ಎಡಿಸಿ ಸೈಯಿದಾ ಆಯಿಷಾ ಗುಣಗಾನ 
ಬೆಂಗಳೂರು ಗ್ರಾಮಾಂತರ

ಕನ್ನಡದ ಕಂಪನ್ನು ಪಸರಿಸಿದ ಕವಿ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸಾಹಿತಿ, ಸಮಾಜ ಸುಧಾರಕ, ದಾರ್ಶನಿಕ ಕವಿ ಕುವೆಂಪು ಅವರು ಕನ್ನಡದ ಕಂಪನ್ನು ವಿಶ್ವಕ್ಕೆ ಪಸರಿಸಿದ ಮಹಾನ್ ನಾಯಕರಾಗಿದ್ದರು, ಅವರ ಸಾಹಿತ್ಯ ನಮಗೆ ಸದಾ ದಾರಿದೀಪ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಗುಣಗಾನ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಕುವೆಂಪು ಅವರ ಸಾಹಿತ್ಯ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ, ರಾಷ್ಟ್ರದಾದ್ಯಂತ ಅವರ ಸಾಹಿತ್ಯ ಪಸರಿಸಿದೆ. ಕನ್ನಡ ಸಾಹಿತ್ಯಕ್ಕೆ, ಸಮಾಜ ಸುಧಾರಣೆಗೆ, ಜಾತ್ಯತೀತ ವ್ಯವಸ್ಥೆಗೆ ಅವರ ಕೊಡುಗೆ ಅಪಾರವಾದದ್ದು ಎಂದರು. ಇಡೀ ಜಗತ್ತಿಗೆ ವಿಶ್ವ ಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯದ ಪರಿಕಲ್ಪನೆಗಳನ್ನು ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಪುಸ್ತಕಗಳನ್ನು ಓದಬೇಕು:
ರಾಷ್ಟ್ರಕವಿ ಕುವೆಂಪು ಅವರ ಪುಸ್ತಕಗಳನ್ನು ಓದಬೇಕು,ಅವರ ಕಾವ್ಯಗಳಲ್ಲಿರುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಇದರಿಂದ ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಸಹಾಯವಾಗಲಿದೆ ಎಂದು ಎಡಿಸಿ ತಿಳಿಸಿದರು.