ಚನ್ನಾದೇವಿ ಅಗ್ರಹಾರ ಗ್ರಾಪಂ ವಿಶೇಷ ಸಭೆಯಲ್ಲಿ ಸಾರ್ವಜನಿಕರ ಅಳಲು 
ಬೆಂಗಳೂರು ಗ್ರಾಮಾಂತರ

ಗಾರಡಿಗರಪಾಳ್ಯದಲ್ಲಿ ನೂರೆಂಟು ಸಮಸ್ಯೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹೋಬಳಿಯ ಗಾರಡಿಗರಪಾಳ್ಯದಲ್ಲಿ 40-50 ವರ್ಷಗಳಿಂದ ವಾಸಿಸುತ್ತಿದ್ದರೂ ಇಲ್ಲಿ ಯಾವುದೇ ಮೂಲಸೌಕರ್ಯ ನೀಡುತ್ತಿಲ್ಲ ಎಂದು ಗಾರಡಿಗರ ಪಾಳ್ಯದಲ್ಲಿ ಹಮ್ಮಿಕೊಂಡಿದ್ದ ಚನ್ನಾದೇವಿ ಅಗ್ರಹಾರ ಗ್ರಾಪಂ ವಿಶೇಷ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗಾರಡಿಗರಪಾಳ್ಯದಲ್ಲಿ ಜನರಿಗೆ ಮುಖ್ಯವಾಗಿ ರಸ್ತೆ ಸೌಲಭ್ಯವಿಲ್ಲ, ಮಳೆ ಬಂದಾಗ ಓಡಾಡುವುದೇ ಕಷ್ಟವಾಗುತ್ತದೆ. ಶುದ್ದ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ಚರಂಡಿ ವ್ಯವಸ್ಥೆಯು ಇಲ್ಲ. ಇಲ್ಲಿನ ಮನೆಗಳಿಗೆ ಕಂದಾಯ ಈ ಹಿಂದೆ ಕಟ್ಟಿಸಿಕೊಳ್ಳಲಾಗುತ್ತಿತ್ತು. 4 ವರ್ಷ ದಿಂದ ಕಂದಾಯ ಕಟ್ಟಿಸಿಕೊಳ್ಳಲಾಗುತ್ತಿಲ್ಲ. ಸೊಳ್ಳೆ, ಹಾವು, ಹುಳುಗಳ ಕಾಟ ಇದೆ. ಸಾಕಷ್ಟು ರೀತಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಗ್ರಾಮಸ್ಥರು ಅಲವತ್ತುಗೊಂಡರು. ಈ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. ಇಲ್ಲಿ ಸ್ಮಶಾನಕ್ಕೂ ಜಾಗವಿಲ್ಲ. ಸಮಾಧಿಗಳನ್ನು ಅಗೆದು ಶವಗಳನ್ನು ಹೂಳಬೇಕಾದ ಸ್ಥಿತಿಯಿದೆ ಎಂದು ಅಳಲು ತೋಡಿಕೊಂಡರು.
ಅಂಬುಲೆನ್ಸ್ ಸೌಲಭ್ಯವಿಲ್ಲ:
ಗ್ರಾಮದಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ಇಲ್ಲಿನ ಕನಸವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳುತ್ತೇವೆ. ಆದರೆ ಇಲ್ಲಿ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ. ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ಹೋಗಲು ಆಂಬುಲೆನ್ಸ್ ವ್ಯವಸ್ಥೆಯಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಆರೋಗ್ಯ ಕೇಂದ್ರದ ವೈದ್ಯರು ಇಲ್ಲಿನ ರಾತ್ರಿ ವೇಳೆ ಪ್ರವಸಗಳಿಗೆ ಮಾತ್ರ ಅವಕಾಶವಿದೆ. 4 ತಿಂಗಳ ಹಿಂದೆ ಇಲ್ಲಿಗೆ ಅಂಬುಲೆನ್ಸ್ ನೀಡಲಾಗಿದೆ. ಆದರೆ ಅದರ ಉದ್ಘಾಟನೆ ಇನ್ನೂ ಆಗಿಲ್ಲ ಎಂದು ಪ್ರತಿಕ್ರಿಯಿಸಿದರು ಏತನ್ಯಧ್ಯೆ ನಮ್ಮಲ್ಲಿ ಅನೇಕರಿಗೆ ಆಧಾರ್, ರೇಷನ್‌ಕಾರ್ಡ್, ಜಾತಿ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರವೂ ಇಲ್ಲ ಎಂದು ಗ್ರಾಮಸ್ಥರು ಗ್ರಾಮಸಭೆಯಲ್ಲಿ ಮಾಹಿತಿ ನೀಡಿದರು.
ತಂದೆ ತಾಯಿಯಿಲ್ಲ, ಆಧಾರ್‌ಕಾರ್ಡ್ ಕೊಡಿ:
ವಿಶೇಷ ಗ್ರಾಮಸಭೆಯಲ್ಲಿ ಬಾಲಕಿ ಮಾತನಾಡಿ ನನಗೆ ತಂದೆ ತಾಯಿ ಇಲ್ಲ, ನನಗೆ ಆಧಾರ್‌ಕಾರ್ಡ್ ಸೇರಿ ಅಗತ್ಯ ದಾಖಲೆಗಳನ್ನು ಮಾಡಿಕೊಡಿ ಎಂದರು. ಇನ್ನೂ ಮತ್ತೊಬ್ಬ ವಿದ್ಯಾರ್ಥಿನಿ ನಮ್ಮ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಬೇಕು ಹಾಗೂ ಅದನ್ನು ಕಲಿಸುವ ಶಿಕ್ಷಕರನ್ನು ನೀಡಿ ನಮಗೂ ಕಂಪ್ಯೂಟರ್ ಕಲಿಯುವ ಆಸೆ ಎಂದು ಸಭೆಯಲ್ಲಿ ಮನವಿ ಮಾಡಿದಳು. ಮಳೆಬಂದರೆ ಗುಡಿಸಲು ಸೋರುವುದರಿಂದ ಪುಸ್ತಕವೆಲ್ಲಾ ಒದ್ದೆಯಾಗುತ್ತಿದೆ ಎಂದು ಮಕ್ಕಳು ಮನವಿ ಮಾಡಿದರು.
ಸರ್ಕಾರಕ್ಕೆ ಪ್ರಸ್ತಾವನೆ:
ಗ್ರಾಪಂನಿಂದ ಕಾಲಕಾಲಕ್ಕೆ ತೆರಿಗೆ ವಸೂಲಾತಿ ಮಾಡಲಾಗುತ್ತದೆ. ಸರ್ಕಾರಿ ,ಅರಣ್ಯ ಜಾಗಗಳಿಗೆ ಗ್ರಾಪಂ ತೆರಿಗೆ ವಸೂಲಾತಿ ಮಾಡಬಾರದು ಎಂಬ ಸೂಚನೆಯಿದೆ. ಗಾರಡಿಗರಪಾಳ್ಯದ ಸಂತೆ ತೋಪು ಸರ್ವೇ ನಂಬರ್ ಸರ್ಕಾರಿ ಗುಂಡುತೋಪುದ್ದರಿಂದ ಇಲ್ಲಿ ತೆರಿಗೆ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ತಿರುಪತಿ ಹೇಳಿದರು. ಈ ಜಾಗವನ್ನು ಇಲ್ಲಿ ವಾಸಕ್ಕೆ ಅಗತ್ಯವಾಗಿದೆ ಎಂದು ಗ್ರಾಮಸಭೆಯಲ್ಲಿ ಅನುಮೋದಿಸಿದರೆ ಅದನ್ನು ಮುಂದಿನ ಹಂತಕ್ಕೆ ಕಳುಹಿಸಲಾಗುತ್ತದೆ. ಇಲ್ಲಿನ ಗ್ರಾಮಸ್ಥರು ಒಪ್ಪಿದರೆ ಸಭೆಯಲ್ಲಿ ಸ್ಥಳಾಂತರಕ್ಕೆ ಅನುಮೋದನೆ ನೀಡಿದರೆ ಸ್ಥಳಾಂತರಕ್ಕೆ ಜಾಗವನ್ನು ಗುರುತಿಸಿ ಅಲ್ಲಿ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು.
ಸಮಸ್ಯೆಗಳನ್ನು ಏಕೆ ಬಗೆಹರಿಸಿಲ್ಲ?
ಇಲ್ಲಿನ ಜನರಿಗೆ 50 ವರ್ಷಗಳಿಂದ ಸಮಸ್ಯೆ ಇದ್ದರೂ ಅಧಿಕಾರಿಗಳು ಏಕೆ ಅದನ್ನು ಬಗೆಹರಿಸಿಲ್ಲ ಎಂದು ಯುವಸಂಚಲನ ಅಧ್ಯಕ್ಷ ಚಿದಾನಂದ ಮೂರ್ತಿ ಪ್ರಶ್ನಿಸಿದರು. ಮಕ್ಕಳ ಆಯೋಗ ಅಧ್ಯಕ್ಷರು ಸೂಚನೆ ನೀಡಿದರೂ ಗ್ರಾಮಸಭೆಯಲ್ಲಿ ಉನ್ನತ ಅಧಿಕಾರಿಗಳು ಭಾಗಿಯಾಗಿಲ್ಲ. ಮಕ್ಕಳ ಗ್ರಾಮ ಸಭೆಯಲ್ಲಿ ಹೇಳುವವರೆಗೂ ಅಧಿಕಾರಿಗಳ ಏಕೆ ಕ್ರಮವಹಿಸಿಲ್ಲ ಎಂದರು. ಇಲ್ಲಿನ ಜನರಿಗೆ ಬಾಲ್ಯವಿವಾಹ ಜಾಗೃತಿಯಿಲ್ಲ, ಕಾನೂನಿನ ಬಗ್ಗೆ ಜಾಗೃತಿ ಇಲ್ಲ. ಕಾಟಾಚಾರಕ್ಕೆ ಸಭೆ ನಡೆಸಬೇಡಿ ಎಂದರು.