ವ್ಯವಸಾಯವೂ ಇಲ್ಲ, ದನಗಳ ಸಾಕಣೆಯೂ ಇಲ್ಲ 
ಬೆಂಗಳೂರು ಗ್ರಾಮಾಂತರ

ಕಾಲಗರ್ಭ ಸೇರಿದ ಶಿವಗಂಗೆ ದನಗಳ ಜಾತ್ರೆ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಒಂದು ಕಾಲದಲ್ಲಿ ಗ್ರಾಮಾಂತರ ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಪಡೆದಿದ್ದ ನೆಲಮಂಗಲ ತಾಲೂಕು ದಾಬಸ್‌ಪೇಟೆಯ ಶಿವಗಂಗೆ ದನಗಳ ಜಾತ್ರೆ ಪ್ರಸ್ತುತ ಕಾಲಗರ್ಭ ಸೇರಿದೆ. ದೊಡ್ಡಬಳ್ಳಾಪುರದ ಘಾಟಿ ದನಗಳ ಜಾತ್ರೆಗೆ ಪೈಪೋಟಿ ನೀಡುವಂತಿದ್ದ ಶಿವಗಂಗೆ ದನಗಳ ಜಾತ್ರೆ ದನಗಳೇ ಇಲ್ಲದೆ ಭಣಗುಡುವಂತಾಗಿದೆ. ಕಳೆದ ಕೆಲವೊಂದು ವರ್ಷಗಳಲ್ಲಿ ಬೆರಳೇಣಿಕೆ ದನಗಳು ಕಂಡುಬರುತ್ತಿದ್ದವು ಈ ವರ್ಷ ಒಂದೇ ಒಂದು ಜೋಡಿಯೂ ಇಲ್ಲದೆ ದನಗಳ ಜಾತ್ರೆಯ ವೈಭವದ ದಿನಗಳು ಸಂಪೂರ್ಣ ಕಣ್ಮರೆಯಾಗಿದೆ.
ಹಿಪ್ಪೆತೋಪು ಭಣಭಣ:
ವರ್ಷದಿಂದ ವರ್ಷಕ್ಕೆ ಆಕರ್ಷಣೆ ಕಳೆದುಕೊಂಡ ದನಗಳ ಜಾತ್ರೆ ಈ ಬಾರಿ ಸಂಪೂರ್ಣವಾಗಿ ವಿರಾಮ ಬಿದ್ದಿರುವುದು ಈ ಭಾಗದ ಹಿರಿಯರಲ್ಲಿ ನೋವು ತಂದಿದೆ. ಕೆಲವೇ ವರ್ಷದ ಹಿಂದೆ ಸಾವಿರಾರಾರು ಜೋಡಿ ದನಗಳು ಜಾತ್ರೆಗೆ ಆಗಮಿಸುತ್ತಿದ್ದವು. ಇಲ್ಲಿನ ಹಿಪ್ಪೆ ತೋಪು ಭರ್ತಿಯಾಗಿ ಪಕ್ಕದ ಹೊಲಗಳಲ್ಲಿಯೂ ಜಾನುವಾರುಗಳನ್ನು ಕಟ್ಟುತ್ತಿದ್ದರು. ಈ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾದ ಬಳಿಕ ಸಾವಿರಾರು ಎಕರೆ ಕೃಷಿ ಭೂಮಿ ಮಾಯವಾಯಿತು. ಜಾನುವಾರು ಸಾಕಾಣೆಯೂ ಕ್ರಮೇಣ ಕಣ್ಮರೆಯಾಯಿತು. ಕಾಲ ಕಳೆದಂತೆ ಹಿಪ್ಪುನೇರಳೆ ತೋಪು ಸಹ ತೆರೆಮರೆಗೆ ಸರಿಯಿತು. ಒಂದು ಕಡೆ ಪ್ರವಾಸಿ ಮಂದಿರ ಇನ್ನೊಂದು ಕಡೆ ಯಾತ್ರೆ ನಿವಾಸ ನಿರ್ವಾಣ ಆಗಿ ದನಗಳ ಜಾತ್ರೆಗೆ ಜಾಗವೂ ಇಲ್ಲದಂತಾಯಿತು.
ನೆನಪಾಗಿ ಉಳಿದ ಜಾತ್ರೆ ಸೊಬಗು:
20 ಸಾವಿರ ರೂಪಾಯಿಯಿಂದ ಲಕ್ಷಾಂತರ ರೂ.ಬೆಲೆ ಬಾಳುವ ದನಗಳ ಭರ್ಜರಿ ವ್ಯಾಪಾರ ನಡೆಯುತ್ತಿತ್ತು. ದೇಶಿಯ ಜಾನುವಾರುಗಳ ಜತೆಗೆ ಅಮತ ಮಹಲ್, ಹಳ್ಳಿಕಾರ್ ರಾಸುಗಳು ಜಾತ್ರೆಯಲ್ಲಿ ವಿಜೃಂಭಿಸುತ್ತಿದ್ದವು. ಅಕ್ಕಪಕ್ಕದ ಜಿಲ್ಲೆ ತಾಲೂಕುಗಳಿಂದ ರೈತರು ಜಾತ್ರೆಗೆ ರಾಸುಗಳನ್ನು ಕರೆತರುತ್ತಿದ್ದರು ಇವೆಲ್ಲವೂ ಈಗ ನೆನಪಾಗಿಯಷ್ಟೇ ಉಳಿಯುವಂತಾಗಿದೆ ಎಂದು ಈ ಭಾಗದ ಜನರು ನೆನಪು ಮಾಡಿಕೊಳ್ಳುತ್ತಿದ್ದಾರೆ.
ಬದಲಾದ ಜೀವನ ಶೈಲಿಯೂ ಕಾರಣ:
ಬದಲಾದ ಜೀವನ ಶೈಲಿ, ರೈತರು ಕಷಿಯನ್ನು ಯಂತ್ರಗಳ ಮೂಲಕ ವಾಡುತ್ತಿರುವುದು, ರಾಸುಗಳ ಸಾಕಾಣಿಕೆ ವೆಚ್ಚದ ಹೆಚ್ಚಳದಿಂದ ಗ್ರಾಮೀಣ ಜನರು ವಿಮುಖರಾಗುತ್ತಿದ್ದಾರೆ ಎಂಬುದು ಕೆಲವು ರೈತರ ಅಭಿಪ್ರಾಯವಾದರೆ ನಾಟಿ ದನಗಳನ್ನು ಸಾಕುವುದನ್ನು ಬಿಡುತ್ತಿದ್ದಾರೆ. ಹಾಗಾಗಿ ಜಾತ್ರೆಗೆ ಜಾನುವಾರುಗಳು ಬರುತ್ತಿಲ್ಲ ಎನ್ನುವವರು ಇದ್ದಾರೆ.
ಹೊಟ್ಟೆಗೆ ತಣ್ಣೀರು ಬಟ್ಟೆ:
ಜಾತ್ರೆ ಎಂದರೆ ರಾಸುಗಳ ವಾರಾಟ ಹಾಗೂ ಕೊಂಡುಕೊಳ್ಳುವುದು ಅಷ್ಟೇ ಅಲ್ಲ. ಹತ್ತಾರು ಜನಕ್ಕೆ ಜೀವನೋಪಾಯದ ದಾರಿಯಾಗಿತ್ತು. ಕೊಳ್ಳುವವರ ವಾರುವವರ ಮಧ್ಯೆ ದಳ್ಳಾಳಿಗಳು ವ್ಯಾಪಾರ ಕುದುರಿಸಿ ಕಮಿಷನ್ ಪಡೆಯುತ್ತಿದ್ದರು. ಸಣ್ಣ ಹೋಟೆಲ್‌ಗಳು ಇತರ ಅಂಗಡಿಗಳ ತುತ್ತಿನ ಚೀಲ ತುಂಬುತ್ತಿತ್ತು. ಜಾತ್ರೆಯಲ್ಲಿ ಜಾನುವಾರುಗಳಿಗೆ ಬೇಕಾದ ಹಗ್ಗ, ಮೂಗುದಾರ, ಗೆಜ್ಜೆ, ದಂಡೆಗಳ ವಾರಾಟ ವಾಡಿ ಜೀವನ ನಡೆಸುತ್ತಿದ್ದವರಿಗೂ ಜಾತ್ರೆ ನಿಂತಿರುವುದು ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಬಿದ್ದಂತಾಗಿದೆ.
ಆರ್ಥಿಕ ಅನುಕೂಲಕ್ಕೆ ಇಂದು ರೈತರು ಸೀಮೆ ಹಸುಗಳನ್ನು ಸಾಕುತ್ತಾರೆ. ನಾಟಿ ರಾಸುಗಳು ಇಲ್ಲದಂತಾಗಿದೆ. ಹತ್ತಾರು ವರ್ಷಗಳಲ್ಲಿ ಇದೇ ಮೊದಲ ಬಾರಿ ಒಂದು ರಾಸು ಕೂಡ ಕಾಣದಂತಾಗಿದೆ. ಈ ಹಿಂದೆ ನೂರಾರು ಕಿಲೋಮೀಟರ್‌ಗಳಿಂದ ರಾಸುಗಳನ್ನು ಕರೆದುಕೊಂಡು ಬರುತ್ತಿದ್ದರು. ಈ ಬಾರಿ ಯಾರು ಬಂದಿಲ್ಲ. ಪಶು ಸಂಗೋಪನೆ ಇಲಾಖೆಯಿಂದ ಉತ್ತಮ ರಾಸುಗಳಿಗೆ ಜಾತ್ರೆ ದಿನ ಬಹುವಾನ ವಿತರಣೆ ವಾಡುತ್ತಿದ್ದರು. ಆದರೆ ಈ ವರ್ಷ ಇದೆಲ್ಲ ಕಾಣಲು ಸಾಧ್ಯವಿಲ್ಲದಂತಗಿದೆ.
ಹನುಮಂತರಾಯಪ್ಪ, ರೈತ