jaatre 
ಬೆಂಗಳೂರು ಗ್ರಾಮಾಂತರ

ಕಣ್ಮನ ಸೆಳೆದ ನೀರು ಬಂಡಿ ಮೆರವಣಿಗೆ

ಶಿವರಾಜ.ಎಂ
ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕು ಕೆಳಗಿನ ಜೂಗನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಗೌರಿಬಿದನೂರು ತಾಲೂಕಿನ ಪೂಜಾರಹಳ್ಳಿಯಲ್ಲಿ ಯುಗಾದಿ ಹಬ್ಬದ ಮಾರನೇ ದಿನ ಸಂಪ್ರದಾಯಬದ್ಧವಾಗಿ ನಡೆಯುವ ಶ್ರೀ ವೀರತಿಪ್ಪಯ್ಯಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಅಲಂಕಾರಿಕ ನೀರು ಬಂಡಿಗಳ ಮೆರವಣಿಗೆಯೊಂದಿಗೆ ಭಾಗವಹಿಸಿದ್ದರು.
ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ ಸಿಂಗರಿಸಲ್ಪಟ್ಟ ನೀರುಬಂಡಿಗಳ ಮೆರವಣಿಗೆ ಎಲ್ಲರ ಕಣ್ಮನ ಸೆಳೆದಿತು. ಘಾಟಿ ಸುಬ್ರಹ್ಮಣ್ಯ ಸುತ್ತಮುತ್ತಲಿನ ಗ್ರಾಮಗಳ ರೈತರು ತಮ್ಮ ದನಗಳನ್ನು ಅಲಂಕರಿಸಿ, ನೀರುಬಂಡಿಗಳನ್ನು ಕಟ್ಟಿಕೊಂಡು ಭಕ್ತಿಭಾವದಿಂದ ಮೆರವಣಿಗೆ ನಡೆಸಿದ ದೃಶ್ಯ ಗಮನಾರ್ಹವಾಗಿತ್ತು.
ಅಲಂಕೃತ ಎತ್ತುಗಳ ಸೊಬಗು:
ಬಣ್ಣಬಣ್ಣದ ಅಲಂಕಾರಗಳಿಂದ ಸಜ್ಜುಗೊಂಡ ಎತ್ತುಗಳು, ಕಳಶಗಳು ಮತ್ತು ಸಂಪ್ರದಾಯಬದ್ಧ ನೀರುಬಂಡಿಗಳು ಜಾತ್ರೆಯ ಸೊಬಗನ್ನು ಹೆಚ್ಚಿಸಿತು. ಗ್ರಾಮೀಣ ಸಂಸ್ಕೃತಿ, ಪರಂಪರೆ ಮತ್ತು ರೈತರ ಜೀವನಶೈಲಿಯನ್ನು ಪ್ರತಿಬಿಂಬಿಸಿದ ಈ ಮೆರವಣಿಗೆಗೆ ಸಾವಿರಾರು ಜನ ಸಾಕ್ಷಿಯಾದರು.ಮಜ್ಜಿಗೆ ಮತ್ತು ಪಾನಕ ವಿತರಣೆ, ಭಕ್ತರ ಸಂಭ್ರಮ ಹಾಗೂ ಅಪಾರ ಭಕ್ತ ಸಮೂಹ ಸೇರಿ ಜಾತ್ರೆಗೆ ವಿಶೇಷ ಮೆರುಗು ತಂದವು. ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ರಾಧಾ ಮಂಜುನಾಥ್ ಮುಖಂಡರಾದ ಕುಮಾರ್, ಉದಯ ಆರಾಧ್ಯ ಮತ್ತಿತರರು ಪಾಲ್ಗೊಂಡಿದ್ದರು.
ನೀರು ಬಂಡಿಯೆಂದೇ ಪ್ರಸಿದ್ಧಿ:
ಗ್ರಾಮಗಳಿಂದ ನೀರು ಸೇರಿ ಅಡುಗೆಗೆ ಬೇಕಾದ ಸಾಮಗ್ರಿಗಳನ್ನು ಎತ್ತಿನಗಾಡಿಯಲ್ಲಿ ತೆಗೆದುಕೊಂಡು ಹೋಗಿ ಜಾತ್ರೆಯಲ್ಲಿ ಅಡುಗೆ ಮಾಡಿ ಪ್ರಸಾದ ಸೇವಿಸಲಾಗುತ್ತದೆ ಈ ಹೀಗೆ ನೀರು ಸಹಿತ ಅಡುಗೆ ಸಾಮಗ್ರಿಗಳನ್ನು ಸಾಗಿಸುವ ಎತ್ತಿನಗಾಡಿಗೆ ನೀರು ಬಂಡಿ ಎಂದು ಕರೆಯುತ್ತಾರೆ. ಈ ಹಿಂದಿನಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದ್ದು ನೀರಿನ ಬಂಡಿ ಎಂದೇ ಪ್ರಸಿದ್ದಿ ಪಡೆದಿದೆ.