ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನಗರೀಕರಣ ಹಾಗೂ ಕೈಗಾರೀಕರಣದತ್ತ ವೇಗವಾಗಿ ಹೆಜ್ಜೆ ಹಾಕುತ್ತಿರುವ ಹೊಸಕೋಟೆ ತಾಲೂಕಿನಲ್ಲಿ ಕೃಷಿ ಭೂಮಿಗೂ ಚಿನ್ನದ ಬೆಲೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಸ್ತಿ ಮಾಲೀಕರು ತಮ್ಮ ಆಸ್ತಿಗಳನ್ನು ಸುರಕ್ಷಿತವಾಗಿಡುವ ನಿಟ್ಟಿನಲ್ಲಿ ಕಂದಾಯ ಇಲಾಖೆಯನ್ನು ಎಡತಾಕುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕಂದಾಯ ಇಲಾಖೆಯೂ ಡಿಜಟಲೀಕರಣ ಮೂಲಕ ಅಸ್ತಿಗಳ ಸಂರಕ್ಷಣೆಯಲ್ಲಿ ಮೇಲುಗೈ ಸಾಧಿಸುತ್ತಿದೆ.
ಆಸ್ತಿ ದಾಖಲೆ ತಿದ್ದುವ ಮೂಲಕ ನಡೆಯುತ್ತಿರುವ ವಂಚನೆ, ಪೋರ್ಜರಿಗಳಿಗೆ ಸಂಪೂರ್ಣ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಾಡಿರುವ ದಾಖಲೆಗಳ ಡಿಜಿಟಲೀಕರಣಕ್ಕೆ ರಾಜ್ಯದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದಿದೆ. ಇದರ ಬೆನ್ನಲ್ಲೇ ಹೊಸಕೋಟೆ ತಾಲೂಕಿನಲ್ಲಿ ಭೂದಾಖಲೆಗಳ ಡಿಜಿಟಲೀಕರಣಕ್ಕೆ ಅಧಿಕಾರಿಗಳು ಸಮರೋಪಾದಿಯಲ್ಲಿ ಶ್ರಮಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರಸಕ್ತ ನವೆಂಬರ್ ಅಂತ್ಯದ ವೇಳೆಗೆ 2340820 ದಾಖಲೆಗಳ ಡಿಜಿಟಲೀಕರಣಗೊಳಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
ಪ್ರತಿ ದಿನ ನೂರಾರು ಭೂ ಮಾಲೀಕರು ಕಂದಾಯ ಇಲಾಖೆಯಿಂದ ತಮ್ಮ ಭೂಮಿಗೆ ಸಂಬಂಧಿಸಿದ ಮ್ಯುಟೇಷನ್, ಸಿಆರ್ ದಾಖಲೆ, ಗ್ಯಾರಂಟಿ ಕಾಪಿ ಹೀಗೆ ಹಲವಾರು ಭೂ ಸಂಬಂಧಿ ದಾಖಲೆ ಪಡೆಯಲು ಪರದಾಡಬೇಕಿತ್ತು. ಆದರೆ ಡಿಜಿಟಲೀಕರಣದಿಂದ ಸದ್ಯ ಆನ್ ಲೈನ್‌ನಲ್ಲೇ ದಾಖಲೆಗಳನ್ನು ಪಡೆಯಬಹುದಾಗಿದ್ದು, ದಾಖಲೆಗಳ ಸಂರಕ್ಷಣೆ ಹಾಗೂ ಪಾರದರ್ಶಕತೆಗೆ ಸಹಕಾರಿಯಾಗಿದೆ. ಡಿಜಿಟಲೀಕರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕಿಗಳಲ್ಲಿ ಹೊಸಕೋಟೆ ತಾಲೂಕು ಮುಂಚೂಣಿಯಲ್ಲಿದೆ ಎನ್ನಲಾಗಿದ್ದು ಪ್ರತಿ ದಿನ ಸರಾಸರಿ 21250 ಕ್ಕೂ ಹೆಚ್ಚು ದಾಖಲೆ ಪ್ರತಿಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಂದಾಯ ಇಲಾಖೆಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಂರಕ್ಷಿಸುವ ಮೂಲಕ ಆನ್‌ಲೈನ್‌ನಲ್ಲಿ ಭೂ ದಾಖಲೆಗಳನ್ನು ಪಡೆಯಲು ಅನುವು ಮಾಡಿಕೊಟ್ಟಿರುವುದು ಭೂ ಮಾಲೀಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಆನ್‌ಲೈನ್ ಭೂ ದಾಖಲೆಗಳು ಏಕೆ?
ಭೂ ದಾಖಲೆಗಳ ಲಭ್ಯತೆಯಲ್ಲಿ ಪಾರದರ್ಶಕತೆ ತರುತ್ತದೆ. ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ದಾಖಲೆಗಳನ್ನು ಪಡೆಯಬಹುದು. ಭೂಮಿ ಖರೀದಿಸುವ ಮೊದಲು ಪರಿಶೀಲಿಸಲು ಸಹಾಯ ಮಾಡುತ್ತದೆ. ಡಿಜಿಟಲ್ ಸಹಿ ಮಾಡಿದ ದಾಖಲೆಗಳು ಕಾನೂನುಬದ್ಧವಾಗಿ ಮಾನ್ಯವಾಗಿರುತ್ತವೆ.
ಆನ್‌ಲೈನ್‌ನಲ್ಲಿ ಭೂ ದಾಖಲೆಗಳನ್ನು ಪಡೆಯಲು, ನಿಮ್ಮ ರಾಜ್ಯದ ಅಧಿಕೃತ ಭೂ ದಾಖಲೆಗಳ ಪೋರ್ಟಲ್ ಗೆ ಭೇಟಿ ನೀಡಿ,ಆಯ್ಕೆಗಳನ್ನು ಆರಿಸಬೇಕು; ನಂತರ ಜಿಲ್ಲೆ, ತಾಲೂಕು, ಗ್ರಾಮ ಮತ್ತು ಭೂಮಿಯ ಸರ್ವೆ ನಂಬರ್ ಖಾತೆ ನಂಬರ್ ಅಥವಾ ಮಾಲೀಕರ ಹೆಸರು ನಮೂದಿಸಿ ಪಹಣಿ, ರೂಪಾಂತರದಂತಹ ದಾಖಲೆಗಳನ್ನು ವೀಕ್ಷಿಸಿ, ಡೌನ್‌ಲೋಡ್‌ಅಥವಾ ಪ್ರಿಂಟ್ ಮಾಡಬಹುದು, ಇದು ಭೂಮಿ ಮಾಲೀಕತ್ವ, ಹಿಡುವಳಿ ಮತ್ತು ಬೆಳೆಗಳ ವಿವರಗಳನ್ನು ತಿಳಿಯಲು ಪಾರದರ್ಶಕ ಮತ್ತು ಸುಲಭ ಮಾರ್ಗವಾಗಿದೆ.
ಪ್ರತಿ ದಿನ ಹತ್ತರಿಂದ ಹದಿನೈದು ಸಾವಿರ ಭೂ ದಾಖಲೆ ಸಂಬಂಧಪಟ್ಟ ಪ್ರತಿಗಳನ್ನು ಸ್ಕ್ಯಾನಿಂಗ್ ಮೂಲಕ ಡಿಜಿಟಲೀಕರಣ ಮಾಡಲಾಗುತಿದ್ದು, ಇನ್ನು ಕೇವಲ 6ತಿಂಗಳ ಒಳಗಾಗಿ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಗುರಿ ಹೊಂದಲಾಗಿದೆ.
ಸೋಮಶೇಖರ್ ತಹಸೀಲ್ದಾರ್, ಹೊಸಕೋಟೆ.