ದೊಡ್ಡಬಳ್ಳಾಪುರ : ತಾಲೂಕಿನ ಸರ್ಕಾರಿ ಗೋಮಾಳಗಳಲ್ಲಿ ಮೀಸಲಾದ ಭೂಮಿಗೆ ಹಕ್ಕುಪತ್ರ ನೀಡಿ, ಬಡವರು ಸೂರು ಕಲ್ಪಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ತಾಲೂಕು ಕಚೇರಿ ಮುಂದೆ ಜನಸಾಮಾನ್ಯರ ವಸತಿ, ಭೂಮಿ ವಂಚಿತರ ಒಕ್ಕೂಟ, ಜನಪರ ಸೇವಾ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಅಧ್ಯಕ್ಷ ನಂಜುಂಡಯ್ಯ ಮಾತನಾಡಿ, 2007ರಲ್ಲಿಯೇ ರಾಜ್ಯಪಾಲರು, ಮುಖ್ಯಮಂತ್ರಿ,ಕಂದಾಯ ಸಚಿವರು ಹಾಗೂ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಎಲ್ಲ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಅಂದಿನಿಂದ ಇಂದಿನವರೆಗೆ ಅಧಿಕಾರಿಗಳು ಯಾವುದೇ ಸಕಾರಾತ್ಮಕ ಸ್ಪಂದನೆ ನೀಡಿಲ್ಲ. ಈ ಹಿಂದೆ 30 ಎಕರೆ ಜಾಗ ಮಂಜೂರು ಮಾಡಲು ರಾಜ್ಯಪಾಲರ ಕಚೇರಿ ಆದೇಶಿಸಿತ್ತು. ಈ ಆದೇಶದನ್ವಯ ಜಿಲ್ಲಾಧಿಕಾರಿ ತಹಸೀಲ್ದಾರ್ಗೆ ಸೂಚನೆ ನೀಡಿದ್ದರು.
ಪ್ರತಿಭಟನಾಕಾರರ ಒತ್ತಾಯದ ಮೇರೆಗೆ ಜಾಗ ಗುರುತಿಸಿ ಸರ್ವೇಮಾಡಲು ಸೂಚಿಸಲಾಯಿತಾದರೂ ಸರ್ವೇಅಧಿಕಾರಿಗಳು ಸ್ಥಳಕ್ಕೆ ಬಾರದೆ ರ್ನಿಲಕ್ಷ್ಯ ವಹಿಸಿದ್ದಾರೆ. ಬಡವರಿಗೆ ನೆರವಾಗಲು ಈ 30 ಎಕರೆ ಜಾಗದಲ್ಲಿ ಸುಸಜ್ಜಿತ ಲೇಔಟ್ ನಿರ್ಮಿಸಿಕೊಡಬೇಕು. ಈ ಕುರಿತು ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಅಧಿಕೃತ ನಿವಾಸದ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.