hostel-issus 
ಬೆಂಗಳೂರು ಗ್ರಾಮಾಂತರ

ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಬಡಿದಾಟ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಕುಂದಾಣ
ದೇವನಹಳ್ಳಿ ತಾಲೂಕು ಕುಂದಾಣದಲ್ಲಿನ ಮೊರಾರ್ಜಿ ವಸತಿ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ನಡುವೆ ಬಡಿದಾಟ ನಡೆದಿದ್ದು, 11 ಮಂದಿ ವಿದ್ಯಾರ್ಥಿಗಳು 9 ವಿದ್ಯಾರ್ಥಿಗಳ ಮೇಲೆ ಬೆಲ್ಟ್‌ನಿಂದ ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ವಿಶ್ವನಾಥಪುರ ಠಾಣೆಯಲ್ಲಿ ಹಲ್ಲೆಗೊಳಗಾದ ವಿದ್ಯಾರ್ಥಿಗಳ ಪಾಲಕರು ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗ್ಯಾಂಗ್ ರೌಡಿಯಿಸಂ:
ವಸತಿ ನಿಲಯದಲ್ಲಿ ಗ್ಯಾಂಗ್ ವಾರ್ ಮಾದರಿಯಲ್ಲಿ ಬಡಿದಾಟ ನಡೆದಿದೆ ಎನ್ನಲಾಗಿದ್ದು, ವಿದ್ಯಾರ್ಥಿಗಳಲ್ಲೇ 2 ಗುಂಪುಗಳಾಗಿದ್ದು, ಒಂದು ಗುಂಪಿನ ವಿದ್ಯಾರ್ಥಿಗಳು ಮತ್ತೊಂದು ಗುಂಪಿನ ವಿದ್ಯಾರ್ಥಿಗಳ ಮೇಲೆ ಪ್ರತಿನಿತ್ಯ ದೌರ್ಜನ್ಯ ನಡೆಸುತ್ತಿದ್ದರು. ಹೆದರಿಸುವುದು, ಕರೆದು ಸುಖಾಸುಮ್ಮನೆ ಹೊಡೆಯುವುದು ಮಾಡುತ್ತಿರುತ್ತಾರೆ. ಬಟ್ಟೆ ಒಗೆಯುವಂತೆ ಆದೇಶಿಸುವುದು, ಕಾಲು ಒತ್ತಿಸಿಕೊಳ್ಳುವುದು ಸೇರಿ ರ‌್ಯಾಗಿಂಗ್ ಮಾಡುತ್ತಿದ್ದಾರೆ. ಇದು ಮಂಗಳವಾರ ರಾತ್ರಿ ವಿಕೋಪಕ್ಕೆ ತಿರುಗಿ 11 ಮಂದಿ ವಿದ್ಯಾರ್ಥಿಗಳು ಮತ್ತೊಂದು ಗುಂಪಿನ 9 ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪಾಲಕರ ಆಕ್ರೋಶ:
ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದ ಮಾಹಿತಿ ತಿಳಿಯುತ್ತಿದ್ದಂತೆ ವಸತಿ ಶಾಲೆ ಆವರಣದಲ್ಲಿ ಜಮಾಯಿಸಿದ ಪಾಲಕರು ಪ್ರಾಂಶುಪಾಲರು ಸೇರಿ ಹಾಸ್ಟೆಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಮಕ್ಕಳ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಇಷ್ಟೊಂದು ಕಿರುಕುಳ ನೀಡುತ್ತಿದ್ದರೂ ಮಕ್ಕಳು ನಮ್ಮ ಗಮನಕ್ಕೆ ತಂದಿಲ್ಲ ಎಂದರೆ ಎಷ್ಟು ಹೆದರಿರಬೇಕು ಎಂದು ಪಾಲಕರು ಆತಂಕ ವ್ಯಕ್ತಪಡಿಸಿದರು. ಹಾಸ್ಟೆಲ್ ಸಿಬ್ಬಂದಿ ನಿರ್ಲಕ್ಷ್ಯದಿಂದ ಇಂಥ ಘಟನೆ ನಡೆದಿದೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪೊಲೀಸರಿಗೆ ಪಾಲಕರು ಮನವಿ ಮಾಡುತ್ತಿದ್ದ ದೃಶ್ಯ ಕಂಡುಬಂತು.
ಅಧಿಕಾರಿಗಳು ಭೇಟಿ:
ವಿಷಯ ತಿಳಿಯುತ್ತಿದ್ದಂತೆ ಬುಧವಾರ ಬೆಳಗ್ಗೆ ಪರಿಶಿಷ್ಟ ವರ್ಗಗಳ ಇಲಾಖೆ ಉಪನಿರ್ದೇಶಕ ಪಾಂಡುರಂಗ ಸ್ಥಳಕ್ಕೆ ಆಗಮಿಸಿ ಹೊಡೆದಾಡಿದ ಮಕ್ಕಳು ಮತ್ತು ಪಾಲಕರನ್ನು ಕರೆದು ಮಾಹಿತಿ ಪಡೆದರು. ಮಂಗಳವಾರ ರಾತ್ರಿ ನಡೆದ ಘಟನೆಯ ಸಂಪೂರ್ಣ ಮಾಹಿತಿ ಕಲೆಹಾಕಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಕಳೆದ 2 ದಿನದಿಂದ 10ನೇ ತರಗತಿಯ ವಿದ್ಯಾರ್ಥಿಗಳ ಪೈಕಿ 11 ಜನ ವಿದ್ಯಾರ್ಥಿಗಳು 9 ಜನ ವಿದ್ಯಾರ್ಥಿಗಳಿಗೆ ನಿರಂತರವಾಗಿ ಹೊಡೆದಿದ್ದಾರೆ. ಇವರಿಗೆ ಬೆದರಿಗೆ ಹಾಕುವುದು, ಕೇಳುವುದಿಲ್ಲವೆಂದರೆ ಹೊಡೆಯುವುದು ಮಾಡುತ್ತಿದ್ದಾರೆ. 11 ಮಂದಿಯೂ ಸಾಕಷ್ಟು ತೊಂದರೆಯನ್ನು ಕೊಡುತ್ತಿರುವ ಬಗ್ಗೆ ಶಾಲಾಡಳಿತ ಪಾಲಕರ ಗಮನಕ್ಕೆ ತಂದಿರುವುದಿಲ್ಲ. ಈ ವಿಚಾರವಾಗಿ ಠಾಣೆಗೆ ದೂರು ನೀಡಲಾಗಿದೆ ಎಂದು ಪಾಲಕರು ತಿಳಿಸಿದರು.
ಮಾತಿನ ಚಕಮಕಿ:
ವಸತಿ ಶಾಲೆ ಆವರಣದಲ್ಲಿ ಜಮಾಯಿಸಿದ ಪಾಲಕರು ಹಾಸ್ಟೆಲ್ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಂತೆ ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ನಡೆಸಿದರು. ಈ ವೇಳೆ ಮತ್ತಷ್ಟು ಕೆರಳಿದ ಪಾಲಕರು ಸಿಬ್ಬಂದಿ ವಿರುದ್ಧ ಕಿಡಿಕಾರಿದರು. ಈ ವೇಳೆ ಎರಡೂ ಕಡೆ ಮಾತಿನ ಚಕಮಕಿ ನಡೆಯಿತು. ವಸತಿ ಶಾಲಾ ಪ್ರಾಂಶುಪಾಲೆ ರೇಷ್ಮಾನಾಯಕ್, ಶಾಲಾಡಳಿತ ಮಂಡಳಿ ಸಿಬ್ಬಂದಿ ಹಾಗೂ ವಿಶ್ವನಾಥಪುರ ಠಾಣೆ ಪೊಲೀಸರು ಪಾಲಕರ ಮನವೊಲಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಟೀಂ ಲೀಡರ್:
ಒಂದು ಗುಂಪಿನ ವಿದ್ಯಾರ್ಥಿಯೊಬ್ಬ ಟೀಂ ಲೀಡರ್‌ನಂತೆ ವರ್ತಿಸುತ್ತಿದ್ದು ಉಳಿದ ವಿದ್ಯಾರ್ಥಿಗಳು ಈತನ ಅಣತಿ ಪಾಲಿಸಬೇಕಿತ್ತು ಎಂಬ ಆರೋಪ ಕೇಳಿಬಂದಿದೆ. ವಸತಿ ಶಾಲೆ ಸಿಬ್ಬಂದಿ ಮುಂದೆಯೇ ತರಗತಿಯೊಳಗೆ ನುಗ್ಗಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ, ರಾತ್ರಿ ಸುಮಾರು ಹೊತ್ತು ವಸತಿ ಶಾಲೆಯಲ್ಲಿ ಜೋರು ಗದ್ದಲ ನಡೆಯಿತು ಎಂದು ಇನ್ನಿತರ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.