ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಭಾಗಶಃ ಬಂಡೆಗಳಿಂದ ಆವೃತ್ತವಾಗಿರುವ ಜಿಲ್ಲೆಯಲ್ಲಿನ ಏಕೈಕ ಏಕಶಿಲಾ ಬೆಟ್ಟ ಎನಿಸಿರುವ ಕುಂದಾಣ ಬೆಟ್ಟ ಚಾರಣಿಗರ ಆಸಕ್ತಿದಾಯದ ತಾಣವಾಗಿ ಗುರುತಿಸಿಕೊಂಡಿದೆ.
ದೇವನಹಳ್ಳಿ ತಾಲೂಕಿನ ಪಶ್ಚಿಮ ಭಾಗದಲ್ಲಿರುವ ಈ ಏಕಶಿಲಾ ಬೆಟ್ಟವು ನೋಡಲು ಅಳಿಲಿನ ಆಕಾರದಲ್ಲಿದ್ದು, 61 ಮೀಟರ್ ಎತ್ತರವಾಗಿದೆ, ಸುಮಾರು 100 ಮೀಟರ್ ಉದ್ದ ಮತ್ತು 50 ಮೀಟರ್ ಅಗಲವಿದ್ದು ಬಂಡೆಗಳಿಂದ ಆವೃತ್ತವಾಗಿರುವ ಈ ತಾಣ ಪ್ರವಾಸಿಗರ ಪಿಕ್‌ನಿಕ್ ಸ್ಪಾಟ್ ಆಗಿಯೂ ಗಮನ ಸೆಳೆಯುತ್ತಿದೆ.ಗ್ರಾಮಾಂತರ ಜಿಲ್ಲೆ ಸೇರಿ ನೆರೆಯ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಸುತ್ತಮುತ್ತಲಿನ ಜಿಲ್ಲೆಗಳ ಚಾರಣಿಗರ ೆವರೇಟ್ ಕುಂದಾಣ ಹೋಬಳಿಯಲ್ಲಿನ ಕುಂದಾಣ ಏಕಶಿಲಾ ಬೆಟ್ಟ ಜಿಲ್ಲೆಯ ಪ್ರಮುಖ ಪ್ರವಾಸಿತಾಣವಾಗಿ ಗಮನ ಸೆಳೆಯುತ್ತಿದೆ. ಈ ಹಿಂದೆ ನಿರೀಕ್ಷಿತ ಕಾಯಕಲ್ಪವಿಲ್ಲದೆ ತೆರೆಮರೆಗೆ ಸರಿದಿದ್ದ ಈ ತಾಣ ಕಳೆದ ವರ್ಷ ಪ್ರವಾಸೋದ್ಯಮದ ಕೃಪೆಗೆ ಪಾತ್ರವಾಗಿ ಒಂದಿಷ್ಟು ಅಭಿವೃದ್ಧಿ ಕಾರ್ಯಗಳನ್ನು ಕಂಡ ಬಳಿಕ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸುವಂತಾಗಿದೆ.
ಬೆಟ್ಟದ ಪೂರ್ವ ಭಾಗದಲ್ಲಿ ಇಳಿಜಾರು ದಾರಿಯಿದ್ದು, ನಾಲ್ಕು ಕಲ್ಲಿನ ಕಂಬದೊಂದಿಗೆ ಪ್ರವೇಶ ದ್ವಾರವಿದೆ. ಶತಮಾನಗಳ ಕಾಲದ ಚನ್ನರಾಯಸ್ವಾಮಿ ದೇವಾಲಯ ಹಾಗೂ ಆಂಜನೇಯಸ್ವಾಮಿ ದೇವಾಲಯಗಳು ಇವೆ. ಕುಂದಾಣ 13 ನೇ ಶತಮಾನದ ಅಂತ್ಯಭಾಗದಲ್ಲಿ ಹೊಯ್ಸಳ ರಾಮನಾಥನ ರಾಜಧಾನಿಯಾಗಿತ್ತು ಎಂಬ ಐತಿಹ್ಯವಿದೆ. ಪ್ರಸ್ತುತ ಎರಡೂ ದೇಗುಲಗಳಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತದೆ ಜಾತ್ರೆಯಲ್ಲಿ ಸಾವಿರಾರು ಮಂದಿ ಸೇರುತ್ತಾರೆ. ವಾರಾಂತ್ಯದಲ್ಲಿ ಪ್ರವಾಸಿಗರು ಭೇಟಿ ನೀಡುವ ಮೆಚ್ಚಿನ ಪ್ರವಾಸಿ ತಾಣವಾಗಿದೆ. ಏಕಶಿಲಾ ಬೆಟ್ಟವಾದ ಈ ಸ್ಥಳದಲ್ಲಿ ನಿಂತರೆ ಸುತ್ತಲಿನ ಪ್ರಕೃತಿ ವೀಕ್ಷಣೆಯ ಮೋಜು ಮಾಡಬಹುದು. ಮತ್ತೊಂದು ಕಡೆ ಕ್ರಿ.ಶ. 1537ರಲ್ಲಿ ಯಲಹಂಕ ನಾಡಿನ ದೊರೆ ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಆದೇಶದ ಮೇರೆಗೆ ಬೆಂಗಳೂರಿನ ನಿರ್ಮಾಣವನ್ನು ಪ್ರಾರಂಭಿಸಿದರು ಎಂಬ ಇತಿಹಾಸವಿದೆ. ಕುಂದಾಣ ಬೆಟ್ಟವು ಆಗ ಆಡಳಿತ ಮತ್ತು ಸೇನಾ ನೆಲೆಯಾಗಿತ್ತು. ಈ ಸ್ಥಳವು ಕಲ್ಲಿನ ಬೆಟ್ಟದ ಮೇಲೆ ನೆಲೆಗೊಂಡಿದ್ದು, ಸುತ್ತಮುತ್ತಲಿನ ಪ್ರಕೃತಿ ವೀಕ್ಷಿಸಲು ಅತ್ಯಂತ ಸೂಕ್ತವಾಗಿದೆ. ಬೆಟ್ಟದ ಮೇಲಕ್ಕೆ ಹೋಗಲು ರಸ್ತೆ ಮಾರ್ಗವಿದೆ. ಬೆಟ್ಟದ ಮೇಲಿರುವ ದೇವಸ್ಥಾನದ ಮುಂದೆ ಸುಮಾರು 15 ಅಡಿ ಎತ್ತರದ ಪುರಾತನ ಕಂಬವೊಂದನ್ನು ನಿರ್ಮಿಸಲಾಗಿದೆ. ಬೆಟ್ಟದ ಮೇಲೊಂದು ಸಣ್ಣ ನೀರಿನ ಕೊಳವೂ ಇದೆ.
ದೇವನಹಳ್ಳಿ ತಾಲೂಕಿನಲ್ಲಿರುವ ಕುಂದಾಣ ಏಕಶಿಲಾ ಬೆಟ್ಟವು ಪ್ರವಾಸಿಗರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿದೆ. ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೆಲವೊಂದು ಅಭಿವೃದ್ಧಿ ಕಾಮಗಾರಿಯಿಂದಾಗಿ ಮತ್ತಷ್ಟು ಆಕರ್ಷಣೀಯವಾಗಿರುವ ಬೆಟ್ಟ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿ ಮುನ್ನೆಲೆಗೆ ಬಂದಿದೆ. ವಾರಾಂತ್ಯಗಳಲ್ಲಿ ನೂರಾರು ಪ್ರವಾಸಿಗರು ಪಿಕ್‌ನಿಕ್‌ಗಾಗಿ ಬರುತ್ತಾರೆ. ಬೆಟ್ಟದ ಮೇಲಿನ ದೇವಸ್ಥಾನಗಳಿಗೆ ಸಾವಿರಾರು ವರ್ಷದ ಇತಿಹಾಸವಿದೆ.
ಪ್ರೀತಿ, ಉಪನಿರ್ದೇಶಕಿ ಪ್ರವಾಸೋದ್ಯಮ ಇಲಾಖೆ ಬೆಂ.ಗ್ರಾಮಾಂತರ
ಬೆಂಗಳೂರಿನಿಂದ 41 ಕಿ.ಮೀ ಅಂತರದಲ್ಲಿ ಕುಂದಾಣ ಬೆಟ್ಟವಿದೆ, ದೇವನಹಳ್ಳಿಯಿಂದ 11 ಕಿ.ಮೀ ಅಂತರದಲ್ಲಿ ಬೆಟ್ಟ ತಲುಪಬಹುದು. ಕುಂದಾಣ ಗ್ರಾಮದಿಂದ ಕೇವಲ 1.4 ಕಿ.ಮೀ ದೂರದಲ್ಲಿ ಬೆಟ್ಟ ಎದುರುಗೊಳ್ಳುತ್ತದೆ. ದೇವನಹಳ್ಳಿಯ ಗ್ರಾಮಾಂತರ ಜಿಲ್ಲಾಡಳಿಭವನದ ಎದುರಿನ ದಾರಿಯಲ್ಲಿ ಸಾಗಿದರೆ ಕೇವಲ 2.3 ಕಿ.ಮೀ ದೂರದಲ್ಲಿ ಬೆಟ್ಟವನ್ನು ಸಮೀಪಿಸಬಹುದು. ಬೆಟ್ಟಕ್ಕೆ ನೇರವಾಗಿ ಬಸ್‌ಗಳ ಸೌಲಭ್ಯವಿಲ್ಲ. ದೇವನಹಳ್ಳಿ ಅಥವಾ ಕುಂದಾಣದಲ್ಲಿನ ಡಿಸಿ ಕಚೇರಿ ಸಮೀಪದವರೆಗೆ ಬಸ್‌ಗಳ ಸೌಕರ್ಯವಿದೆ. ಅಲ್ಲಿಂದ ಸ್ಥಳೀಯ ವಾಹನಗಳಲ್ಲಿ ತಲುಪಬಹುದು. ಇಲ್ಲವೆ ಸ್ವಂತ ವಾಹನಗಳಲ್ಲಿ ತೆರಳಲು ಉತ್ತಮ ರಸ್ತೆಯ ಸೌಲಭ್ಯವಿದೆ.