್ಮರೆಯಾಗಿದೆ.
ಅಕ್ರಮ ತಾಣವಾಗಲಿವೆ ದ್ವೀಪ:
ಕೆಲವು ವರ್ಷದ ಹಿಂದೆ ಕೆರೆಯ ನಾಲ್ಕೂ ದಿಕ್ಕಿನಲ್ಲಿ ಸಣ್ಣ ದ್ವೀಪಗಳನ್ನು ನಿರ್ಮಾಣ ಮಾಡಿ ದೋಣಿ ವಿಹಾರ ಆರಂಭಿಸುವ ಕಾಯಕಕ್ಕೆ ರೂಪುರೇಷೆ ಸಿದ್ದವಾಗಿತ್ತು. ಲಕ್ಷಾಂತರ ರೂ.ವೆಚ್ಚದಲ್ಲಿ ಕಾಮಗಾರಿ ಆರಂಭವಾದರೂ ಪೂರ್ಣಗೊಳ್ಳದೆ ಸ್ಥಗಿತಗೊಂಡಿತ್ತು. ಪ್ರಸ್ತುತ ಈ ಪ್ರದೇಶಗಳು ಜಾಲಿ ಮರಗಳಿಂದ ಆವೃತ್ತವಾಗಿದೆ, ಗಿಡಗಂಟಿಗಳು ಬೆಳೆದು ನಿಂತಿವೆ. ಕೆರೆಯಲ್ಲಿ ನೀರು ಬತ್ತಿಹೋಗುತ್ತಿರುವುದರಿಂದ ದ್ವೀಪ ಪ್ರದೇಶಗಳು ಅಕ್ರಮ ಚಟುವಟಿಕೆ ತಾಣಗಳಾಗಿ ಬದಲಾಗುತ್ತಿವೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮಧುರೆ ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ಈ ಸುಂದರಧಾಮ ಕಣ್ಣೆದುರೆ ಅವಸಾನಗೊಳ್ಳುತ್ತಿರುವುದು ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ.
ಪಕ್ಷಿ ಸಂಕುಲವೂ ಕಣ್ಮರೆ:
ಮಧುರ ಕೆರೆ ಇತಿಹಾಸ ಪ್ರಸಿದ್ಧವಾಗಿದ್ದು, ತರಹೇವಾರಿ ವಿದೇಶಿ ಹಕ್ಕಿಗಳು ಬಂದು ಹೋಗುವ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿಯೂ ಹೆಸರು ಪಡೆದಿದೆ. ಪ್ರತೀ ವರ್ಷ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ವಿದೇಶಿ ಹಕ್ಕಿಗಳು ಈ ಭಾಗಕ್ಕೆ ಬಂದು ಸಂತಾನೋತ್ಪತ್ತಿ ನಡೆಸಿ ಮರಿಗಳೊಂದಿಗೆ ಚಿಣ್ಣಾಟವಾಡುವ ದೃಶ್ಯ ಕಂಡುಬರುತ್ತದೆ. ಇದರ ವೀಕ್ಷಣೆಗೆ ಪಕ್ಷಿಪ್ರಿಯರ ದಂಡೆ ನೆರೆಯುತ್ತದೆ, ಆದರೆ ಇತ್ತೀಚಿಗೆ ಕೆರೆಯ ಸುತ್ತಲೂ ಗಿಡಗಂಟಿಗಳು ಬೆಳೆದು ಕೆರೆಯ ಇರುವಿಕೆಯೇ ಕಾಣದಂತಾಗಿದೆ. ಪಕ್ಷಿಗಳ ಕಲರವವೂ ಕಣ್ಮರೆಯಾಗುತ್ತಿದೆ.
ನೂರಾರು ಎಕರೆ ವಿಸ್ತೀರ್ಣದ ಕೆರೆ ಕಣ್ಣೆದುರೆ ಅವಸಾನಗೊಳ್ಳುತ್ತಿರುವುದನ್ನು ನೋಡುವುದು ಕಷ್ಟವಾಗುತ್ತಿದೆ. ದೊಡ್ಡಬಳ್ಳಾಪುರ ಸೇರಿ ಸುತ್ತಮುತ್ತಲ ಪ್ರದೇಶಗಳಿಂದ ಕೋಳಿ ತ್ಯಾಜ್ಯ ಹಾಗೂ ಪ್ರಾಣಿಜನ್ಯ ಕಸವನ್ನು ತಂದು ಕೆರೆಗೆ ಸುರಿಯಲಾಗುತ್ತಿದೆ. ದೇವಸ್ಥಾನದ ಪೂಜಾಸಾಮಗ್ರಿಗಳ ತ್ಯಾಜ್ಯವೂ ಕೆರೆ ಅಂಗಳ ಸೇರುತ್ತಿದೆ. ಪ್ರಮುಖ ಜಲಮೂಲವಾದ ಕೆರೆ ಕಸ ಸುರಿಯುವ ಡಂಪಿಂಗ್‌ಯಾರ್ಡ್ ಆಗುತ್ತಿರುವುದು ದುರಂತ.
ಶಶಿಕುಮಾರ್, ಮಧುರೆ ನಿವಾಸಿ
ಕೆರೆಯಲ್ಲಿ ಮೂರು ದ್ವೀಪಗಳನ್ನು ನಿರ್ಮಿಸಿ ಉದ್ಯಾನವ ಮೈದೆಳೆಯುವಂತೆ ಮಾಡುವುದು ಜತೆಗೆ ದೋಣಿವಿಹಾರಕ್ಕೆ ಅನುವು ಮಾಡಿಕೊಡುವುದು ಸೇರಿ ನಾನಾ ಅಭಿವೃದ್ಧಿ ಕನಸುಹೊತ್ತು ಕೆಲವು ವರ್ಷದ ಹಿಂದೆ ಜಿಲ್ಲಾಡಳಿತ ರೂಪುರೇಷೆ ಸಿದ್ದಪಡಿಸಿತ್ತು ನಂತರ ಎಲ್ಲವೂ ಅಲ್ಲಿಗೆ ನಿಂತುಹೋಯಿತು. ಕೆರೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಅಭಿವೃದ್ಧಿಗೆ ಗುರುತಿಸಿರುವ ಜಾಗ ಅಕ್ರಮ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತಿದೆ.
ಉಮೇಶ್, ದೊಡ್ಡಬಳ್ಳಾಪುರ