javali workshop 
ಬೆಂಗಳೂರು ಗ್ರಾಮಾಂತರ

ಜವಳಿ ಪ್ರಗತಿಗೆ ಒಗ್ಗಟ್ಟಿನ ನೆರವು ಅಗತ್ಯ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಜವಳಿ ಕ್ಷೇತ್ರಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳು ಹೆಚ್ಚಿನ ಪ್ರೊತ್ಸಾಹ ನೀಡಲಿದ್ದು ಈ ನಿಟ್ಟಿನಲ್ಲಿ ಕೈಗಾರಿಕೆಗಳು, ಜವಳಿ ಉತ್ಪಾದಕರು, ರಫ್ತುದಾರರು ಹಾಗೂ ಉದ್ಯಮಿಗಳು ಒಗ್ಗಟ್ಟಿನ ನೆರವು ಅಗತ್ಯವಿದೆ ಎಂದು ಕೈಮಗ್ಗ ಮತ್ತು ಜವಳಿ ಅಭಿವೃದ್ಧಿ ಆಯುಕ್ತ ಎ.ಬಿ. ಬಸವರಾಜು ಹೇಳಿದರು.
ಕೈಮಗ್ಗ ಮತ್ತು ಜವಳಿ ಇಲಾಖೆಯ ವತಿಯಿಂದ ದೊಡ್ಡಬಳ್ಳಾಪುರದ ಡಿಐಟಿಪಿ ಅಪರೆಲ್ ಪಾರ್ಕ್‌ನಲ್ಲಿ ಆಯೋಜಿಸಿದ್ದ ಜಾಗತಿಕ ಮಾರುಕಟ್ಟೆಗೆ ಜವಳಿ ವಿಷಯದ ಜಿಲ್ಲಾ ಮಟ್ಟದ ಆಂತರಿಕ ಸಲಹಾತ್ಮಕ ಕಾರ್ಯಾಗಾರದಲ್ಲಿ ಮಾತನಾಡಿದರು.ಕೇಂದ್ರ ಸರ್ಕಾರ 2030ರ ವೇಳೆಗೆ ಜವಳಿ ಮತ್ತು ಸಿದ್ದ ಉಡುಪು ರಫ್ತು ಕ್ಷೇತ್ರದಲ್ಲಿ 100 ಬಿಲಿಯನ್ ಡಾಲರ್ ರಫ್ತು ಗುರಿ ಹೊಂದಿದೆ ಎಂದು ತಿಳಿಸಿದರು. ಇಂದಿನ ಜಾಗತಿಕ ಮಾರುಕಟ್ಟೆಯಲ್ಲಿ ಗುಣಮಟ್ಟ, ನಾವೀನ್ಯತೆ, ತಂತ್ರಜ್ಞಾನ, ಪರಿಸರ ಸ್ನೇಹಿ ಉತ್ಪಾದನೆ ಹಾಗೂ ಸುಸ್ಥಿರ ಅಭಿವೃದ್ಧಿ ಅತ್ಯಂತ ಪ್ರಮುಖವಾಗಿವೆ. ಜಾಗತಿಕ ಖರೀದಿದಾರರು ಈಗ ಪರಿಸರ ಸ್ನೇಹಿ ಉತ್ಪನ್ನಗಳು, ಪಾರದರ್ಶಕ ಉತ್ಪಾದನಾ ವ್ಯವಸ್ಥೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚು ಗಮನಿಸುತ್ತಿದ್ದಾರೆ. ಆದ್ದರಿಂದ ನಮ್ಮ ಉದ್ಯಮಗಳು ಅಂತಾರಾಷ್ಟ್ರೀಯ ಗುಣಮಟ್ಟದ ಮಾನದಂಡಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದರು.
ಉತ್ತಮ ಅವಕಾಶವಿದೆ:
ಹೆಚ್ಚುತ್ತಿರುವ ಜಾಗತಿಕ ಬೇಡಿಕೆಯನ್ನು ಜವಳಿ ರಫ್ತುದಾರರು ಸದುಪಯೋಗಪಡಿಸಿಕೊಳ್ಳಬೇಕು. ಗುಣಮಟ್ಟದ ಉತ್ಪನ್ನಗಳು ಹಾಗೂ ಸ್ಪರ್ಧಾತ್ಮಕ ಬೆಲೆಗಳ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕರ್ನಾಟಕದ ಜವಳಿ ಕ್ಷೇತ್ರವು ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಉತ್ತಮ ಅವಕಾಶವಿದೆ ಎಂದು ಆಯುಕ್ತರು ತಿಳಿಸಿದರು.
ದೊಡ್ಡಬಳ್ಳಾಪುರದಲ್ಲಿ ಜವಳಿ ಮಾರಾಟ ಮಳಿಗೆ:
ದೊಡ್ಡಬಳ್ಳಾಪುರದ ಸೀರೆ, ನೇಕಾರಿಕೆಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿದ್ದಾಗ ನೇಕಾರರ ಸಮಸ್ಯೆ, ಬೇಡಿಕೆಗಳ ಬಗ್ಗೆ ಸಭೆ ಮಾಡಲಾಗಿತ್ತು. ದೊಡ್ಡಬಳ್ಳಾಪುರದಲ್ಲಿ ಜವಳಿ ಉತ್ಪನ್ನ ಮಾರಾಟ ಮಳಿಗೆ ಸ್ಥಾಪನೆಗೆ ಈಗಾಗಲೇ ಕೇಂದ್ರಕ್ಕೆ ಮಾಹಿತಿ ನೀಡಲಾಗಿದೆ. ಉಗ್ರಾಣ, ಲ್ಯಾಬ್, ಮೂಲಸೌಕರ್ಯ ಒಳಗೊಂಡ ಗುಣಮಟ್ಟದ ಮಾರಾಟ ಮಳಿಗೆ ಸ್ಥಾಪನೆ ಮಾಡಲಾಗುವುದು ಬಸವರಾಜು ತಿಳಿಸಿದರು. ಈ ಕಾರ್ಯಾಗಾರದ ಮೂಲಕ ಉದ್ಯಮಿಗಳಿಗೆ ಹೊಸ ರಫ್ತು, ಅವಕಾಶಗಳು, ಜಾಗತಿಕ ಮಾರುಕಟ್ಟೆಗಳ ಬೇಡಿಕೆ, ಸರ್ಕಾರಿ ಪ್ರೋತ್ಸಾಹಕ ಯೋಜನೆಗಳು, ರಫ್ತು, ನೀತಿಗಳು, ಬ್ರಾಂಡಿಂಗ್, ಡಿಜಿಟಲ್ ಮಾರುಕಟ್ಟೆ, ಲಾಜಿಸ್ಟಿಕ್ಸ್ ಹಾಗೂ ಅಂತಾರರಾಷ್ಟ್ರೀಯ ವ್ಯಾಪಾರದಲ್ಲಿ ಎದುರಾಗುವ ಸವಾಲುಗಳಿಗೆ ಪರಿಹಾರಗಳ ಕುರಿತು ವಿಷಯ ತಜ್ಞರಿಂದ ಸಮಗ್ರ ಮಾಹಿತಿ ದೊರೆಯಲಿದೆ ಎಂದರು. ಪ್ರತಿ ಜಿಲ್ಲೆಯಲ್ಲಿ ಇಂತಹ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಜವಳಿ ಕ್ಷೇತ್ರದಲ್ಲಿ ಯುವ ಜನರು ಹೆಚ್ಚಿನ ಆಸಕ್ತಿ ವಹಿಸಬೇಕು. ಇದರಿಂದ ಉದ್ಯೋಗ ಮತ್ತು ಆದಾಯ ಹೆಚ್ಚುವುದರ ಜತೆಗೆ ದೇಶದ ಆರ್ಥಿಕ ಬೆಳವಣಿಗೆಗೂ ಗಣನೀಯ ಕೊಡುಗೆ ದೊರೆಯಲಿದೆ ಎಂದು ಹೇಳಿದರು.
ಗ್ರಾಮಾಂತರ ಜಿಲ್ಲೆ ಪ್ರಮುಖ:
ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಮಾತನಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಂದು ರಾಜ್ಯದ ಪ್ರಮುಖ ಕೈಗಾರಿಕಾ ಜಿಲ್ಲೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ಉಡುಪು ತಯಾರಿಕೆ, ಜವಳಿ ಸಂಸ್ಕರಣೆ, ಗಾರ್ಮೆಂಟ್ಸ್ ಉತ್ಪಾದನೆ ಹಾಗೂ ರಫ್ತು, ಕ್ಷೇತ್ರಗಳಲ್ಲಿ ಜಿಲ್ಲೆಯು ಮಹತ್ವದ ಕೊಡುಗೆ ನೀಡುತ್ತಿದೆ ಎಂದರು. ಜಿಲ್ಲೆಯಲ್ಲಿರುವ ಅನೇಕ ರಫ್ತು, ಸಂಸ್ಥೆಗಳು ವಿಶ್ವದ ವಿವಿಧ ರಾಷ್ಟ್ರಗಳಿಗೆ ಗುಣಮಟ್ಟದ ಉತ್ಪನ್ನಗಳನ್ನು ಪೂರೈಸುತ್ತಿದ್ದು, ಮೇಕ್ ಇನ್ ಇಂಡಿಯಾ, ವೋಕಲ್ ಫಾರ್ ಲೋಕಲ್ ಮತ್ತು ಲೋಕಲ್ ಟು ಗ್ಲೋಬಲ್ ಪರಿಕಲ್ಪನೆಗಳಿಗೆ ಬಲ ತುಂಬುತ್ತಿವೆ ಎಂದರು.
ಬ್ರಾಂಡ್ ಮೌಲ್ಯ ಹೆಚ್ಚಾಗಲಿದೆ:
ಕೈಮಗ್ಗ ಮತ್ತು ಜವಳಿ ಇಲಾಖೆಯ ಅಪರ ನಿರ್ದೇಶಕ ಸಿ.ಎಸ್.ಯೋಗೇಶ್ ಮಾತನಾಡಿ, ದೇಶದ ಜವಳಿ ರಫ್ತು ವೃದ್ಧಿಯಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ. ರಫ್ತು ಮಾಡುವ ದೇಶದ ಪ್ರಮುಖ 100 ಜಿಲ್ಲೆಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಒಂದಾಗಿದೆ ಎಂದರು. ದೊಡ್ಡಬಳ್ಳಾಪುರದ ಸೀರೆ ಹೆಚ್ಚು ಪ್ರಸಿದ್ಧಿ ಪಡೆದಿದ್ದು ಜಿಐ ಟ್ಯಾಗ್ ಮಾಡುವುದರಿಂದ ಬ್ರಾಂಡ್ ಮೌಲ್ಯ ಹೆಚ್ಚಾಗಲಿದೆ ಹೊರ ದೇಶಗಳಿಗೆ ರಫ್ತು ಮಾಡಲು ಸಹಕಾರಿ ಆಗಲಿದೆ ಎಂದ ಅವರು, ಪ್ರಸ್ತುತ ಜಿಲ್ಲೆಯಿಂದ 384 ಮಿಲಿಯನ್ ಉತ್ಪನ್ನಗಳು ರಫ್ತಾಗುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ 3 ಪಟ್ಟು ರಫ್ತು ಮಾಡುವ ಗುರಿ ಹೊಂದಲಾಗಿದೆ ಎಂದರು. ಈ ನಿಟ್ಟಿನಲ್ಲಿ ಹಂತ ಹಂತವಾಗಿ ರಫ್ತು ಉತ್ತೇಜನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.