Hostel handed over to the district administration 
ಬೆಂಗಳೂರು ಗ್ರಾಮಾಂತರ

ಜಿಲ್ಲಾಡಳಿತದ ಸುಪರ್ದಿಗೆ ಎಸ್‌ಎಲ್‌ಎಸ್ ಹಾಸ್ಟೆಲ್

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
ದೇವನಹಳ್ಳಿಯ ಎಸ್‌ಎಲ್‌ಎಸ್ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧ ವಸತಿ ಶಾಲೆಯನ್ನು ಜಿಲ್ಲಾಡಳಿತ ರಚಿಸಿರುವ ಕಮಿಟಿ ಸುಪರ್ದಿಗೆ ಪಡೆಯುವಂತೆ ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ಆದೇಶ ಹೊರಡಿದ್ದಾರೆ.
ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಇಲಾಖೆ, ಆರೋಗ್ಯ ಇಲಾಖೆ ಸೇರಿ ಪೊಲೀಸ್ ಇಲಾಖೆಯ ಮುಖ್ಯಸ್ಥರನ್ನೊಳಗೊಂಡ ಕಮಿಟಿ ರಚಿಸಲಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷ ಅಂತಿಮಗೊಳ್ಳುವವರೆಗೂ ವಸತಿ ಶಾಲೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವಂತೆ ಸೂಚಿಸಲಾಗಿದೆ. ಆಡಳಿತಾಧಿಕಾರಿಗಳ ಉಸ್ತುವಾರಿಯಲ್ಲಿ ಶೈಕ್ಷಣಿಕ ವರ್ಷವನ್ನು ವಿದ್ಯಾರ್ಥಿಗಳು ಪೂರೈಸಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಇಬ್ಬರು ಮುಖ್ಯಶಿಕ್ಷಕರ ನಿಯೋಜನೆ:
ವಸತಿ ಶಾಲೆಯಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಮುಂದುವರೆಯಲಿದ್ದು, ಉಸ್ತುವಾರಿಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಇಬ್ಬರು ಮುಖ್ಯಶಿಕ್ಷಕರನ್ನು ನಿಯೋಜಿಸಲಾಗಿದೆ, ಅವರ ಉಸ್ತುವಾರಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಶಿಕ್ಷಣ ಮುಂದುವರೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬೈಲಾಂಜನಪ್ಪ ತಿಳಿಸಿದ್ದಾರೆ.
ಇಬ್ಬರು ಅಮಾನತು:
ಪ್ರಕರಣ ಸಂಬಂಧ ಕರ್ತವ್ಯಲೋಪದ ಆರೋಪದಡಿ ಸಿಆರ್‌ಪಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು ಎಂದು ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷ ಶಶಿಧರ್ ಕೋಸುಂಬೆ ಸೂಚಿಸಿದ್ದಾರೆ.
ಇದೊಂದು ನರಕದ ಮನೆ:
ಇದೊಂದು ಪೈಶಾಚಿಕ ಕೃತ್ಯವಾಗಿದೆ, ಇಂಥ ನೀಚ ವ್ಯಕ್ತಿಗಳ ದೌರ್ಜನ್ಯವನ್ನು ಆಯೋಗ ಎಂದಿಗೂ ಸಹಿಸುವುದಿಲ್ಲ ಇದೊಂದು ವಸತಿ ಶಾಲೆ ಎನಿಸುತ್ತಿಲ್ಲ ನರಕದ ಮನೆಯಂತೆ ಭಾಸವಾಗುತ್ತಿದೆ ಎಂದು ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷ ಶಶಿಧರ್ ಕೋಸುಂಬೆ ತೀವ್ರ ಬೇಸರ ವ್ಯಕ್ತಪಡಿಸಿದರು.
ಈ ಹೀನ ಕೃತ್ಯ ನಡೆದ ದಿನದಿಂದ ಈವರೆಗಿನ ಸಿಸಿ ಟಿವಿ ಪುಟೇಜ್‌ಗಳನ್ನು ಡಿಲಿಟ್ ಮಾಡಿದ್ದಾರೆ ಇದಕ್ಕೆ ಸಂಬಂಧಿಸಿದವರ ಹೆಸರನ್ನು ಚಾರ್ಜ್‌ಶೀಟ್‌ನಲ್ಲಿ ಸೇರಿಸಬೇಕು, ವಿಷಯ ತಿಳಿದಿದ್ದರೂ ಅದನ್ನು ಬಹಿರಂಗಪಡಿಸದವರ ವಿರುದ್ಧ ತನಿಖೆ ನಡೆಸುವಂತೆ ಎಸಿಪಿಗೆ ಸೂಚಿಸಲಾಗಿದೆ ಎಂದು ಹೇಳಿದರು.ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆಯಡಿ ಇಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿ ವಿದ್ಯಾರ್ಥಿಗೂ ಪ್ರಸಕ್ತ ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆಗೆ ಯಾವುದೇ ಅಡ್ಡಿ ಆತಂಕವಿಲ್ಲದಂತೆ ವಿಶೇಷ ನಿಗಾವಹಿಸಿ ಆಡಳಿತಾಧಿಕಾರಿಗಳನ್ನು ನೇಮಿಸಿ ಯಥಾಸ್ಥಿಯಲ್ಲಿ ಶಾಲೆ ನಡೆಯುವಂತೆ ಡಿಡಿಪಿಐಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಶಾಲಾ ಮಾನ್ಯತೆ ರದ್ದು:
ವಸತಿ ಶಾಲೆ ನಡೆಸಲು ಅನುಮತಿ ಪಡೆದಿಲ್ಲ ಹಾಗೂ ಪ್ರಸಕ್ತ ವರ್ಷ ಶಾಲೆಯ ನೋಂದಣಿ ನವೀಕರಣ ಮಾಡಿಲ್ಲ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಮಾನ್ಯತೆ ರದ್ದು ಮಾಡಲಾಗುವುದು, ಈ ವರ್ಷದ ಪರೀಕ್ಷೆ ಮುಗಿದ ಬಳಿಕ ಪಾಲಕರ ಸಭೆ ನಡೆಸಿ ಮಕ್ಕಳನ್ನು ಅನುಕೊಲಕ್ಕೆ ತಕ್ಕಂತೆ ಬೇರೆ ಶಾಲೆಗಳಿಗೆ ದಾಖಲಿಸಲು ಅವಕಾಶ ನೀಡಲಾಗುತ್ತದೆ ಎಂದು ಕೋಸುಂಬೆ ತಿಳಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಡ್ಡಿಯಿಲ್ಲ:
ಡಿಡಿಪಿಐ ಬೈಲಾಂಜಿನಪ್ಪ ಮಾತನಾಡಿ ಎಸ್ಸೆಸ್ಸೆಲ್ಸಿಯ 69 ವಿದ್ಯಾರ್ಥಿಗಳು ಸೇರಿ544 ಮಕ್ಕಳಿದ್ದಾರೆ, ಪ್ರಸಕ್ತ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯಲು ಇಲ್ಲಿನ ಮಕ್ಕಳಿಗೆ ಯಾವುದೇ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಪಿಐ ಬೈಲಾಂಜನಪ್ಪ ತಿಳಿಸಿದರು.
ಕಸ್ಟಡಿಗೆ ಆರೋಪಿಗಳು:
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ, ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೋಲೀಸ್ ಕಸ್ಟಡಿಗೆ ಪಡೆಯಲಾಗುವುದು ಎಂದು ಎಸಿಪಿ ಹರ್ಷ ತಿಳಿಸಿದರು. ಶಿಕ್ಷಣ ಇಲಾಖೆ ಜತೆ ಈ ಭಾಗದ ಖಾಸಗಿ ಶಾಲೆಗಳ ಸಭೆ ನಡೆಸಿ ಶಾಲೆಯ ಮುಖ್ಯಸ್ಥರಿಗೆ ಜವಾಬ್ದಾರಿಗಳ ಬಗ್ಗೆ ನಿರ್ದೆಶನ ನೀಡಲಾಗುವುದು ಎಂದರು.
ಏನಿದು ಪ್ರಕರಣ?
ದೇವನಹಳ್ಳಿಯ ಎಸ್‌ಎಲ್‌ಎಸ್ ವಸತಿಶಾಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಮತ್ತೊಬ್ಬ ವಿದ್ಯಾರ್ಥಿನಿ ಮೇಲೆ ಆತ್ಯಾಚಾರ ಯತ್ನ ಆರೋಪದಲ್ಲಿ ಶಾಲೆಯ ಮಾಲೀಕ ಧನಂಜಯ ಹಾಗೂ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆರೋಪದಲ್ಲಿ ಆರೋಪಿ ಪತ್ನಿ ಶಾಲೆಯ ಪ್ರಾಂಶುಪಾಲೆ ಶೈಲಜಾ ಎಂಬುವರ ವಿರುದ್ಧ ದೇವನಹಳ್ಳಿ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಬೆಂಗಳೂರು ಮೂಲದ ಅಕ್ಕತಂಗಿಯಾಗಿರುವ ಇಬ್ಬರು ವಿದ್ಯಾರ್ಥಿನಿಯರು ವಸತಿ ಶಾಲೆಯಲ್ಲಿ 7 ಹಾಗೂ 8 ನೇ ತರಗತಿಯಲ್ಲಿ ಓದುತ್ತಿದ್ದರು. ೆ.9ರಂದು ಪೈಶಾಚಿಕ ಕೃತ್ಯ ನಡೆದಿತ್ತು.