ದಾಬಸ್ಪೇಟೆ : ಎಷ್ಟು ಕೊಟ್ಟೆ ಅನ್ನುವುದಕ್ಕಿಂತ ಏನು ಕೊಟ್ಟೆ ಅನ್ನುವುದು ಮುಖ್ಯ. ಯಾರಿಗೆ ಕೊಡಬೇಕು ಎಂಬುದನ್ನು ತಿಳಿದು ಸೇವೆ ಮಾಡಿದಾಗ ಅದು ಸಾರ್ಥಕವಾಗುತ್ತದೆ ಎಂದು ಜಿಲ್ಲಾ ರೋಟರಿ ಕ್ಲಬ್ ರವಿಶಂಕರ್ ಡಾಕೋಜು ಹೇಳಿದರು.
ರೋಟರಿ ಕ್ಲಬ್ ಆಫ್ ಸೋಂಪುರ ಆಶ್ರಯದಲ್ಲಿ ನರಸೀಪುರದ ಧರಿತ್ರಿ ಟ್ರಸ್ಟ್ನಲ್ಲಿ ಶುಕ್ರವಾರ ಆಯೋಜಿಸಿದ್ದ ಜಂಟಿ ಪ್ರಾಂತಪಾಲರ ಭೇಟಿ, ಶಾಲಾ ಮಕ್ಕಳಿಗೆ ಸೈಕಲ್, ಕನ್ನಡಕ ಹಾಗೂ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬರೂ ಸಂಪಾದನೆಯ ಅತ್ಯಲ್ಪ ಮೊತ್ತವನ್ನಾದರೂ ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ರವಿಶಂಕರ್ ಡಾಕೋಜು ಅವರು ಸುಮಾರು 500 ಕೋಟಿ ರೂ. ದಾನ, 1500 ಎಕರೆ ಪ್ರದೇಶದಲ್ಲಿ ಅರಣ್ಯ ಬೆಳೆಸುವ ಮಹತ್ತರ ಕಾರ್ಯ ಮಾಡಿರುವುದು ಮಾದರಿ. ಸರ್ಕಾರಗಳು ಮಾಡದ ಮಹಾನ್ ಕಾರ್ಯ ಮಾಡುತ್ತಿರುವ ಇವರು ನಮ್ಮ ಜಿಲ್ಲಾಧ್ಯಕ್ಷರು ಎಂದು ಸೋಂಪುರ ರೋಟರಿ ಅಧ್ಯಕ್ಷ ಶಶಿಧರ್ ಬಣ್ಣಿಸಿದರು. ಸೋಂಪುರ ಹೋಬಳಿಯ 20 ಜನ ಸರ್ಕಾರಿ ಶಾಲಾ ಶಿಕ್ಷಕರಿಗೆ ನೇಷನ್ ಬಿಲ್ಡ್ ಪ್ರಶಸ್ತಿ, 25 ಶಾಲಾ ಮಕ್ಕಳಿಗೆ ದಾನಿಗಳ ಸಹಾಯದಿಂದ ಉಚಿತವಾಗಿ ಸೈಕಲ್ ಹಾಗೂ ಕಣ್ಣಿನ ತೊಂದರೆ ಇದ್ದ 20 ಮಕ್ಕಳಿಗೆ ಉಚಿತ ಕನ್ನಡಕ ವಿತರಿಸಲಾಯಿತು.