ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿನ ಇಂದಿರಾ ಕ್ಯಾಂಟೀನ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ಅಡುಗೆ ಅನಿಲ ಸಿಲಿಂಡರ್ ವ್ಯತ್ಯಯದ ಪರಿಣಾಮ ಬೀರಿಲ್ಲ.
ಸಹಸ ಸ್ಥಿತಿಯಲ್ಲಿ ಕಾರ್ಯ ಮುಂದುವರೆದಿದ್ದು ಎಂದಿನಂತೆ ಗ್ರಾಹಕರು ಇಂದಿರಾ ಕ್ಯಾಂಟೀನ್‌ನಲ್ಲಿ ಉಪಹಾರ ಸೇವಿಸುತ್ತಿದ್ದಾರೆ. ಕೊಲ್ಲಿ ಯುದ್ದದಿಂದಾಗಿ ಉಂಟಾಗಿರುವ ಗ್ಯಾಸ್ ಸಿಲಿಂಡರ್ ಸಮಸ್ಯೆಯಿಂದ ಎಲ್ಲೆಡೆ ಹೋಟೆಲ್ ಉದ್ಯಮದ ಮೇಲೆ ದುಷ್ಪರಿಣಾಮ ಬೀರಿದೆ. ಏತನ್ಯಧ್ಯೆ ಬಡವರ ಪಾಲಿನ ಕಾಮಧೇನು ಎನಿಸಿರುವ ಇಂದಿರಾ ಕ್ಯಾಂಟೀನ್ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಆತಂಕ ಎದುರಾಗಿತ್ತು. ಆದರೆ ಜಿಲ್ಲಾಡಳಿತದ ಮುಂಜಾಗ್ರತಾ ಕ್ರಮದಿಂದಾಗಿ ಎಂದಿನಂತೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಾಗುತ್ತಿದ್ದು ಸಹಜ ಸ್ಥಿತಿಯಲ್ಲಿ ಕಾರ್ಯ ಮುಂದುವರೆದಿದೆ.
ಬೀದಿ ಬದಿ ಹೋಟೆಲ್‌ಗಳು, ದರ್ಶಿನಿ ಮತ್ತಿತರ ಉಪಹಾರ ಮಂದಿರಗಳಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿದ್ದು, ಬಹುತೇಕ ಹೋಟೆಲ್‌ಗಳು ಬಾಗಿಲು ಹಾಕಿಕೊಂಡಿವೆ, ಕೆಲವು ಹೋಟೆಲ್‌ಗಳಲ್ಲಿ ಸೀಮಿತಿ ತಿಂಡಿ ಉಪಹಾರಗಳನ್ನಷ್ಟೇ ತಯಾರು ಮಾಡಲಾಗುತ್ತಿದೆ, ಇದರಿಂದ ಇಂದಿರಾ ಕ್ಯಾಂಟೀನ್‌ಗಳ ಮೇಲೆ ಗ್ರಾಹಕರ ಅವಲಂಬನೆ ಹೆಚ್ಚಾಗಿದ್ದು ಕಳೆದೊಂದು ವಾರದಿಂದ ಇಂದಿರಾ ಕ್ಯಾಂಟೀನ್‌ಗಳಿಗೆ ಬರುತ್ತಿರುವ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ ಎನ್ನಲಾಗಿದೆ.
ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳು, ವಸತಿ ನಿಲಯಗಳು, ಇಂದಿರಾ ಕ್ಯಾಂಟೀನ್‌ಗಳಿಗೆ ಎಂದಿನಂತೆ ಸಿಲಿಂಡರ್ ಪೂರೈಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಜತೆಗೆ ಗ್ಯಾಸ್ ಏಜೆನ್ಸಿ ಮುಖ್ಯಸ್ಥರ ಸಭೆ ನಡೆಸಿ ಆದ್ಯತೆ ಮೇರೆಗೆ ಸಿಲಿಂಡರ್ ಪೂರೈಸುವಂತೆ ಸೂಚನೆ ನೀಡಿದ್ದು, ಇಂದಿರಾ ಕ್ಯಾಂಟೀನ್‌ಗಳಲ್ಲಿ ಯಾವುದೇ ಅಡೆತಡೆ ಎದುರಾಗಿಲ್ಲ ಎನ್ನಲಾಗಿದೆ.
ಅಗತ್ಯ ಸೇವೆ ಅಡಿ ಸರ್ಕಾರಿ ಶಾಲೆ, ವಸತಿ ನಿಲಯ ಇಂದಿರಾ ಕ್ಯಾಂಟೀನ್‌ಗಳಿಗೆ ಆದ್ಯತೆ ಮೇರೆ ಸಿಲಿಂಡರ್‌ಗಳನ್ನು ಪೂರೈಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈಗಾಗಲೇ ಗ್ಯಾಸ್ ಏಜೆನ್ಸಿ ಮುಖ್ಯಸ್ಥರ ಸಭೆ ನಡೆಸಿ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಇಂಥ ಕಡೆಗಳಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆ ಉದ್ಭವಿಸದಂತೆ ಎಚ್ಚರಿಕೆ ವಹಿಸಲಾಗಿದೆ.
ಡಾ.ಕೆ.ಎನ್.ಅನುರಾಧಾ, ಜಿಲ್ಲಾಧಿಕಾರಿ ಬೆಂಗಳೂರು ಗ್ರಾಮಾಂತರ
ಸಮಸ್ಯೆ ಉಂಟಾದಲ್ಲಿ ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ
ಜಿಲ್ಲಾದ್ಯಂತ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಕೊರತೆಗಳು ಕಂಡು ಬಂದಲ್ಲಿ ತಾಲೂಕಿನ ಆಹಾರ ಶಾಖೆಯ ಆಹಾರ ನಿರೀಕ್ಷಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ತಿಳಿಸಿದ್ದಾರೆ.
ಪ್ರಸ್ತುತ ಕೊಲ್ಲಿ ರಾಷ್ಟ್ರದ ಯುದ್ದದ ಪರಿಣಾಮವಾಗಿ ಉದ್ಬವಿಸಿರುವ ಎಲ್ಪಿಜಿ ಸರಬರಾಜು ಬಗೆಗಿನ ಗೊಂದಲ ಬಗೆಹರಿಸಲು ರಾಜ್ಯ ಸರ್ಕಾು ತೈಲ ಕಂಪನಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್‌ಗಳ ಲಭ್ಯತೆ ಬಗ್ಗೆ ಮಾಹಿತಿ ಪಡೆದು ಸಮಸ್ಯೆ ಇಲ್ಲದ ಬಗ್ಗೆ ತೈಲ ಕಂಪನಿಗಳಿಂದ ಖಾತ್ರಿ ಪಡಿಸಿಕೊಂಡಿದೆ.
ಆಯಿಲ್ ಕಂಪನಿಗಳಿಂದ ಜಿಲ್ಲೆಗೆ ಅಡುಗೆ ಅನಿಲ ಸರಬರಾಜು ಪರಿಸ್ಥಿತಿಗನುಗುಣವಾಗಿ ಅಡುಗೆ ಅನಿಲ ಬಳಕೆ ಮಿತಿಗೊಳಿಸುವ ಬಗ್ಗೆ ಗ್ರಾಹಕರು, ಸಂಘ ಸಂಸ್ಥೆಗಳು ಇತರರಿಗೆ ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಗೃಹಬಳಕೆ ಗ್ಯಾಸ್ ಸರಬರಾಜು ಸಮರ್ಪಕವಾಗಿ ನಡೆಯುತ್ತಿದೆ. ಗೃಹ ಬಳಕೆ ಸಿಲಿಂಡರ್‌ಗಳನ್ನು 25 ದಿನಗಳ ಬಳಿಕವೇ ಬುಕ್ ಮಾಡಲು ಅವಕಾಶಕಲ್ಪಿಸಲಾಗಿದೆ. ಆದ್ದರಿಂದ ಗ್ರಾಹಕರು ಅಡುಗೆ ಅನಿಲವನ್ನು ಮಿತಬಳಕೆ ಮಾಡುವಂತೆ ಡಿಸಿ ಕೋರಿದ್ದಾರೆ.
ಆಹಾರ ನೀರಿಕ್ಷಕರು ದೇವನಹಳ್ಳಿ-9449269001, ದೊಡ್ಡಬಳ್ಳಾಪುರ-9483482766, ನೆಲಮಂಗಲ-9036434552, ಹೊಸಕೋಟೆ-9902805563.
ಸಮರ್ಪಕ ಪೂರೈಕೆಗಾಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಎಲ್ಪಿಜಿ ವಿತರಕರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗಳ ಸಮರ್ಪಕ ಸಂಗ್ರಹ ಮತ್ತು ಸರಬರಾಜು ಲಭ್ಯವಿರುವುದನ್ನು ಧೃಡಪಡಿಸಿ ಎಂದಿನಂತೆ ಎಲ್ಪಿಜಿ ವಿತರಕರು ಗ್ರಾಹಕರಿಗೆ ಮನೆಬಾಗಿಲಿಗೆ ಸರಬರಾಜು ಮಾಡುತ್ತಾರೆ. ಅಲ್ಲದೇ ಜಿಲ್ಲೆಯ ಎಲ್ಪಿಜಿ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿರುತ್ತದೆ. ಆದುದರಿಂದ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ, ಅಗತ್ಯವಿರುವ ಪ್ರಮಾಣದಲ್ಲಿ ಮಾತ್ರ ಗ್ಯಾಸ್ ಸಿಲಿಂಡರ್ ಪಡೆಯುವಂತೆ ಡಿಸಿ ವಿನಂತಿದ್ದಾರೆ.