ತೋಟಗಾರಿಕೆ ಇಲಾಖೆಯಿಂದ ಅನುಷ್ಠಾನ
ತಂತ್ರಜ್ಞಾನ, ಆಧುನಿಕತೆ ಬೆಳೆದಂತೆಲ್ಲ ಕೃಷಿಯಲ್ಲಿ ಯಂತ್ರೋಪಕರಣ, ರಾಸಾಯಿನಿಕ ರಸಗೊಬ್ಬರ, ಕೀಟನಾಶಕಗಳ ಯೆಥೇಚ್ಚ ಬಳಕೆಯಿಂದ ತರಕಾರಿ, ಹಣ್ಣು ಹಂಪಲುಗಳ ಗುಣಮಟ್ಟ ಕಳೆದುಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ರೈತರು ಸಾಂಪ್ರದಾಯಿಕ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ’ಪರಂಪರಾಗತ ಕೃಷಿ ವಿಕಾಸ ಯೋಜನೆ’ ಜಾರಿಗೆ ತಂದಿದೆ. ಇದನ್ನು ಗ್ರಾಮಾಂತರ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ 2025-26 ನೇ ಸಾಲಿಗೆ ಅನುಷ್ಟಾನಗೊಳಿಸಲಾಗುತ್ತಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯ ಸುಮಾರು 500 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಎ್ಬಿಒ ಬೆಂಬಲ ಸಂಸ್ಥೆ ಹಾಗೂ ರೈತರ ಸಹಯೋಗದಲ್ಲಿ 3 ವರ್ಷದ ಅವಧಿಗೆ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದೆ.
ಪಾರಂಪರಿಕ ಕೃಷಿ ವಿಕಾಸ ಯೋಜನೆಯಡಿ ರೈತರು ಸಂಪೂರ್ಣವಾಗಿ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು. ಕೃಷಿ ಅಥವಾ ತೋಟಗಾರಿಕೆ ಯಾವುದೇ ಬೆಳೆ ಬೆಳೆಯಬಹುದು. ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಅಮೃತ ಪಾನಿ, ಗೋಮೂತ್ರ, ಜೀವಾಮೃತ-ಬೀಜಾಮೃತ, ಪಂಚಗೈವ್ಯ, ಬಯೋಡೀಜೆಸ್ಟರ್, ಜೈವಿಕ ಗೊಬ್ಬರಗಳು ಬಳಸಬೇಕು. ರಾಸಾಯಿನಿಕ ಗೊಬ್ಬರ ಕೀಟನಾಶಕಗಳನ್ನು ಬಳಸುವಂತಿಲ್ಲ. ಹೀಗೆ ಸಂಪೂರ್ಣವಾಗಿ ಸಾವಯವ ಮಾದರಿಯಲ್ಲಿ ಕೃಷಿ ಚಟುವಟಿಕೆ ನಡೆಸುವುದು.
ಸಾವಯವ ಕೃಷಿ ಕೈಗೊಳ್ಳಲು ರೈತರನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಗುಣಮಟ್ಟದ ಮತ್ತು ಸುರಕ್ಷಿತ ಸಾವಯವ ಉತ್ಪನ್ನಗಳ ಉತ್ಪಾದನೆ. ಮಣ್ಣಿನ ಫಲವತ್ತತೆ ಮತ್ತು ಉತ್ಪಾದಕತೆ ಉಳಿಸಿಕೊಳ್ಳುವುದು, ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು.
ಮಾಲಿನ್ಯ ಮುಕ್ತ ಪರಿಸರ ನಿರ್ಮಾಣ, ರಾಸಾಯನಿಕಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ, ನೈಸರ್ಗಿಕ ವಿಧಾನಗಳನ್ನು ಬಳಸಿ ಬೆಳೆ ಬೆಳೆಯಲು ರೈತರಿಗೆ ಅನುವು ಮಾಡಿಕೊಡುವುದು.
ಕೃಷಿ, ಸಂಸ್ಕರಣೆ ಮತ್ತು ಪ್ರಮಾಣೀಕರಣಕ್ಕಾಗಿ ರೈತ ಸಂಘಗಳನ್ನು ಬೆಂಬಲಿಸುವುದು. ಸ್ಥಳೀಯ ಮತ್ತು ರಾಷ್ಟ್ರೀಯ ಮಾರುಕಟ್ಟೆಗಳಿಗೆ ರೈತರನ್ನು ನೇರವಾಗಿ ಸಂಪರ್ಕಿಸುವ ಮೂಲಕ ಉದ್ಯಮಶೀಲತೆ ಬೆಳೆಸುವುದು.
ಪ್ರತಿ ಹಳ್ಳಿಯಿಂದ ತಲಾ 20 ಹೆಕ್ಟೇರ್ ಬಳಕೆ:
ಪರಂಪರಾಗತ ಕೃಷಿ ವಿಕಾಸ ಯೋಜನೆಯ ಕಾರ್ಯಗತಗೊಳಿಸಲು ಗುಚ್ಚ(ಕ್ಲಸ್ಟರ್) ಮಾದರಿ ಅನುಸರಿಸಲಾಗಿದೆ. ಸಾವಯವ ಕೃಷಿ ಪದ್ಧತಿಗಳನ್ನು ಸಾಮೂಹಿಕವಾಗಿ ರೈತರು ಅಳವಡಿಸಿಕೊಳ್ಳಲು ಪ್ರತಿ 10 ಹಳ್ಳಿಯಿಂದ ತಲಾ 20 ಹೆಕ್ಟೇರ್‌ನಷ್ಟು ಗುಂಪುಗಳಾಗಿ (ಕ್ಲಸ್ಟರ್‌ಗಳಾಗಿ) ರೈತರನ್ನು ಸಂಘಟಿಸಲಾಗುತ್ತದೆ. ಅದಕ್ಕಾಗಿ ತೂಬಗೆರೆ ಹಾಗೂ ಕಸಬಾ ಹೋಬಳಿಗಳ 15 ರಿಂದ 20 ಕಿ.ಮೀ ವ್ಯಾಪ್ತಿಯಲ್ಲಿ 500 ಹೆಕ್ಟೇರ್ ಅಂದರೆ 1250 ಎಕರೆ ಕೃಷಿ ಭೂಮಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಕೃಷಿ ಭೂಮಿಯನ್ನು ಸಾವಯವ ಕೃಷಿಗೆ ಪರಿವರ್ತನೆ ಮಾಡಲಾಗುತ್ತದೆ.
ಸಹಭಾಗಿತ್ವ ಖಾತರಿ ವ್ವವಸ್ಥೆ, ಕೊಯ್ಲೋತ್ತರ ನಿರ್ವಹಣೆ, ಸಂಸ್ಕರಣೆ, ಮೈಲ್ವರ್ಧನೆ ಹಾಗೂ ಮಾರುಕಟ್ಟೆಗೆ ಅನುಕೂಲ ಕಲ್ಪಿಸುವುದು. ಬೆಂಬಲ ಸಂಸ್ಥೆ ಹಾಗೂ ಪ್ರಾಂತೀಯ ಪರಿಷತ್ತುಗಳ ಸಹಕಾರದೊಂದಿಗೆ ಯೋಜನೆಯನ್ನು ಕಾರ್ಯಗತಗೊಳಿಸುವುದು.
ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳುವ ರೈತರಿಗೆ ಸಾವಯವ ಉತ್ಪನ್ನಗಳ ಉತ್ಪಾದನೆಗೆ ಬೇಕಾಗುವ ಮೂಲ ಸೌಕರ್ಯ ಹಾಗೂ ಸಾವಯವ ಪರಿಕರಗಳ ಖರೀದಿಗೆ ಪರ್ತಿ ವರ್ಷ 5 ಸಾವಿರ ರೂ.ಗಳಂತೆ ಮೂರು ವರ್ಷಗಳ ಕಾಲ 15 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಜತೆಗೆ ಸಾವಯವ ಉತ್ಪನ್ನಗಳಿಗೆ ಪ್ರಮಾಣಿಕರಣ, ಪ್ಯಾಕಿಂಗ್, ಲೇಬಲ್ ಮತ್ತು ಬ್ರ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಸಾವಯವ ಕೃಷಿ ವಿಧಾನದ ಮೂಲಕ ಕೃಷಿ, ತೋಟಗಾರಿಕೆ ಬೆಳೆ ಬೆಳೆಯಲು ರೈತರನ್ನು ಉತ್ತೇಜಿಸುವುದು. ಮಣ್ಣಿನ ಫಲವತ್ತತೆ ಕಾಪಾಡುವುದು, ಸೂಕ್ಷಾಣು ಜೀವಿಗಳ ರಕ್ಷಣೆ ಮಾಡುವುದು. ಉತ್ಪಾದನೆ ವೆಚ್ಚ ಕಡಿಮೆ ಮಾಡಿ ಅದಾಯ ಹೆಚ್ಚಿಸುವುದು, ಗುಣಮಟ್ಟದ ಉತ್ಪನ್ನಗಳನ್ನು ಬೆಳೆದು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಎ.ಬಿ ಬಸವರಾಜು, ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಮತ್ತು ತೂಬಗೆರೆ ಹೋಬಳಿ ವ್ಯಾಪ್ತಿಯಲ್ಲಿ 500 ಹೆಕ್ಟೇರ್ ಕೃಷಿ ಪ್ರದೇಶದಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಸಾವಯವ ಕೃಷಿ ಪದ್ದತಿ ಅಳವಡಿಸಿಕೊಳ್ಳುವ ರೈತರಿಗೆ ಅಗತ್ಯ ಪ್ರೊತ್ಸಾಹ ಕಲ್ಪಿಸಲಾಗುವುದು.
ಜೆ.ಗುಣವಂತ ಜಂಟಿ ನಿರ್ದೇಶಕ ತೋಟಗಾರಿಕೆ ಇಲಾಖೆ, ಬೆಂ.ಗ್ರಾ. ಜಿಲ್ಲೆ