kempegowda-jayanti 
ಬೆಂಗಳೂರು ಗ್ರಾಮಾಂತರ

ಕೆಂಪೇಗೌಡ ಜ್ಯೋತಿ ಜಿಲ್ಲೆಯ ಗರಿಮೆ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನಾಡಪ್ರಭು ಕೆಂಪೇಗೌಡರ ಮೂಲ ಸ್ಥಳವಾದ ದೇವನಹಳ್ಳಿ ತಾಲೂಕಿನ ಆವತಿಯಿಂದ ರಾಜ್ಯಮಟ್ಟದ ಕಾರ್ಯಕ್ರಮಕ್ಕೆ ಪುರಜ್ಯೋತಿ ಹೋಗುತ್ತಿರುವುದು ಗ್ರಾಮಾಂತರ ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ದೇವನಹಳ್ಳಿಯ ಆವತಿ ಗ್ರಾಮದಲ್ಲಿ ಆಯೋಜಿಸಿದ್ದ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪುರಜ್ಯೋತಿ ರಥಯಾತ್ರೆಗೆ ಆವತಿ ಚನ್ನಕೇಶವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಕೆಂಪೇಗೌಡರು ಕರುನಾಡು ಕಂಡ ಅಪ್ರತಿಮ ದೂರದೃಷ್ಟಿವುಳ್ಳ ನಾಯಕರು. ಸುಮಾರು 500 ವರ್ಷದ ಹಿಂದೆ ಬೆಂಗಳೂರು ನಿರ್ಮಾಣ ಅವರ ಬಹು ದೊಡ್ಡ ಕೊಡುಗೆಯಾಗಿದೆ. ಇಂದಿನ ಬೆಂಗಳೂರು ಕೋಟ್ಯಂತರ ಉದ್ಯೋಗ ಸೃಷ್ಟಿಸುವ ಜತೆಗೆ ಎಲ್ಲ ವರ್ಗದ ಜನರು ಬದುಕು ಕಟ್ಟಿಕೊಳ್ಳಲು ಕೇಂದ್ರವಾಗಿ ಸಾಕಾರವಾಗಿದೆ ಎಂದು ಹೇಳಿದರು.
ಭಾವೈಕ್ಯತೆಯ ಸಂಕೇತ:
ಅವತಿಯಲ್ಲಿ ಕೆಂಪೇಗೌಡ ವಂಶಸ್ಥರು ನೆಲೆಸಿದ ನಾಡು, ಇಲ್ಲಿಂದ ಜ್ಯೋತಿ ರಥಯಾತ್ರೆಯು ಬೆಂಗಳೂರಿನ ಕೆಂಗೇರಿ ಬಳಿಯ ಕೆಂಪೇಗೌಡ ಬಡಾವಣೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಸೇರಲಿದೆ. ಜತೆಗೆ ರಾಜ್ಯದ ನಾನಾ ಭಾಗಗಳಿಂದ ಕೆಂಪೇಗೌಡ ಪುರಜ್ಯೋತಿಗಳು ಬರಲಿದ್ದು, ಇದು ರಾಜ್ಯದ ಭಾವೈಕ್ಯತೆ ಸಂಕೇತ ಎಂದು ಸಚಿವರು ಹೇಳಿದರು.
ಎಲ್ಲ ವರ್ಗದ ಆಸ್ತಿ:
ಕೆಂಪೇಗೌಡರ ದೂರದೃಷ್ಟಿ, ಆಚಾರ, ವಿಚಾರಗಳ, ನೀತಿಯನ್ನು ಬಿಂಬಿಸುವ ಮಹತ್ವದ ಕಾರ್ಯಕ್ರಮವಾಗಿದೆ. ಕೆಂಪೇಗೌಡರು ಎಲ್ಲ ವರ್ಗದ ಆಸ್ತಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ತಿಳಿಸಿದರು. ಬೆಂಗಳೂರು ನಿರ್ಮಾತೃ, ಸರ್ವ ಜನಾಂಗದ ನಾಯಕ, ಬೆಂದಕಾಳೂರು ಕಟ್ಟಿದ ದೂರದೃಷ್ಟಿಯ ನಾಯಕ ಕೆಂಪೇಗೌಡರ 517ನೇ ಜಯಂತಿ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಆವತಿಯಿಂದ ಪುರಜ್ಯೋತಿ ಕರೆದೊಯ್ಯುವ ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಕಳೆದ ಸುಮಾರು 15 ದಿನಗಳಿಂದ ಜಿಲ್ಲಾಡಳಿತ ವತಿಯಿಂದ ಕೆಂಪೇಗೌಡ ಜಯಂತಿ ಆಚರಣೆಗೆ ಸಕಲ ಸಿದ್ದತೆ ಕೈಗೊಳ್ಳಲಾಗಿತ್ತು. ಇದಕ್ಕೆ ಜಿಲ್ಲಾಡಳಿತ ಸಿಬ್ಬಂದಿ, ಸ್ಥಳೀಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಯವರು ಹಾಗೂ ಸಾರ್ವಜನಿಕರು ಸಹಕಾರ ನೀಡಿದ್ದರು. ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತಿಳಿಸಿದರು.