ನೆಲಮಂಗಲ : ಮಕ್ಕಳು ದೇಶದ ಆಸ್ತಿ. ಪ್ರತಿ ಮಗುವಿಗೂ ಸಂಸ್ಕಾರ, ಮೌಲ್ಯಗಳನ್ನು ಕಲಿಸಿ ಸದೃಢ ದೇಶ ನಿಮಾರ್ಣದಲ್ಲಿ ಮಹತ್ತರ ಪಾತ್ರ ವಹಿಸುವ ಭಾವನೆ ಬೆಳೆಸಬೇಕು ಎಂದು ಸಂದೀಪ್ ಸೇವಾ ನಿಲಯಂ ನಿರ್ದೇಶಕ ಸಾಮುವೆಲ್ ಪ್ರಭಾಕರ್ ತಿಳಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಂದೀಪ್ ಸೇವಾ ನಿಲಯಂ ಸಹಯೋಗದಲ್ಲಿ ರಾಷ್ಟ್ರೀಯ ದತ್ತು ಮಾಸಾಚರಣೆ ಪ್ರಯುಕ್ತ ಆಯೋಜಿಸಿದ್ದ ಅರಿವು ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳ ದತ್ತು ಸ್ವೀಕಾರ ಪ್ರಕ್ರಿಯೆಯು ಕಾನೂನಿನ ಪರಿಧಿಯೊಳಗೆ ಇರಬೇಕು. ದತ್ತು ಪಡೆಯುವಾಗ ಏನೆಲ್ಲ ಕ್ರಮ ಅನುಸರಿಸಬೇಕು ಎಂಬ ಅರಿವು ಇರಬೇಕು. ಇಂತಹ ಜಾಥಾಗಳು ಆ ಪ್ರಕ್ರಿಯೆಗೆ ಪೂರಕವಾಗಿ ಜಾಗೃತಿ ಮೂಡಿಸುತ್ತವೆ. ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಮಕ್ಕಳನ್ನು ವಿಶ್ವಮಾನವ ಸಂದೇಶದ ಆಧಾರದಲ್ಲಿ ಬೆಳೆಸಬೇಕು. ಎರಡು ದಶಕಗಳಿಂದ ಸಂದೀಪ್ ಸೇವಾ ನಿಲಯಂ ಮಕ್ಕಳಿಗೆ ಅಕ್ಷರ, ಆಶ್ರಯ ನೀಡುತ್ತಿದೆ. ಸಂಸ್ಥೆಯಿಂದ ಸಾಕಷ್ಟು ಮಕ್ಕಳು ಸಾಧನೆ ಮಾಡಿ ವಿವಿಧ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ, ಪ್ರತಿ ಮಗುವಿಗೂ ಬದುಕುವ ಹಕ್ಕಿದೆ. ಪಾಲಕರಿಂದ ತಿರಸ್ಕರಿಸಲ್ಪಟ್ಟ ಮಕ್ಕಳನ್ನು ಅನಾಥವಾಗಿ ಬಿಡದೆ ಕಾನೂನುಬದ್ಧವಾಗಿ ದತ್ತು ನೀಡುವ ಮೂಲಕ ಮಕ್ಕಳಿಗೆ ಸುರಕ್ಷಿತ ಭವಿಷ್ಯ ಕಲ್ಪಿಸಬೇಕು. ಜತೆಗೆ ಪ್ರತಿ ಮಗುವನ್ನು ಕಾನೂನುಬದ್ಧವಾಗಿ ದತ್ತು ಸ್ವೀಕರಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ದತ್ತು ಮಾಸಾಚರಣೆ ಮುಖ್ಯಉದ್ದೇಶ ಎಂದು ಹೇಳಿದರು.
ಜಾಗೃತಿ ಜಾಥಾ: ತಾಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಸಮಾವೇಶಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ, ಸಂಜೀವಿನಿ ಗ್ರಾಪಂಮಟ್ಟದ ಒಕ್ಕೂಟದ ಮಹಿಳೆಯರ ಜಾಗೃತಿ ಜಾಥಾ ನಡೆಸಿದರು. ಬೋಸ್ಕೊ ಸಂಸ್ಥೆ ಪೋಷಕತ್ವ ಜಿಲ್ಲಾ ಸಂಯೋಜಕ ಕೆ.ಓಬಳೇಶ್, ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ಮೇಲ್ವಿಚಾರಕಿ ಪದ್ಮಾ, ವಿನುತಾ, ರೇಣುಕಾ ಇತರರು ಇದ್ದರು.