Irrigation 
ಬೆಂಗಳೂರು ಗ್ರಾಮಾಂತರ

ಶಾಶ್ವತ ನೀರಾವರಿ ಯೋಜನೆಗೆ ತಿಲಾಂಜಲಿ

ಶಿವರಾಜ.ಎಂ
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಯಾವುದೇ ನದಿ ಮೂಲವಿಲ್ಲದ ಬಯಲು ಸೀಮೆ ಗ್ರಾಮಾಂತರ ಜಿಲ್ಲೆಗೆ ಈ ಬಾರಿಯ ಬಜೆಟ್‌ನಲ್ಲಿ ಶಾಶ್ವತ ನೀರಾವರಿ ಯೋಜನೆಗಳು ೋಷಣೆಯಾಗಲಿವೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ.
ಕೇವಲ ಮಳೆ ಆಶ್ರುತವಾಗಿ ಮತ್ತು ಕೊಳವೆಬಾವಿಗಳನ್ನಷ್ಟೇ ಅವಲಂಬಿಸಿ ಜನಜೀವನ ನಡೆಯುತ್ತಿದೆ. ಬೇಸಿಗೆ ವೇಳೆ ಕುಡಿಯುವ ನೀರಿಗೂ ಹಾಹಾಕಾರ ಏರ್ಪಡುತ್ತದೆ. ಜಾನುವಾರುಗಳಿಗೆ ಹಸಿರು ಮೇವಿಗೂ ಪರದಾಡುವ ಸ್ಥಿತಿಯೂ ನಿರ್ಮಾಣವಾಗುತ್ತದೆ ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಬೇಕು ಎನ್ನುವುದು ಈ ಭಾಗದ ಜನರ ಬಹಳ ವರ್ಷಗಳ ಬೇಡಿಕೆಯಾಗಿದೆ. ಬಯಲು ಸೀಮೆಯನ್ನು ಹಸಿರುವಲಯವನ್ನಾಗಿ ಮಾಡಲಿದೆ ಎಂಬ ಆಶಾಭಾವದಿಂದ ಕಾಯುತ್ತಿದ್ದ ಜನರಿಗೆ ರಾಜ್ಯ ಸರ್ಕಾರ ಸಂಸ್ಕೃರಿತ ನೀರಿನ ಮೂಲಕ ಕೆರೆಗಳನ್ನು ತುಂಬಿಸುವ ಯೋಜನೆ ೋಷಣೆ ಮಾಡಿರುವುದು ಜನರನ್ನು ಭ್ರಮರನಿರಸನಗೊಳಿಸಿದೆ.
ಕುಡಿವ ನೀರಿಗೂ ತತ್ವಾರ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಪ್ರಧಾನ ಬೆಳೆಯಾಗಿದೆ ಇದರೊಂದಿಗೆ ಇತ್ತೀಚಿಗೆ ತೋಟಗಾರಿಕೆ ಬೆಳೆಗಳೂ ಮುಂಚೂಣಿಗೆ ಬರುತ್ತಿವೆ. ಜಿಲ್ಲೆಯ ನಾಲ್ಕೂ ತಾಲೂಕುಗಳು ರಾಜ್ಯ ರಾಜಧಾನಿ ಬೆಂಗಳೂರಿನ ಗಡಿ ಹಂಚಿಕೊಂಡಿರುವುದರಿಂದ ಕಾವೇರಿ ನೀರು ಸೇರಿ ಎತ್ತಿನ ಹೊಳೆಯಂತ ಯೋಜನೆಗಳು ೋಷಣೆಯಾಗಲಿವೆ ಎಂಬ ನಿರೀಕ್ಷೆ ಬೆಟ್ಟದಷ್ಟಿತ್ತು. ಇದೆಲ್ಲವೂ ಕನಸಾಗಿಯೇ ಉಳಿಯುವಂತಾಗಿದೆ. ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ, ನೆಲಮಂಗಲದಲ್ಲಿ ಯಾವುದೇ ನದಿ ಮೂಲಗಳಿಲ್ಲ, ಅರ್ಕಾವತಿ ಪಾತ್ರದ ಕೆರೆಗಳನ್ನಷ್ಟೇ ಇಲ್ಲಿ ಕಾಣಬಹುದಾಗಿದೆ. ಆದ್ದರಿಂದ ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ದೊಡ್ಡಬಳ್ಳಾಪುರ ನಗರಕ್ಕೆ ಜಕ್ಕಲಮಡುಗು ಜಲಾಶಯದಿಂದ ನೀರಿನ ಸರಬರಾಜು ಆಗುತ್ತದೆ. ಇನ್ನುಳಿದ ಕಡೆ, ಕೊಳವೆಬಾವಿಗಳ ಮೂಲಕ ಶುದ್ಧ ಕುಡಿಯುವ ನೀರಿನ ಘಟಕದ ಮೂಲಕ ಕುಡಿವ ನೀರಿನ ಅವಲಂಬನೆ ಇದೆ. ಆದರೆ ಶಾಶ್ವತ ನೀರಾವರಿ ಯೋಜನೆಯಿಲ್ಲ.
ರಾಜಕೀಯ ಭಾಷಣಗಳಿಗಷ್ಟೇ ಸೀಮಿತ:
ಬಯಲು ಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಬಹುನಿರೀಕ್ಷಿತ ಯೋಜನೆಗಳಲ್ಲಿ ಎತ್ತಿನಹೊಳೆ ಯೋಜನೆ ಅನುದಾನದ ಗಾತ್ರ ಹೆಚ್ಚಾಗುತ್ತಿದೆ. ಎತ್ತಿನಹೊಳೆ ಜಿಲ್ಲೆಯ ಜನರಲ್ಲಿ ಕನಸಾಗಿಯೇ ಉಳಿದಿದೆ, ಎತ್ತಿನಹೊಳೆ ಯೋಜನೆ ಯಾವಾಗ ಪೂರ್ಣಗೊಂಡು ಜಿಲ್ಲೆಗೆ ತಲುಪುತ್ತದೆ ಎಂಬ ಜಿಜ್ಞಾಸೆ ಮೂಡಿಸಿದೆ. ಕೇವಲ ರಾಜಕೀಯ ಭಾಷಣಗಳಲ್ಲಿ ಮಾತ್ರ ಯೋಜನೆ ಬಗ್ಗೆ ಮಾಹಿತಿ ಸಿಗುವುದು ಬಿಟ್ಟರೆ ಉಳಿದಂತೆ ಎತ್ತಿನಹೊಳೆಯಿಂದ ನೀರಿನ ಸೌಲಭ್ಯ ಜಿಲ್ಲೆಗೆ ಜನರಿಗೆ ಯಾವಾಗ ಸಿಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಸರ್ಕಾರದ ಈ ಬಜೆಟ್‌ನಲ್ಲಿಯಾದರೂ ಇದರ ಬಗ್ಗೆ ಚರ್ಚಿಸಿ ಅತಿ ಶೀಘ್ರದಲ್ಲಿ ಈ ಭಾಗದ ಜನರಿಗೆ ಎತ್ತಿನಹೊಳೆ ಮೂಲಕ ಕುಡಿಯುವ ನೀರು ಪೂರೈಕೆಯ ಆಶ್ವಾಸನೆ ನೀಡಲಿದೆ ಎಂಬ ಆಶಾಭಾವಕ್ಕೆ ತಣ್ಣೀರು ಎರಚಿದಂತಾಗಿದೆ.
ಕಾವೇರಿಗೆ ಮಾನ್ಯತೆ ಇಲ್ಲ:
ಜಿಲ್ಲೆಯ ನಾಲ್ಕೂ ತಾಲೂಕುಗಳ ನಗರ ಹಾಗೂ ಪಟ್ಟಣ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆಯಾಗಿ ಕಾವೇರಿ ನೀರಿನ ಸಂಪರ್ಕ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ನೆಲಮಂಗಲಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆಯಾಗಿದೆ ಎಂಬ ಮಾತು ಕೇಳಿಬಂದಿತ್ತು. ಹೊಸಕೋಟೆ ಹಾಗೂ ದೇವನಹಳ್ಳಿ ನಗರಕ್ಕೆ ಕಾವೇರಿ ಪೈಪ್‌ಲೈನ್ ಸಂಪರ್ಕ ಕಾಮಗಾರಿ ಆರಂಭವಾಗಲಿದೆ ಎಂಬ ಸುದ್ದಿ ಸದ್ದು ಮಾಡಿತ್ತು. ಆದರೆ ಬಜೆಟ್‌ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲದಿರುವುದು ಕಾವೇರಿ ಕನಸಿನ ಮಾತಾಗಿ ಉಳಿದಿದೆ.
)
ಬಯಲು ಸೀಮೆಯ ಜಿಲ್ಲೆಗಳಿಗೆ ಬಜೆಟ್‌ನಲ್ಲಿ ಶಾಶ್ವತವಾದ ನೀರಾವರಿ ಯೋಜನೆಗಳನ್ನು ಕಲ್ಪಿಸುವ ಯೋಜನೆಗಳನ್ನು ೋಷಿಸಬೇಕಿತ್ತು ಹಾಗೂ ಇದಕ್ಕೆ ಅವಶ್ಯವಿರುವ ಅನುದಾನ ಮೀಸಲಿಡಬೇಕಿತ್ತು ಈ ಭಾಗದ ರೈತರು ಮತ್ತು ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸಿಗುವ ಯೋಜನೆಗಳ ಪ್ರಸ್ತಾಪವಾಗಬೇಕಿತ್ತು. ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಇನ್ನೆರಡೇ ವರ್ಷಗಳಲ್ಲಿ ಪ್ರತಿ ಮನೆಗೆ ಶುದ್ಧ ಕುಡಿವ ನೀರು ದೊರೆಯುವುದಾಗಿ ಹೇಳಿ ವರ್ಷಗಳು ಕಳೆದವು ಹೊರತು ಯೋಜನೆ ಅನುಷ್ಠಾನಗೊಳ್ಳಲಿಲ್ಲ.
ಆಂಜನೇಯರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ
ಕೆರೆಗಳು ಕೈಗಾರಿಕೆಗಳ ರಾಸಾಯನಿಕ ಮಿಶ್ರಿತ ನೀರಿನಿಂದ ಕಲುಷಿತಗೊಳ್ಳುತ್ತಿದೆ. ಈ ಭಾಗಗಳಲ್ಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಎಸ್‌ಟಿಪಿ ಘಟಕಗಳ ಸ್ಥಾಪನೆ ಮಾಡಬೇಕು ಎಂಬ ಕೂಗಿಗೂ ಈ ಬಾರಿಯ ಬಜೆಟ್‌ನಲ್ಲಿ ಮನ್ನಣೆ ಇಲ್ಲದಂತಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಮಜರಾಹೊಸಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ದಶಕಗಳಿಂದ ಇದರ ವಿರುದ್ಧ ಹೋರಾಟ ನಡೆಯುತ್ತಿದೆ. ಈ ಬಗ್ಗೆ ಬಜೆಟ್‌ನಲ್ಲಿ ಅನುದಾನ ಸಿಗಲಿದೆ ಎಂಬ ನಿರೀಕ್ಷೆ ಇತ್ತು ಆದರೆ ಈ ಬಗ್ಗೆ ಪ್ರಸ್ತಾಪವಿಲ್ಲದಂತಾಗಿದೆ.
ವಸಂತ್‌ಕುಮಾರ್, ರೈತಸಂಘದ ಮುಖಂಡ ದೊಡ್ಡಬಳ್ಳಾಪುರ