jds manjunat 
ಬೆಂಗಳೂರು ಗ್ರಾಮಾಂತರ

ಜಿಲ್ಲಾ ಜೆಡಿಎಸ್‌ಗೆ ಕೆ.ವಿ.ಮಂಜುನಾಥ್ ಸಾರಥ್ಯ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪಕ್ಷದ ತತ್ವಸಿದ್ಧಾಂತಗಳಿಗೆ ನಿಷ್ಠರಾಗಿರುವ, ಸಹಕಾರಿ ಕ್ಷೇತ್ರದಲ್ಲಿ ದೀರ್ಘ ಅನುಭವ ಹೊಂದಿರುವ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಕೆ.ವಿಮಂಜುನಾಥ್ ಅವರಿಗೆ ಜಿಲ್ಲೆಯ ಜೆಡಿಎಸ್ ಸಾರಥ್ಯ ವಹಿಸಲಾಗಿದೆ.
ಜೆಡಿಎಸ್ ವರಿಷ್ಟರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತ ಜಿಲ್ಲೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸವಾಲೊಡ್ಡಿ ಜೆಡಿಎಸ್ ಸಂಘಟನೆ ಜತೆಗೆ ತೆನೆಹೊತ್ತ ಮಹಿಳೆಗೆ ಶಕ್ತಿ ತುಂಬವ ಜವಾಬ್ದಾರಿ ಜಿಲ್ಲಾಧ್ಯಕ್ಷರ ಮೇಲಿದೆ. ಕಳೆದ ಚುನಾವಣೆಯಲ್ಲಿ ಕಳೆದುಕೊಂಡಿರುವ ನೆಲಮಂಗಲ ಹಾಗೂ ದೇವನಹಳ್ಳಿ ವಿಧಾನಸಭಾ ಕ್ಷೇತ್ರಗಳನ್ನು ಮರಳಿ ಪಡೆಯುವುದರ ಜತೆಗೆ ದೊಡ್ಡಬಳ್ಳಾಪುರದಲ್ಲಿ ಅಧಿಪತ್ಯ ಸ್ಥಾಪಿಸುವುದು ಜಿಲ್ಲಾಧ್ಯಕ್ಷರ ಹೊಣೆಗಾರಿಕೆಯಾಗಿದೆ. ಇದರ ಜತೆಗೆ ಸ್ಪರ್ಧೆಯಿಂದಲೇ ದೂರ ಉಳಿದಿರುವ ಹೊಸಕೋಟೆ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯೊಷ್ಟತ್ತಿಗೆ ಗಟ್ಟಿ ಸ್ಪರ್ಧಿ ನಿಲ್ಲಿಸಿ ಜೆಡಿಎಸ್ ಪಾರಮ್ಯ ಮರುಕಳಿಸುವ ಪ್ರಮುಖ ಕಾರ್ಯವೂ ಇವರ ಮೇಲಿದೆ. ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ತಳಮಟ್ಟದಿಂದ ಪಕ್ಷ ಸಂಘಟನೆಗೆ ರೂಪುರೇಷೆ ಸಿದ್ದಪಡಿಸುತ್ತಿದ್ದಾರೆ.
ಮಾಜಿ ಪ್ರಧಾನಿ ವಿಶ್ವಾಸ:
ಪಕ್ಷದ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜನತಾದಳ (ಜಾತ್ಯತೀತ) ಪಕ್ಷವನ್ನು ಸಂಘಟಿಸಿ ಬಲಿಷ್ಠಗೊಳಿಸುವ ಜವಾಬ್ದಾರಿಯನ್ನು ಕೆ.ವಿ.ಮಂಜುನಾಥ್ ಸಮರ್ಥವಾಗಿ ನಿಭಾಯಿಸಲಿದ್ದರೆ ಎಂದು ಜೆಡಿಎಸ್ ವರಿಷ್ಟರಾದ ಎಚ್.ಡಿ.ದೇವೇಗೌಡವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೈತ ಕುಟುಂಬ, ರಾಜಕೀಯ ಹಿನ್ನೆಲೆ:
ರೈತ ಕುಟುಂಬದ ಹಿನ್ನೆಲೆಯಿರುವ ಕೆ.ವಿ. ಮಂಜುನಾಥ್ ರಾಜಕೀಯ ಹಿನ್ನೆಲೆಯವರಾಗಿದ್ದು ಇವರ ತಂದೆ ವೆಂಕಟೇಗೌಡ ತಾಲೂಕು ಜೆಡಿಎಸ್ ಅಧ್ಯಕ್ಷರಾಗಿದ್ದರು. ಇವರು ಎಪಿಎಂಸಿ ಅಧ್ಯಕ್ಷರಾಗಿ ಹಾಗೂ ಬಿದಲೂರು ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು.
ಗ್ರಾಮಾಂತರ ಭಾಗದಲ್ಲಿ ಜೆಡಿಎಸ್ ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ, ಕಾರ್ಯಕರ್ತರೊಂದಿಗೆ ನಿರಂತರ ಸಂವಾದ ನಡೆಸಿ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಪರಿಣಾಮಕಾರಿ ನಾಯಕತ್ವವನ್ನು ಕೆ.ವಿ.ಮಂಜುನಾಥ್ ನೀಡಲಿದ್ದಾರೆ, ಗ್ರಾಮೀಣ ಪ್ರದೇಶದ ಸಮಸ್ಯೆಗಳ ಬಗ್ಗೆ ಅರಿವು ಹೊಂದಿರುವ ಅವರು, ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಜತೆಗೆ ಯುವಕರು, ರೈತರು ಹಾಗೂ ಮಹಿಳೆಯರನ್ನು ಜೆಡಿಎಸ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.
ಉದಯ ಆರಾಧ್ಯ, ಜೆಡಿಎಸ್ ಯುವ ಮುಖಂಡ