ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾದ ದೊಡ್ಡಬಳ್ಳಾಪುರ ತಾಲೂಕಿನಲ್ಲಿರುವ ಹುಲುಕುಡಿ ಬೆಟ್ಟ ತನ್ನದೆ ವಿಶಿಷ್ಟತೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಧಾರ್ಮಿಕ ಕೇಂದ್ರವಾಗಿಯೂ ಚಾರಣಿಗರ ನೆಚ್ಚಿನ ತಾಣವಾಗಿಯೂ ಗಮನ ಸೆಳೆಯುತ್ತಿದೆ.
ಹುಲುಕುಡಿ ವೀರಭದ್ರ ಕ್ಷೇತ್ರವು ಐತಿಹಾಸಿಕ ಸ್ಥಳವಾಗಿದ್ದು ಇಲ್ಲಿನ ಬಗ್ಗೆ ನಿಖರವಾದ ಕಾಲ ಮತ್ತು ಸಮಯವನ್ನು ಹೇಳಬಹುದಾದ ಶಿಲಾಶಾಸನಗಳು ಕಂಡುಬರುತ್ತವೆ, ಪೌರಾಣಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿಯೂ ಹುಲುಕುಡಿ ಬೆಟ್ಟ ಈ ಭಾಗದಲ್ಲಿ ವಿಶೇಷತೆ ಹೊಂದಿದೆ.
ಮುಗಿಲು ಚುಂಬಿಸುವಂತೆ ಕಾಣುವ ಬೃಹತ್ ಬಂಡೆಗಳೆ ಈ ಹುಲುಕುಡಿ ಬೆಟ್ಟದ ವಿಶೇಷ, ನುಣುಪಾದ ಜಾರುವಂತ ಬಂಡೆಗಳ ಸಮೂಹವನ್ನು ಕಾಣಬಹುದು. ಹೆಕ್ಟೇರ್‌ಗಟ್ಟಲೆ ಭೂ ಪ್ರದೇಶದಲ್ಲಿ ವಿಸ್ತಾರವಾಗಿ ವ್ಯಾಪಿಸಿರುವ ಹುಲುಕುಡಿ ಬೆಟ್ಟದ ತುದಿ ಹತ್ತಿ ನೋಡಿದರೆ ಇಡೀ ಭೂಮಂಡಲವೇ ಕಣ್ಣಂಚಿನಲ್ಲಿ ಕಾಣಬಹುದಾದ ಅನುಭವ ದೊರೆಯುತ್ತದೆ.
ಬೆಟ್ಟದ ತಪ್ಪಲಿನ ಮಾಡೇಶ್ವರ ದೇಗುಲದ ಆವರಣ ತಂಪಿನ ವಾತಾವರಣ ನೀಡುತ್ತದೆ, ಈ ಭಾಗದ ಅನೇಕರಿಗೆ ಮನೆದೇವರಾಗಿದ್ದು ಜಾತ್ರಾ ಮಹೋತ್ಸವ ಸೇರಿ ಮನೆವಾರಗಳಂದು ಕುಟುಂಬದವರು ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಾರೆ. ಬೆಟ್ಟದ ತಪ್ಪಲಿನಲ್ಲಿ ಮಾಡೇಶ್ವರಗ್ರಾಮದ ಗುಹೆಯಲ್ಲಿ ಮುಕ್ಕನ್ಣೇಶ್ವರ ಸ್ವಾಮಿಯ ಶಿವಲಿಂಗಮೂರ್ತಿ ಅಂತ್ಯಂತ ಪುರಾತನವಾಗಿದ್ದು ಒಂದಷ್ಟು ಸಮಯ ಕುಳಿತು ಧ್ಯಾನ ಮಾಡುವಂತೆ ಪ್ರೇರೇಪಿಸುತ್ತದೆ. ಇಲ್ಲಿನ ಔಷದಿ ಗುಣವುಳ್ಳ ಹುಲ್ಲುನ್ನು ದನಕರುಗಳು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಈ ಭಾಗದ ಜನರ ನಂಬಿಕೆ ಈ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಹುಲ್ಲುಕುಡಿ ಎಂದು ಹೆಸರು ಬಂದಿದೆ ಎನ್ನಲಾಗಿದೆ.
ವೀರಭದ್ರನ ಗುಡಿಯಲ್ಲಿ ವೀರಭದ್ರ ಮೂರ್ತಿಯಿದ್ದು ಪುರಾಣಗಳ ಪ್ರಕಾರ ಈ ಕ್ಷೇತ್ರದಲ್ಲಿ ವೀರಭದ್ರ ಸ್ವಾಮಿಯು ತನ್ನ ರುದ್ರರೂಪವನ್ನು ಪ್ರದರ್ಶಿಸುತ್ತಾನೆ, ರುದ್ರರೂಪದಲ್ಲಿದ್ದ ವೀರಭದ್ರಸ್ವಾಮಿ ಬಂಡೆಗಳನ್ನು ಚೆಂಡುಗಳನ್ನಾಗಿ ಮಾಡಿಕೊಂಡು ಭೀಕರ ರೂಪ ತಾಳುತ್ತಾನೆ. ಆಗ ಈತ ಎಸೆದ ಬಂಡೆಗಳು ಬೃಹತ್ ಬೆಟ್ಟವಾಗಿ ರೂಪುಗೊಂಡಿದೆ ಎನ್ನಲಾಗಿದ್ದು ಬಂಡೆಗಳು ಉರುಳಿ ಬೀಳಲಿವೆ ಎಂಬಂತೆ ಗೋಚಿರಿಸಿದರೂ ಉರುಳದೇ ಹಾಗೇಯೇ ಶತಮಾನಗಳಿಂದ ನಿಂತಿವೆ ಎಂಬುದು ಸ್ಥಳೀಯರ ನಂಬಿಕೆಯಾಗಿದೆ. ಪುರಾಣದಲ್ಲಿ ಅಗಸ್ತ್ಯ ಮಹರ್ಷಿಗಳ ಶಿಷ್ಯರು ಪ್ರತಿನಿತ್ಯ ಒಂದು ಹುಲ್ಲುಕಡ್ಡಿ ತಿಂದು ತಮ್ಮ ದೇಹವನ್ನು ನಿಗ್ರಹಿಸಿಕೊಳ್ಳುತ್ತಿದ್ದರು ಆದ್ದರಿಂದ ಈ ಬೆಟ್ಟಕ್ಕೆ ಹುಲ್ಲುಕಡ್ಡಿ ಬೆಟ್ಟ ಎಂದು ಕರೆಯಲಾಗುತ್ತಿತ್ತು ಎನ್ನಲಾಗಿದೆ.
ಆರಂಭದಿಂದ ಬೆಟ್ಟದ ತುದಿಯವರೆಗೆ ಮೆಟ್ಟಿಲುಗಳ ವ್ಯವಸ್ಥೆ ಇದ್ದು, ಹತ್ತಲು ಸಹಾಯಕ್ಕಾಗಿ ರೇಲಿಂಗ್ ಗಳನ್ನು ಅಳವಡಿಸಲಾಗಿದೆ. ಬೆಟ್ಟ ಹತ್ತಿದಂತೆ ಕಡಿದಾಗುತ್ತಾ ಹೋದರೂ ರೇಲಿಂಗ್ ಸಹಾಯವಿರುವುದರಿಂದ ಅಪಾಯವಿಲ್ಲದೆ ಚಾರಣಿಗರು ಚಾರಣದ ಮೋಜು ಅನುಭವಿಸಬಹುದು.
ಹುಲುಕುಡಿ ಬೆಟ್ಟದಲ್ಲಿ ಸೋಮವಾರ ಶುಕ್ರವಾರ ಹಾಗೂ ಭಾನುವಾರಗಳಂದು ವಿಶೇಷ ಪೂಜೆ ನಡೆಯುತ್ತದೆ, ಪ್ರತಿ ವರ್ಷ ರಥಸಪ್ತಮಿಯಂದು ವೀರಭದ್ರಸ್ವಾಮಿ ರಥೋತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತದೆ, ಜಿಲ್ಲೆ ಸೇರಿ ನೆರೆಯ ಜಿಲ್ಲೆಗಳಿಂದ ಹಾಗೂ ಅನ್ಯ ರಾಜ್ಯದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವರ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸುತ್ತಾರೆ, ಕಾರ್ತಿಕ ಮಾಸ ಅಮಾವಾಸ್ಯೆ ಪ್ರಯುಕ್ತ ಲಕ್ಷ ದೀಪೋತ್ಸವ ಹಾಗೂ ಮುತ್ತಿನ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ.
ಬೆಂಗಳೂರಿನಿಂದ ಸುಮಾರು 53 ಕಿ.ಮೀ ಅಂತರದಲ್ಲಿದೆ, ದೊಡ್ಡಬಳ್ಳಾಪುರ ನಗರದ ಐಬಿ ಸರ್ಕಲ್‌ನಲ್ಲಿ ಎಡಕ್ಕೆ ತಿರುಗಿ ದೊಡ್ಡಬೆಳವಂಗಲ ಮಾರ್ಗವಾಗಿ ಸಾಗಿ ಬಲಭಾಗಕ್ಕೆ 13 ಕಿ.ಮೀ ಕ್ರಮಿಸಿದರೆ ಹುಲುಕುಡಿ ಕ್ಷೇತ್ರದ ದರ್ಶನವಾಗುತ್ತದೆ. ದೊಡ್ಡಬಳ್ಳಾಪುರದಿಂದ ಹೆದ್ದಾರಿ ಹಾದುಹೋಗಿದ್ದು ಸರ್ವಿಸ್ ರಸ್ತೆಯಲ್ಲಿ ಸಾಗಿ ಯೂ ಟರ್ನ್ ತೆಗೆದುಕೊಂಡು ಹುಲುಕುಡಿ ಬೆಟ್ಟದ ಮಾರ್ಗ ಹಿಡಿಯಬೇಕು.
ಬೆಟ್ಟದ ಮೇಲೆ ಬ್ರೇಕ್‌ಾಸ್ಟ್:
ಇತ್ತೀಚಿನ ದಿನಗಳಲ್ಲಿ ಬೆಟ್ಟದ ಮೇಲೆ ಬ್ರೇಕ್‌ಾಸ್ಟ್ ಎಂಬಂತ ಪರಿಕ್ಪನೆ ಹೆಚ್ಚೆಚ್ಚು ಪ್ರವರ್ಧಮಾನಕ್ಕೆ ಬರುತ್ತಿವೆ. ಇಂತಿಷ್ಟು ಎಂದು ಟಿಕೆಟ್ ದರಗಳನ್ನು ನಿಗಧಿಪಡಿಸಿದ್ದು, ಖಾಸಗಿ ಆಯೋಜಕರೇ ಪ್ರವಾಸಿಗರನ್ನು ಕರೆದೊಯ್ದು ಬೆಟ್ಟದ ಮಾಹಿತಿ ಜತೆಗೆ ಕೆಲವೊಂದು ಮನರಂಜನಾ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಅಲ್ಲಿಯೇ ಬೆಳಗಿನ ಉಪಹಾರ ನೀಡಲಾಗುತ್ತದೆ ಮುಂಜಾನೆಯೇ ಬೆಟ್ಟ ಹತ್ತಿ ಉಪಹಾರ ಸವಿಯುವ ಮೋಜು ಅನುಭವಿಸುವ ಅವಕಾಶ ಕಲ್ಪಿಸಲಾಗುತ್ತಿದೆ.