ladies officers 
ಬೆಂಗಳೂರು ಗ್ರಾಮಾಂತರ

ಗ್ರಾಮಾಂತರ ಜಿಲ್ಲಾಡಳಿತದಲ್ಲಿ ಸೀಶಕ್ತಿ

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಇದೀಗ ಮಹಿಳಾ ಅಧಿಕಾರಿಗಳ ಸುಪರ್ದಿಯಲ್ಲಿದೆ, ಪ್ರಮುಖ ಆಯಕಟ್ಟಿನ ಜಾಗಗಳಲ್ಲಿ ಮಹಿಳಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಮುಖವಾಗಿ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಹುದ್ದೆಗಳನ್ನು ಮಹಿಳೆಯರೇ ಅಲಂಕರಿಸಿರುವುದು ವಿಶೇಷ.
ಈ ಹಿಂದೆ ಜಿಪಂ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಡಾ.ಕೆ.ಎನ್.ಅನುರಾಧಾ ಇದೀಗ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಜಾಗಕ್ಕೆ ಡಾ.ವಾಸಂತಿ ಅಮರ್ ಬಂದಿದ್ದಾರೆ. ಇನ್ನು ಅಪರ ಜಿಲ್ಲಾಧಿಕಾರಿ ಹುದ್ದೆಯನ್ನು ಸೈಯಿದಾ ಆಯಿಷಾ ನಿರ್ವಹಿಸುತ್ತಿದ್ದಾರೆ. ಇದರ ಜತೆಗೆ ಜಿಲ್ಲಾಡಳಿತದ ಸುಮಾರು ಇಲಾಖೆಗಳ ಪ್ರಮುಖ ಹುದ್ದೆಗಳನ್ನು ಮಹಿಳೆಯರೇ ನಿರ್ವಹಿಸುತ್ತಿರುವುದು ವಿಶೇಷವಾಗಿದೆ.
ಇತರೆ ಇಲಾಖೆಗಳಲ್ಲೂ ಮಹಿಳಾ ಅಧಿಕಾರಿಗಳು:
ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯಲ್ಲಿ ಜಯಶ್ರೀ ಹೆಂಡೆಗಾರ, ಖಜಾನೆ ಇಲಾಖೆಯಲ್ಲಿ ಪ್ರಭಾವತಿ, ಕೃಷಿ ಮಾರಾಟ ಇಲಾಖೆಯಲ್ಲಿ ರುಬಿತಾಖಾನ್, ಜಿಲ್ಲಾ ಅಂತರ್ಜಲ ಇಲಾಖೆಯಲ್ಲಿ ಜಾನಕಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಪಲ್ಲವಿ, ಕೃಷಿ ಇಲಾಖೆಯಲ್ಲಿ ಕಲಾವತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಲ್ಪನಾ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರೇಮಾ, ಪ್ರವಾಸೋದ್ಯಮ ಇಲಾಖೆ ಡಿಡಿಯಾಗಿ ಪ್ರೀತಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಸರೋಜಾ ಹೀಗೆ ಹಲವು ಇಲಾಖೆಗಳಲ್ಲಿ ಜಂಟಿ ನಿರ್ದೇಶಕಿ, ಉಪನಿರ್ದೇಶಕಿಯಾಗಿ ಮಹಿಳೆಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 32 ಇಲಾಖೆಗಳಲ್ಲಿ 10ಕ್ಕೂ ಹೆಚ್ಚು ಇಲಾಖೆಗಳ ಪ್ರಮುಖ ಹುದ್ದೆಗಳು ಮಹಿಳೆಯರ ಕೈಯಲ್ಲಿವೆ, ಇದರ ಜತೆಗೆ ಜಿಲ್ಲಾಡಳಿತ ಆಧಾರಸ್ಥಂಭವಾಗಿರುವ ಡಿಸಿ, ಎಡಿಸಿ ಹಾಗೂ ಸಿಇಒ ಹುದ್ದೆಗಳು ಮಹಿಳಾ ಅಧಿಕಾರಿಗಳ ಕೈಯಲ್ಲಿರುವುದು ಗ್ರಾಮಾಂತರ ಜಿಲ್ಲಾಡಳಿತದ ಪ್ರಸಕ್ತ ಸಾಲಿನ ವಿಶೇಷ ಎನಿಸಿದೆ.
ಗುತ್ತಿಗೆ ನೌಕರರು ಹೆಚ್ಚು:
ಇನ್ನೂ ಜಿಲ್ಲಾಡಳಿತಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಇಲಾಖೆ ಹಾಗೂ ಜಿಪಂ ವ್ಯಾಪ್ತಿಯ ಕಚೇರಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಪೈಕಿ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ, ಟೈಪಿಸ್ಟ್ ಸೇರಿ ಹಲವು ಹುದ್ದೆಗಳನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಜಿಲ್ಲಾಡಳಿತ ಭವನದ ಪ್ರತಿ ಕಚೇರಿಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಯರನ್ನು ಕಾಣಬಹುದಾಗಿದೆ.
ಆಡಳಿತದಲ್ಲಿ ಚುರುಕು:
ಇದೇ ಜಿಲ್ಲೆಯ ಜಿಪಂ ಸಿಇಒ ಆಗಿ ಕರ್ತವ್ಯ ನಿರ್ವಹಿಸಿದ ಅನುಭವವಿರುವ ಡಾ.ಕೆ.ಎನ್.ಅನುರಾಧಾ ಜಿಲ್ಲಾಧಿಕಾರಿಯಾಗಿಯೂ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಜಿಲ್ಲಾಡಳಿತಭವನದಲ್ಲಿ ಅಧಿಕಾರಿ ವರ್ಗವನ್ನು ಎಚ್ಚರಗೊಳಿಸುವ ನಿಟ್ಟಿನಲ್ಲಿ ಇಲಾಖೆಗಳಿಗೆ ದಿಢೀರ್ ಭೇಟಿ ನೀಡುವುದು, ವಸ್ತುಸ್ಥಿತಿಯ ರಿಯಾಲಿಟಿ ಚೆಕ್ ಮಾಡುವುದು ಮತ್ತಿತರ ಕೆಲಸಗಳ ಮೂಲಕ ಆಡಳಿತ ಯಂತ್ರ ಚುರುಕುಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಇದೇ ರೀತಿಯಾಗಿ ಜಿಪಂ ಸಿಇಒ ಡಾ.ವಾಸಂತಿ ಅಮರ್ ಅಧಿಕಾರವಹಿಸಕೊಂಡ ದಿನದಿಂದಲೂ ಪ್ರತಿ ಪಂಚಾಯಿತಿಗಳಿಗೆ ದಿಢೀರ್ ಭೇಟಿ ನೀಡುವುದು ಕಾಮಗಾರಿಗಳನ್ನು ಪರಿಶೀಲಿಸುವ ಕೆಲಸವನ್ನು ಜಾಲ್ತಿಯಲ್ಲಿಟ್ಟಿದ್ದಾರೆ. ಇದೇ ರೀತಿ ಜಿಲ್ಲಾಧಿಕಾರಿಗೆ ಸಪೋರ್ಟ್ ಆಗಿ ಎಡಿಸಿ ಸೈಯಿದಾ ಆಯಿಷಾ ಸಹ ಉತ್ತಮ ಹೆಸರುಗಳಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಕೇಳಿಬರುತ್ತಿದೆ.
ಶಿಶುಪಾಲನ ಕೇಂದ್ರ ಸಹಕಾರಿ:
ಕಳೆದ ನಾಲ್ಕೈದು ವರ್ಷದ ಹಿಂದೆ ಜಿಲ್ಲಾಡಳಿತಭವನ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿದ ಶಿಶುಪಾಲನ ಕೇಂದ್ರ ಮಹಿಳಾ ಸಿಬ್ಬಂದಿಗೆ ವರದಾನವಾಗಿದೆ. ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗುವಾಗ ತಮ್ಮ ಮಕ್ಕಳನ್ನು ಶಿಶುಪಾಲನಾ ಕೇಂದ್ರದಲ್ಲಿ ಬಿಟ್ಟು ಮತ್ತೆ ಮನೆಗೆ ಹೊರಡುವ ವೇಳೆ ಮಕ್ಕಳನ್ನು ಕರೆದೊಯ್ಯಲು ಸಹಕಾರಿಯಾಗಿದೆ. ಇದರಿಂದ ಮಹಿಳಾ ಸಿಬ್ಬಂದಿ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ ಎಂಬ ಮಾತು ಕೇಳಿಬರುತ್ತಿದೆ.