ಎಸ್‌ಟಿಪಿ ಸ್ಥಾಪನೆಗೆ ಕೊಡಲ್ಲ ಅನುದಾನ 
ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ಕೆರೆಗಳಿಗೆ ವಿಷಪ್ರಾಶನ

ಶಿವರಾಜ.ಎಂ
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಜಿಲ್ಲಿಯಲ್ಲಿ ದೊಡ್ಡ ಕೆರೆಗಳಲ್ಲಿ ಪ್ರಮುಖ ಎನಿಸಿರುವ ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿನ ದೊಡ್ಡತುಮಕೂರು ಕೆರೆ ಹಾಗೂ ಚಿಕ್ಕತುಮಕೂರು ಕೆರೆಗಳಿಗೆ ಕಲುಷಿತ ನೀರಿನ ಕಂಟಕ ಎದುರಾಗಿದೆ. ತ್ಯಾಜ್ಯ ಸಂಸ್ಕರಣಾ ಘಟಕ (ಎಸ್‌ಟಿಪಿ) ಸ್ಥಾಪನೆಗೆ ಅನುದಾನ ನೀಡಲು ಸರ್ಕಾರ ಮೀನಮೇಷ ಎಣಿಸುತ್ತಿದ್ದು ಜಲಮೂಲದ ಅಪೋಷಣೆಗೆ ಕಾರಣವಾಗುತ್ತಿದೆ.
ದೊಡ್ಡಬಳ್ಳಾಪುರ ನಗರದ ತ್ಯಾಜ್ಯ ನೀರು, ಭಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ರಾಸಾಯನಿಕಯುಕ್ತ ತ್ಯಾಜ್ಯದ ನೀರು ನೇರವಾಗಿ ಕೆರೆ ಒಡಲಿಗೆ ಸೇರ್ಪಡೆಯಾಗುತ್ತಿದ್ದು ಪ್ರಮುಖ ಜಲಮೂಲಗಳಿಗೆ ವಿಷವುಣಿಸುವಂತಾಗಿದೆ. ಸುಮಾರು 320 ಎಕರೆ ವಿಸ್ತೀರ್ಣದ ದೊಡ್ಡತುಮಕೂರು ಕೆರೆ ಹಾಗೂ 80 ಎಕರೆಯಷ್ಟು ವಿಸ್ತಾರವಾಗಿರುವ ಚಿಕ್ಕತುಮಕೂರು ಕೆರೆಗಳಿಗೆ ದಶಕಗಳಿಂದಲೂ ಇದೇ ಪರಿಸ್ಥಿತಿ ಎದುರಾಗಿದ್ದರೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ ಎಂಬ ಆಕ್ರೋಶ ಕೇಳಿಬರುತ್ತಿದೆ.
ಕೊಳವೆಬಾವಿಗಳು ಯೋಗ್ಯವಲ್ಲ:
ದಿನೆ ದಿನೇ ತ್ಯಾಜ್ಯ ನೀರಿನ ಹರಿವು ಹೆಚ್ಚಾಗತೊಡಗಿದ್ದು ಈಭಾಗದ ಅಂತರ್ಜಲವೂ ಕಲುಷಿತಗೊಳ್ಳುತ್ತಿದೆ. ಈ ಭಾಗದಲ್ಲಿನ ಕೊಳವೆಬಾವಿಗಳಲ್ಲಿನ ನೀರು ಕುಡಿಯಲು ಯೋಗ್ಯವಲ್ಲ ಎಂಬಂತಾಗಿದೆ. ಶುದ್ಧ ನೀರಿನ ಘಟಕದಲ್ಲಿನ ನೀರು ಸೇವಿಸಲೂ ಹೆದರುವಂತಾಗಿದೆ. ಭವಿಷ್ಯದಲ್ಲಿ ಈ ಭಾಗದ ಗ್ರಾಮಗಳಲ್ಲಿ ಜನಜೀವನವೇ ನಾಶವಾಗಲಿದೆ ಎಂದು ಗ್ರಾಮಸ್ಥರು ಅತಂಕ ವ್ಯಕ್ತಪಡಿಸುತ್ತಿದ್ದಾರೆ.
ಶುದ್ಧ ನೀರಿಗೆ ತ್ಯಾಜ್ಯದ ವಿಷಪ್ರಾಶನ:
ನಂದಿ ಬೆಟ್ಟಗಳಲ್ಲಿ ಹುಟ್ಟುವ ಅರ್ಕಾವತಿ ನದಿಯ ನೀರು ದೊಡ್ಡಬಳ್ಳಾಪುರಕ್ಕೆ ಹರಿಯುವ ವೇಳೆ ಶುದ್ಧವಾಗಿಯೇ ಇರುತ್ತದೆ ಆದರೆ ದೊಡ್ಡಬಳ್ಳಾಪುರ ಕೆರೆಗೆ ಸೇರುತ್ತಿದ್ದಂತೆ ಕೈಗಾರಿಕಾ ತ್ಯಾಜ್ಯ ಮತ್ತು ದೊಡ್ಡಬಳ್ಳಾಪುರ ನಗರದ ತ್ಯಾಜ್ಯ ನೀರಿನೊಂದಿಗೆ ಬೆರೆತು ಕಲುಷಿತಗೊಳ್ಳುತ್ತದೆ ಅದೇ ನೀರು ಚಿಕ್ಕತುಮಕೂರು ನಂತರ ದೊಡ್ಡತುಮಕೂರು ಜಲಮೂಲಗಳಿಗೆ ಸೇರ್ಪಡೆಯಾಗುತ್ತದೆ ಹರಿಯುತ್ತದೆ, ಇದೇ ನೀರು ಮುಂದಕ್ಕೆ ರಾಜಧಾನಿ ಬೆಂಗಳೂರು ತಲುಪುತ್ತದೆ ಎಂಬುದು ದೊಡ್ಡಬಳ್ಳಾಪುರದ ಪರಿಸರ ಪ್ರೇಮಿಗಳ ಆತಂಕವಾಗಿದೆ.
ರೋಗಗಳಿಗೆ ದಾರಿ: ಈ ಭಾಗದ ಗ್ರಾಮಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಅನೇಕ ಜನರು ವಿವಿಧ ಕಾಯಿಲೆಗಳಿಂದ ಬಳಲುವಂತಾಗಿದೆ. ಅಂಗಾಂಗ ವೈಲ್ಯದಂತ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎಂಬ ಮಾತು ಕೇಳಿಬರುತ್ತಿದೆ. ಇದರೊಂದಿಗೆ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೈನುಗಾರಿಕೆಗೂ ಹೊಡೆತ ಬಿದ್ದಿದ್ದು, ಗ್ರಾಮಸ್ಥರು ಕಂಗಾಲಾಗುವಂತಾಗಿದೆ.
ಅನುದಾನ ಲಭ್ಯತೆ ಮೇಲೆ ಹಣ: ಕೆರೆಗಳ ರಕ್ಷಣೆಗೆ ಅರ್ಕಾವತಿ ನದಿ ರಕ್ಷಣೆ ಹೋರಾಟಗಾರರ ಜತೆ ಕೈಗೂಡಿಸಿರುವ ಸ್ಥಳೀಯ ಶಾಸಕ ಧೀರಜ್‌ಮುನಿರಾಜು ಹಲವು ಬಾರಿ ಸರ್ಕಾರದ ಕಿವಿಹಿಂಡುವ ಕೆಲಸ ಮಾಡಿದ್ದಾರೆ. ಈ ಭಾಗದಲ್ಲಿ ಎಸ್‌ಟಿಪಿ ಸ್ಥಾಪನೆಗೆ ಸುಮಾರು 56 ಕೋಟಿ ರೂ.ವೆಚ್ಚದ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಸರ್ಕಾರ ಇದ್ಯಾವುದಕ್ಕೂ ಗಮನ ನೀಡುತ್ತಿಲ್ಲ. ಅನುದಾನದ ಲಭ್ಯತೆ ಮೇರೆಗೆ ಹಣ ನೀಡುವುದಾಗಿ ಜಾರಿಕೊಳ್ಳುವ ಕೆಲಸ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ದೊಡ್ಡತುಮಕೂರು ಮತ್ತು ಚಿಕ್ಕತುಮಕೂರು ಕೆರೆಗಳಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಜತೆಗೆ ಪೂರ್ಣ ಪ್ರಮಾಣದ ಎಸ್‌ಟಿಪಿ ಸ್ಥಾಪನೆಗೆ ದಶಕಗಳಿಂದಲೂ ಹೋರಾಟ ನಡೆಸುತ್ತಾ ಬಂದಿದ್ದೇವೆ ಪಟ್ಟಣದ ತ್ಯಾಜ್ಯ ನೀರು ಜತೆಗೆ ಕೈಗಾರಿಕೆಗಳ ರಾಸಾಯನಿಕಯುಕ್ತ ನೀರು ನೇರವಾಗಿ ಕೆರೆಗೆ ಸೇರುತ್ತಿವೆ ಇದು ಜನರ ಪ್ರಾಣಕ್ಕೆ ಕಂಟಕವಾಗಲಿದೆ. ದೊಡ್ಡಬಳ್ಳಾಪುರದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಇದ್ದರೂ ನಾಮಕೇವಾಸ್ತೆ ಎಂಬಂತಾಗಿದೆ.
ವಸಂತ್, ಅರ್ಕಾವತಿ ನದಿ ಹೋರಾಟ ಸಮಿತಿ ಸದಸ್ಯ
ಕೈಗಾರಿಕೆಗಳ ರಾಸಾಯನಿಕಯುಕ್ತ ಕಲುಷಿತ ನೀರು ವೈಜ್ಞಾನಿಕವಾಗಿ ಸಂಸ್ಕರಣೆಯಾಗದೆ ನೇರವಾಗಿ ಕೆರೆಗಳಿಗೆ ಸೇರುತ್ತಿರುವುದರಿಂದ ಪ್ರಮುಖ ಜಲಮೂಲಗಳು ಕಲುಷಿತಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಎಸ್‌ಟಿಪಿ ಸ್ಥಾಪಿಸಿ ವೈಜ್ಞಾನಿಕವಾಗಿ ಸಂಸ್ಕರಣೆಯಾಗಬೇಕು ಎಂಬ ಉದ್ದೇಶದಿಂದ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಆದರೆ ಅನುದಾನದ ಕೊರತೆ ನೆಪದಲ್ಲಿ ಇದುವರೆಗೆ ಈ ಯೋಜನೆ ಸಾಕಾರಗೊಂಡಿಲ್ಲ. ಈ ಬಗ್ಗೆ ಹೋರಾಟ ಮುಂದುವರೆಯಲಿದೆ.
ಧೀರಜ್‌ಮುನಿರಾಜು, ಶಾಸಕ ದೊಡ್ಡಬಳ್ಳಾಪುರ