ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಆಶಯದಂತೆ ಗ್ರಾಮಗಳು ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ದೇವನಹಳ್ಳಿ ತಾಲೂಕು ಆವತಿ ಹಾಗೂ ವೆಂಕಟಗಿರಿ ಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೋಮವಾರ 86.5 ಲಕ್ಷ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಗಾಂಧೀಜಿ ಅವರು ಗ್ರಾಮ ಸ್ವರಾಜ್ಯದ ಕನಸು ಕಂಡಿದ್ದರು. ಅವರು ಕಂಡ ಕನಸನ್ನು ಸಾಕಾರಗೊಳಿಸುವತ್ತ ಸರ್ಕಾರ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಹಂತಹಂತವಾಗಿ ಅನುಷ್ಠಾನಗೊಳಿಸುವ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.
ಮೂಲಸೌಕರ್ಯಗಳ ಅಭಿವೃದ್ಧಿಯಾಗಬೇಕು:
ಗ್ರಾಮಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಕೆರೆ ಕಟ್ಟೆ, ಅಂಗನವಾಡಿ, ಶಾಲೆ ಸೇರಿ ಮೂಲ ಸೌಕರ್ಯಗಳ ಅಭಿವೃದ್ಧಿ ಪಡಿಸುವುದರಿಂದ ಗ್ರಾಮಗಳ ಅಭಿವೃದ್ಧಿ ಕಾಣಲು ಸಾಧ್ಯ.ಗ್ರಾಮಗಳು ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವಲ್ಲಿ ಪ್ರಮಖ ಪಾತ್ರ ವಹಿಸಲಿವೆ. ನಮ್ಮ ದೇಶ ಹಳ್ಳಿಗಳ ದೇಶ ನಗರ ಪಟ್ಟಣ ಪ್ರದೇಶಗಳ ವ್ಯಾಪ್ತಿಗಿಂತ ದೊಡ್ಡಮಟ್ಟದಲ್ಲಿ ಗ್ರಾಮಗಳ ವ್ಯಾಪ್ತಿಯಿದೆ. ಜನಸಂಖ್ಯೆ ದೃಷ್ಟಿಯಿಂದಲೂ ಗ್ರಾಮಗಳು ಹೆಚ್ಚು ಮಾನವ ಶಕ್ತಿಯನ್ನು ಹೊಂದಿವೆ ಈ ನಿಟ್ಟಿನಲ್ಲಿ ಗ್ರಾಮಗಳಲ್ಲ ಜನರಿಗೆ ಮೂಲಸೌಕರ್ಯ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಸಚಿವರು ಹೇಳಿದರು.
ಸರ್ಕಾರ ಗ್ರಾಮಗಳ ಅಭಿವೃದ್ಧಿಗೆ ಹಲವು ಯೋಜನೆ ರೂಪಿಸಿ ಜಾರಿಗೊಳಿಸುತ್ತವೆ ಇದಕ್ಕೆ ಕೋಟ್ಯಂತ ರೂ ಅನುದಾನವನ್ನು ಬಿಡುಗಡೆ ಮಾಡುತ್ತದೆ. ಸಂಬಂಧಪ್ಟ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಸರ್ಕಾರ ನೀಡುವ ಅನುದಾನದ ಸದ್ಬಳಕೆ ಮಾಡಿಕೊಂಡು ಗ್ರಾಮಗಳ ಅಭಿವೃದ್ಧಿ ಮಾಡಬೇಕು ಈ ವಿಷಯದಲ್ಲಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹೆಚ್ಚಿನ ಇಚ್ಛಾಶಕ್ತಿ ಇರಬೇಕು ಎಂದು ಸಲಹೆ ನೀಡಿದರು. ಇದಲ್ಲದೆ ಕಾಮಗಾರಿಗಳು ನಡೆಯುವ ವೇಳೆ ಅಧಿಕಾರಿಗಳು ಆಗಾಗ ಸ್ಥಳ ಪರಿಶೀಲನೆ ನಡೆಸಿ ಗುಣಮಟ್ಟದ ಕಾಮಗಾರಿ ನಡೆಯುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು, ಸ್ಥಳೀಯ ಜನಪ್ರತಿನಿಧಿಗಳು ಇವುಗಳ ಮೇಲೆ ನಿಗಾ ವಹಿಸಬೇಕು ಇದರಿಂದ ಗ್ರಾಮಗಳಲ್ಲಿ ನಡೆಯುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಆವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆವತಿ ಗ್ರಾಮದಲ್ಲಿ 22 ಲಕ್ಷ ರೂ. ವೆಚ್ಚದ ಘನತ್ಯಾಜ್ಯ ವಿಲೇವಾರಿ ಘಟಕ, 15 ಲಕ್ಷ ರೂ.ವೆಚ್ಚದ ಅಂಗನವಾಡಿ ಕೇಂದ್ರ, 5 ಲಕ್ಷ ರೂ.ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ, ಆವತಿ ಗ್ರಾಮದ ವಿವಿಧ ಭಾಗಗಳಲ್ಲಿ 7.5 ಲಕ್ಷ ರೂ.ವೆಚ್ಚದ ಮುಖ್ಯದ್ವಾರಗಳ ಕಮಾನು ನಾಮಫಲಕ ಅಳವಡಿಕೆ, ಜನತಾ ಕಾಲನಿ ಗ್ರಾಮದಲ್ಲಿ 15 ಲಕ್ಷ ರೂ.ವೆಚ್ಚದ ಅಂಗನವಾಡಿ ಕೇಂದ್ರ ಹಾಗೂ 5 ಲಕ್ಷ ರೂ.ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ, ಅತ್ತಿಬೆಲೆ ಗ್ರಾಮದಲ್ಲಿ 4 ಲಕ್ಷ ರೂ.ವೆಚ್ಚದ ಹೈಮಾಸ್ಟ್‌ಲೈಟ್ ಹಾಗೂ ವೆಂಕಟಗಿರಿ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗವಾರ ಗ್ರಾಮದಲ್ಲಿ 13 ಲಕ್ಷ ರೂ.ವೆಚ್ಚದ ಅಂಗನವಾಡಿ ಕೇಂದ್ರ ಸೇರಿದಂತೆ ್ಟ 86.5 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವರು ಉದ್ಘಾಟಿಸಿದರು.