ದೇವನಹಳ್ಳಿ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿರುವುದು.
ದೇವನಹಳ್ಳಿ: ಬೈಪಾಸ್ನಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಲಾರಿ ಚಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಉತ್ತರ ಪ್ರದೇಶ ಮೂಲದ ಕ್ಯಾಂಟರ್ ಖುಷ್ಕುಮಾರ್ (25) ಮೃತ. ಬೈಪಾಸ್ನಲ್ಲಿ ಮುಂದೆ ಸಾಗುತ್ತಿದ್ದ ಲಾರಿ ಏಕಾಏಕಿ ವೇಗ ತಗ್ಗಿಸಿದ್ದರಿಂದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಮುಂದಿನ ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕ್ಯಾಂಟರ್ ಕ್ಯಾಬಿನ್ ಸಂಪೂರ್ಣ ಜಖಂಗೊಂಡು ಚಾಲಕನ ದೇಹ ಕ್ಯಾಬಿನ್ನಲ್ಲಿ ಸಿಲುಕಿಕೊಂಡಿತ್ತು. ಕೈಕಾಲು ಸೇರಿ ದೇಹದ ಇತರ ಭಾಗಗಳಿಂದ ತೀವ್ರ ರಕ್ತಸ್ರಾವವಾಗಿತ್ತು. ಸ್ಥಳಿಯರು ಖುಷ್ಕುಮಾರ್ನನ್ನು ದೇವನಹಳ್ಳಿ ಅಕಾಶ್ ಆಸ್ಪತ್ರೆಗೆ ರವಾನಿಸಿದರಾದರೂ ಆತ ಅಸುನೀಗಿರುವುದಾಗಿ ವೈದ್ಯರು ತಿಳಿಸಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲಾರಿ ಸಹಿತ ಪರಾರಿ: ಮುಂದೆ ಸಾಗುತ್ತಿದ್ದ ಲಾರಿ ಚಾಲಕ ಅಪಘಾತದ ಬಳಿಕ ಲಾರಿ ಸಮೇತ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿದ್ದ ದೇವನಹಳ್ಳಿ ಸಂಚಾರಠಾಣೆ ಪೊಲೀಸರು ಹೆದ್ದಾರಿಯಲ್ಲಿನ ಸಿಸಿ ಟಿವಿ ಕ್ಯಾಮರಾ ಪರಿಶೀಲನೆ ಮಾಡಿದಾಗ ಲಾರಿಯ ಮಾಹಿತಿ ಸಿಕ್ಕಿದ್ದು, ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ. ದೇವನಹಳ್ಳಿ ಸಂಚಾರ ಠಾಣೆಯ ತನಿಖಾಧಿಕಾರಿ ಮುರಳೀಧರ ಹಾಗೂ ತನಿಖಾ ಸಹಾಯಕ ಇನ್ಸ್ಪೆಕ್ಟರ್ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.