hostel issus 
ಬೆಂಗಳೂರು ಗ್ರಾಮಾಂತರ

ಸವಾಲುಗಳ ನಡುವೆ ಮಕ್ಕಳ ಭವಿಷ್ಯ

ಶಿವರಾಜ.ಎಂ
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ದೇವನಹಳ್ಳಿಯ ಎಸ್‌ಎಲ್‌ಎಸ್ ವಸತಿಶಾಲೆಯಲ್ಲಿನ ಪೈಶಾಚಿಕ ಪ್ರಕರಣ ಬಳಿಕ ವಸತಿಶಾಲೆ ಮಾನ್ಯತೆ ರದ್ದಾಗುವುದು ಖಚಿತವಾಗುತ್ತಿದ್ದಂತೆ ಇಲ್ಲಿನ ಮಕ್ಕಳ ಮುಂದಿನ ಶೈಕ್ಷಣಿಕ ಭವಿಷ್ಯ ಹೇಗೆ ಎಂಬ ಪ್ರಶ್ನೆ ಉದ್ಭವಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಜಿಲ್ಲಾಡಳಿತದ ಉಸ್ತುವಾರಿಯಲ್ಲಿ ನಡೆಸಿದರೂ ಮುಂದಿನ ಶೈಕ್ಷಣಿಕ ವರ್ಷವನ್ನು ಇಲ್ಲಿನ ವಿದ್ಯಾರ್ಥಿಗಳು ಹೇಗೆ? ಎದುರಿಸಬೇಕಾಗುತ್ತದೆ ಎಂಬ ಗೊಂದಲ ಎದುರಾಗಿದೆ. ಇದೊಂದು ವಸತಿ ಶಾಲೆಯಾಗಿರುವುದರಿಂದ ವಿದ್ಯಾರ್ಥಿಗಳೆಲ್ಲರೂ ಮುಂದೆಯೂ ವಸತಿ ಶಾಲೆಗಳ ಆಶ್ರಯ ಪಡೆಯುವುದು ಅನಿವಾರ್ಯ ಎಂಬಂತಾಗಿದೆ. ರೀ ಅಡ್ಮಿಷನ್ ಹೆಸರಿನಲ್ಲಿ ಖಾಸಗಿ ವಸತಿ ಶಾಲೆಗಳ ಸುಲಿಗೆ ಗುಟ್ಟಾಗಿ ಉಳಿದಿಲ್ಲ. ಇಂಥ ಆರ್ಥಿಕ ಸವಾಲನ್ನು ಪಾಲಕರು ಹೇಗೆ ಎದುರಿಸಬೇಕು ಎಂಬ ಸಂದಿಗ್ಧ ಸ್ಥಿತಿ ಉದ್ಭವವಾಗಿದೆ. ಅದರಲ್ಲೂ ಈ ವರ್ಷ 9 ನೇ ತರಗತಿ ಓದುತ್ತಿರುವ ಮಕ್ಕಳಿಗೆ ಹೊಸ ಶಾಲೆಗಳಲ್ಲಿ ಮುಂದಿನ ಎಸ್ಸೆಸ್ಸೆಲ್ಸಿ ವ್ಯಾಸಂಗ ದುಬಾರಿಯಾಗಿ ಪರಿಣಮಿಸಲಿದೆ ಎಂಬ ಅತಂಕ ಕಾಡಲಾರಂಭಿಸಿದೆ.
565 ವಿದ್ಯಾರ್ಥಿಗಳಿದ್ದಾರೆ:
ಈ ವಸತಿ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ 544 ವಿದ್ಯಾರ್ಥಿಗಳಿದ್ದಾರೆ. ಇವರ ಪೈಕಿ 69 ವಿದ್ಯಾರ್ಥಿಗಳು ಪ್ರಸ್ತುತ ಎಸ್ಸೆಸ್ಸೆಲ್ಸಿ ಓದುತ್ತಿದ್ದಾರೆ. ಈ ಪೈಕಿ ಮುಂದಿನ ವರ್ಷ 475 ವಿದ್ಯಾರ್ಥಿಗಳು ಬೇರೆ ಬೇರೆ ಶಾಲೆಗಳಿಗೆ ದಾಖಲಾಗಬೇಕಿದೆ. ಇಷ್ಟು ವಿದ್ಯಾರ್ಥಿಗಳಿಗೆ ದೇವನಹಳ್ಳಿ ವ್ಯಾಪ್ತಿಯಲ್ಲಿ ವಸತಿ ಶಾಲೆಗಳು ಸಿಗುವುದಾದರೂ ಹೇಗೆ ಎಂಬ ಗೊಂದಲ ಎದುರಾಗಿದೆ. ಸ್ಥಳೀಯ ಸೈನಿಕ ಇಲಾಖೆಯ ಬಹುಪಾಲು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇಷ್ಟು ಮಕ್ಕಳಿಗೆ ಬೇರೆ ಶಾಲೆಗಳನ್ನು ಹುಡುಕುವುದು ಸವಾಲಿನ ಕೆಲಸವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.
ಹೊಸ ಶಾಲೆ ಹೊಸ ಜಾಗದ ಗೊಂದಲ:
ಏಕಾಏಕಿ ಈ ಪೈಶಾಚಿಕ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಇಲ್ಲಿನ ಮಕ್ಕಳು ಅವಕ್ಕಾಗಿದ್ದಾರೆ, ಶುಕ್ರವಾರದಿಂದ ಪೊಲೀಸರು ಸೇರಿ ವಿವಿಧ ಇಲಾಖೆ ಅಧಿಕಾರಿಗಳು ವಸತಿ ಶಾಲೆಗೆ ಭೇಟಿ ನೀಡುತ್ತಿರುವುದರಿಂದ ಮಕ್ಕಳಲ್ಲಿ ಆತಂಕ ಆವರಿಸಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ಹೊಸ ಶಾಲೆಗಳಿಗೆ ಸೇರುವುದು ಅನಿವಾರ್ಯವಾಗಿರುವುದರಿಂದ ಹೊಸ ಜಾಗದಲ್ಲಿ ಹೇಗೆ ಹೊಂದಿಕೊಳ್ಳುತ್ತಾರೆ ಎಂಬ ಅತಂಕ ಪಾಲಕರನ್ನು ಕಾಡಲಾರಂಭಿಸಿದೆ.
9 ನೇ ತರಗತಿ ವಿದ್ಯಾರ್ಥಿಗಳಿಗೆ ಸಂಕಷ್ಟ:
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳನ್ನು ಹೊರತುಪಡಿಸಿದರೆ ಪ್ರಸ್ತುತ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಮುಂದಿನ ಎಸ್ಸೆಸ್ಸೆಲ್ಸಿಗೆ ಬೇರೆ ಶಾಲೆಗಳಿಗೆ ಸೇರಬೇಕಿರುವುದರಿಂದ ಮಕ್ಕಳ ಶಿಕ್ಷಣದ ಮೇಲೆ ಕೊಂಚ ಪರಿಣಾಮ ಬೀರಬಹುದು, ಹೊಸ ಶಾಲೆಗಳಲ್ಲಿ ಹೊಂದಿಕೊಂಡು ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ತೊಡಕಾಗಬಹುದು ಎಂಬ ಚಿಂತೆ ಪಾಲಕರನ್ನು ಆವರಿಸಿದೆ.
ಬಾಕ್ಸ್()
ಜಿಲ್ಲಾಡಳಿತಕ್ಕೂ ಸವಾಲು:
ಪ್ರಸಕ್ತ ಶೈಕ್ಷಣಿಕ ವರ್ಷವನ್ನು ನಿಭಾಯಿಸಬೇಕಾಗಿರುವ ಹೊಣೆ ಹೊತ್ತಿರುವ ಜಿಲ್ಲಾಡಳಿತಕ್ಕೂ ಇದು ಸವಾಲಿನ ಕೆಲಸವಾಗಿದೆ. ಅಷ್ಟೂ ವಿದ್ಯಾರ್ಥಿಗಳಲ್ಲಿ ಆವರಿಸಿರುವ ಆತಂಕವನ್ನು ದೂರ ಮಾಡಿ ಪರಿಸ್ಥಿತಿ ತಿಳಿಗೊಳಿಸುವ ಪ್ರಮಖ ಹೊಣೆ ಹೊರಬೇಕಾಗಿದೆ. ಪಾಲಕರೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಮಕ್ಕಳ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ಭದ್ರತೆ ಒದಗಿಸುವ ಸವಾಲು ಜಿಲ್ಲಾಡಳಿತದ ಮುಂದಿದೆ. ಇದನ್ನು ಈಗಾಗಲೇ ರಚಿಸಿರುವ ಕಮಿಟಿ ಹೇಗೆ ನಿಭಾಯಿಸಲಿದೆ ಎಂಬುದರ ಮೇಲೆ ಎಲ್ಲವೂ ಆಧಾರವಾಗಲಿದೆ.
-----------
ಕೋಟ್()
ಪಾಲಕರೊಂದಿಗೆ ನಿರಂತರ ಸಂಪರ್ಕ ನಡೆಸಲಾಗುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಮಿಟಿ ಉಸ್ತುವಾರಿಯಲ್ಲಿ ಎಂದಿನಂತೆ ಶಾಲೆ ಕಾರ್ಯನಿರ್ವಹಿಸಲಿದ್ದು, ವಿದ್ಯಾರ್ಥಿಗಳಲ್ಲಿನ ಗೊಂದಲ ಆತಂಕ ದೂರಮಾಡುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು, ಜತೆಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿಗೆ ಸಂಬಂಧಪಟ್ಟಂತೆ ಇಲಾಖೆಯಿಂದ ಎಲ್ಲ ಸಹಕಾರ ನೀಡಲಾಗುವುದು.
ಬೈಲಾಂಜನಪ್ಪ, ಡಿಡಿಪಿಐ ಬೆಂ.ಗ್ರಾಮಾಂತರ