Legal action if leave is not granted
ಶಿವರಾಜ ಎಂ ಬೆಂಗಳೂರು ಗ್ರಾಮಾಂತರ
ರಾಷ್ಟ್ರೀಯ ಸರ್ಕಾರಿ ರಜೆ ದಿನಗಳಂದು ದಬ್ಬಾಳಿಕೆ ಮೂಲಕ ಕಾರ್ಮಿಕರಿಗೆ ದುಡಿಯಲು ಹೇಳುವ ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಜತೆಗೆ ದೂರು ನೀಡಿದ ಕಾರ್ಮಿಕರ ಹೆಸರನ್ನು ಗೌಪ್ಯವಿಡಲಾಗುವುದು ಎಂದು ಜಿಲ್ಲಾ ಕಾರ್ಮಿಕ ಇಲಾಖೆ ತಿಳಿಸಿದೆ.
ಮೇ 1 ರ ಕಾರ್ಮಿಕ ದಿನಾಚರಣೆಯಂದು ಜಿಲ್ಲೆಯ ಹಲವು ಕೈಗಾರಿಕಾ ವಲಯಗಳಲ್ಲಿನ ಕೈಗಾರಿಕೆಗಳಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಪರಿಶೀಲನೆಗೆ ಮುಂದಾಗಿದೆ. ನೆಲಮಂಗಲ ತಾಲೂಕು ಸೋಂಪುರ ಕೈಗಾರಿಕಾ ವಲಯ, ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಹಾಗೂ ಹೊಸಕೋಟೆ ತಾಲೂಕು ಪಿಳ್ಳಂಗುಪ್ಪ ಕೈಗಾರಿಕಾ ವಲಯದಲ್ಲಿನ ಬಹಳಷ್ಟು ಕೈಗಾರಿಕೆಗಳಲ್ಲಿ ಕಾರ್ಮಿಕರ ದಿನಾಚರಣೆಯಂದು ರಜೆ ನೀಡಿದೆ ದುಡಿಸಿಕೊಳ್ಳಲಾಗಿದೆ ಈ ಬಗ್ಗೆ ಕಾರ್ಮಿಕರ ಇಲಾಖೆಗೆ ಯಾವುದೇ ಮಾಹಿತಿ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಮೇ 1 ಕಾರ್ಮಿಕ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮತ್ತಿತರ ರಾಷ್ಟ್ರೀಯ ಸರ್ಕಾರಿ ರಜಾ ದಿನಗಳಂದು ಅನಿವಾರ್ಯವಾಗಿ ಕೈಗಾರಿಕೆಗಳಲ್ಲಿ ಕಾರ್ಮಿಕರಿಂದ ದುಡಿಸಿಕೊಳ್ಳಬೇಕಾದರೆ ಅಂಥ ಕಾರ್ಮಿಕರಿಗೆ ಬದಲಿ ರಜೆ ನೀಡಬೇಕು ಅಥವಾ ಆ ದಿನದ ವೇತನ ದುಪ್ಪಟ್ಟು ನೀಡಬೇಕು ಎಂಬ ನಿಯಮವಿದೆ. ಆದರೆ ಬಹಳಷ್ಟು ಕೈಗಾರಿಕೆಗಳಲ್ಲಿ ಈ ನಿಯಮಗಳನ್ನು ಗಾಳಿಗೆ ತೂರಿ ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಕೆಲಸದಿಂದ ವಜಾಗೊಳಿಸುವ ಬೆದರಿಕೆ ಎದುರಿಸಬೇಕಾಗುತ್ತದೆ ಎಂಬುದು ಬಹಳಷ್ಟು ಕಾರ್ಮಿಕರ ಅಳಲಾಗಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಯಾರೂ ಕಾರ್ಮಿಕ ಇಲಾಖೆಗೆ ಅಧಿಕೃತವಾಗಿ ದೂರು ನೀಡಲು ಮುಂದಾಗುತ್ತಿಲ್ಲ ಇದನ್ನೇ ಬಂಡವಾಳ ಮಾಡಿಕೊಂಡ ಕಂಪನಿಗಳ ಆಡಳಿತ ಮಂಡಳಿ ಕಾರ್ಮಿಕರನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.
ಮೇ 1 ರ ಕಾರ್ಮಿಕ ದಿನಾಚರಣೆಯಂದು ಬಹಳಷ್ಟು ಕೈಗಾರಿಕೆಗಳಲ್ಲಿ ರಜೆ ನೀಡಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಜಿಲ್ಲಾ ಕಾರ್ಮಿಕ ಇಲಾಖೆ ಈ ಬಗ್ಗೆ ಅಧಿಕೃತ ದೂರು ಬಂದಲ್ಲಿ ತಕ್ಷಣವೇ ಕ್ರಮಕೈಗೊಳ್ಳುವ ಭರವಸೆ ನೀಡಿದೆ. ಅಲ್ಲದೆ ದೂರುದಾರರ ಗೌಪ್ಯತೆ ಕಾಪಾಡಲಾಗುವುದು. ಈ ಬಗ್ಗೆ ತಕ್ಷಣಕ್ಕೆ ಪೋನ್ ಕರೆ ಮಾಡಿದರೂ ಇಲಾಖೆ ಸಿಬ್ಬಂದಿ ಸ್ಪಂದಿಸಲಿದ್ದಾರೆ ಎಂದು ಭರವಸೆ ನೀಡಿದೆ.
ಸುಳ್ಳು ಮಾಹಿತಿ ವಿರುದ್ಧ ಕ್ರಮ:
ಕೆಲವು ಸಂದರ್ಭಗಳಲ್ಲಿ ಕಂಪನಿಗಳ ವಿರುದ್ಧ ಸುಳ್ಳು ದೂರುಗಳೂ ಬರುತ್ತವೆ. ಕೆಲವು ಕಾರ್ಮಿಕ ಮುಖಂಡರು ಕಂಪನಿಗಳ ವಿರುದ್ಧ ರಜೆ ವಿಷಯ ಸೇರಿ ಅನೇಕ ವಿಷಯಗಳಲ್ಲಿ ಸುಳ್ಳು ಮಾಹಿತಿ ನೀಡಿರುತ್ತಾರೆ. ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ ಈ ರೀತಿ ಸುಳ್ಳು ಮಾಹಿತಿ ನೀಡಿದರೆ ಅಂಥವರ ವಿರುದ್ಧವೂ ಕ್ರಮಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಮಲಕಗಳಲ್ಲಿ ಪ್ರದರ್ಶನ ಕಡ್ಡಾಯ:
ಈ ಮೊದಲು ರಾಷ್ಟ್ರೀಯ ರಜಾ ದಿನಗಳಂದು ಅನಿವಾರ್ಯವಾಗಿ ಕಾರ್ಮಿಕರನ್ನು ಬಳಸಿಕೊಳ್ಳಬೇಕಾದರೆ ಅಂಥ ಕಂಪನಿಗಳು ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಬೇಕಿತ್ತು. ಇದೀಗ ನಿಯಮವನ್ನು ಸರಳೀಕರಣಗೊಳಿಸಿದ್ದು, ಅಂಥ ದಿನಗಳಂದು ಕಂಪನಿ ಅಥವಾ ಕಾರ್ಖಾನೆಗಳು ವಿಷಯ ಪ್ರಸ್ತಾಪಿಸಿ ಅದನ್ನು ಅಲ್ಲಿನ ನಾಮಲಕಗಳಲ್ಲಿ ಅಳವಡಿಸುವ ನಿಯಮವಿದೆ. ಆದರೆ ಬಹಳಷ್ಟು ಕಂಪನಿಗಳು ಇವುಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ರಾಷ್ಟ್ರೀಯ ರಜಾ ದಿನಗಳಲ್ಲಿ ಕಾರ್ಮಿಕರಿಗೆ ರಜೆ ನೀಡದಿರುವುದು ಅಪರಾಧವಾಗಲಿದೆ. ಒಂದು ವೇಳೆ ದುಡಿಸಿಕೊಳ್ಳಲೆಬೇಕಾದ ಅನಿವಾರ್ಯತೆ ಇದ್ದರೆ ಬದಲಿ ರಜೆ ಅಥವಾ ದುಪ್ಪಟ್ಟು ವೇತನ ನೀಡಬೇಕು ಎಂಬ ನಿಯಮವಿದೆ ಜತೆಗೆ ಅದನ್ನು ನಾಮಲಕಗಳಲ್ಲಿ ಉಲ್ಲೇಖಿಸಬೇಕು. ಈ ನಿಯಮ ಮೀರಿದರೆ ಕಾನೂನು ಕ್ರಮ ಜರುಗಿಸಲಾಗುವುದು. ಈ ರೀತಿ ಕಂಡುಬಂದಲ್ಲಿ ಇಲಾಖೆಗೆ ದೂರು ನೀಡಿದರೆ ಕ್ರಮಕೈಗೊಳ್ಳಲಾಗುತ್ತದೆ ಜತೆಗೆ ದೂರುದಾರರ ಮಾಹಿತಿ ಗೌಪ್ಯವಿಡಲಾಗುತ್ತದೆ.
ಹರ್ಷವರ್ಧನ್, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಬೆಂ.ಗ್ರಾಮಾಂತರ