ನಿಯಮ ಮೀರಿದರೆ ಬೀಳುತ್ತೆ ದಂಡ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ ಜ.1ರಿಂದ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಗೆ ಬರಲಿರುವ ಹಿನ್ನೆಲೆಯಲ್ಲಿ ಹೆಲ್ಮೆಟ್ ಮಾರಾಟ ಜೋರಾಗಿದೆ.
ನಗರದ ಟಿಬಿ ಸರ್ಕಲ್, ಪೊಲೀಸ್ ಠಾಣೆ ಎದುರು ಇದ್ದಕ್ಕಿಂದ್ದಂತೆ ಹೆಲ್ಮೆಟ್ ಮಾರಾಟದ ಅಂಗಡಿಗಳು ಆರಂಭವಾಗಿದ್ದು ಗ್ರಾಹಕರು ಹೆಲ್ಮೆಟ್ ಖರೀದಿಗೆ ಮುಗಿಬಿದ್ದಿರುವ ದೃಶ್ಯ ಕಂಡುಬರುತ್ತಿದೆ.
ಕಳೆದ ನಾಲ್ಕೈದು ದಿನದ ಹಿಂದೆ ಡಿವೈಎಸ್‌ಪಿ ಪಾಂಡುರಂಗ ನೇತೃತ್ವದಲ್ಲಿ ಹೆಲ್ಮೆಟ್ ಕಡ್ಡಾಯದ ಜಾಗೃತಿ ಅಭಿಯಾನ ನಡೆಸಲಾಗಿತ್ತು. ಅಪಘಾತ ಪ್ರಕರಣಗಳು ಹೆಚ್ಚಿದ್ದು ಬಹುತೇಕ ಅಪಘಾತ ಪ್ರಕರಣಗಳಲ್ಲಿ ತಲೆಗೆ ಪೆಟ್ಟಿಬಿದ್ದು ಪ್ರಾಣಹಾನಿಯಾಗಿರುವ ಸಂದರ್ಭಗಳು ಹೆಚ್ಚು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವಂತೆ ಪೊಲೀಸರು ತಿಳಿಸಿದ್ದರು. ಅಲ್ಲದೆ ಜ.1ರಿಂದ ದ್ವಿಚಕ್ರವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ನಿಯಮ ಮೀರಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಹಿನ್ನೆಲೆಯಲ್ಲಿ ದಂಡಕ್ಕೆ ಹೆದರಿದಂತಿರುವ ಗ್ರಾಹಕರು ಹೆಲ್ಮೆಟ್ ಖರೀದಿಸತೊಡಗಿದ್ದು ಹೆಲ್ಮೆಟ್ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಗುತ್ತಿದೆ.
ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು ಕಂಡುಬಂದಲ್ಲಿ, ಯಾವುದೇ ಮುಲಾಜಿಲ್ಲದೆ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗುವುದು ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದಿನಿಂದಲೂ ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂಬ ನಿಯಮವಿದ್ದರೂ ನಗರದಲ್ಲಿ ಅದು ಪಾಲನೆಯಾಗುತ್ತಿಲ್ಲ. ಪೊಲೀಸರು ಸಹ ಈ ಬಗ್ಗೆ ಮೃಧುಧೋರಣೆ ಅನುಸರಿಸುತ್ತಿರುವುದರಿಂದ ದ್ವಿಚ್ರಕವಾಹನ ಸವಾರರು ಹೆಲ್ಮೆಟ್ ಧರಿಸುವ ಗೊಡವೆಗೆ ಹೋಗುತ್ತಿಲ್ಲ. ಆದರೆ ಅಪಘಾತ ಪ್ರಕರಣಗಳಲ್ಲಿ ಪ್ರಾಣಹಾನಿಗೆ ಹೆಲ್ಮೆಟ್ ಧರಿಸದೇ ಇರುವುದೇ ಪ್ರಮುಖ ಕಾರಣ ಎಂಬುದು ಪತ್ತೆಯಾಗುತ್ತಿದ್ದು ಸಾವುನೋವಿನ ಪ್ರಮಾಣ ತಗ್ಗಿಸಲು ಪೊಲೀಸರು ಅಲರ್ಟ್ ಆಗಿದ್ದಾರೆ.
ಹೊಸ ವರ್ಷದಿಂದ ಹೆಲ್ಮೆಟ್ ಕಡ್ಡಾಯ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ನಕಲಿ ಹೆಲ್ಮೆಟ್‌ಗಳ ಮಾರಾಟವೂ ಹೆಚ್ಚಾಗಿದೆ. ಗುಣಮಟ್ಟವಲ್ಲದ ಹೆಲ್ಮೆಟ್‌ಗಳು ಕಡಿಮೆ ಬೆಲೆಗೆ ಬಿಕರಿಯಾಗುತ್ತಿವೆ. ಪೊಲೀಸರ ದಂಡಕ್ಕೆ ಹೆದರಿ ಇಂಥ ಕಳಪೆ ಹೆಲ್ಮೆಟ್‌ಗಳನ್ನು ಗ್ರಾಹಕರು ಖರೀದಿಸುತ್ತಿರುವ ದೃಶ್ಯ ಕಂಡುಬರುತ್ತಿದೆ. ಇಂಥ ಹೆಲ್ಮೆಟ್ ಧರಿಸಿದರೂ ಯಾವುದೇ ಉಪಯೋಗವಿರುವುದಿಲ್ಲ. ಸಣ್ಣ ಪೆಟ್ಟು ಬಿದ್ದರೂ ಇಂಥ ಹೆಲ್ಮೆಟ್‌ಗಳು ರಕ್ಷಣೆ ಮಾಡುವುದಿಲ್ಲ. ಹಲವಾರು ಸಂದರ್ಭಗಳಲ್ಲಿ ದ್ವಿಚಕ್ರವಾಹನ ಚಲಿಸುವಾಗ ತಲೆಯಿಂದ ಗಾಳಿಗೆ ಹಾರಿ ಹೋಗುತ್ತಿರುತ್ತವೆ. ಹೀಗೆ ರಸ್ತೆಯಲ್ಲಿ ಬಿದ್ದ ಹೆಲ್ಮೆಟ್‌ಗಳಿಂದ ಹಿಂಬದಿ ಬರುವ ವಾಹನ ಸವಾರರು ಬಿದ್ದು ಗಾಯಗೊಳ್ಳುವ ಸಾಧ್ಯತೆಗಳೂ ಹೆಚ್ಚಿರುತ್ತವೆ. ಆದ್ದರಿಂದ ಇಂಥ ಕಳಪೆ ಹೆಲ್ಮೆಟ್‌ಗಳನ್ನು ಯಾರೂ ಖರೀದಿಸಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ದಯವಿಟ್ಟು ಪೊಲೀಸರಿಗೆ ಅಥವಾ ದಂಡಕ್ಕೆ ಹೆದರಿ ಹೆಲೈಟ್ ಧರಿಸಬೇಡಿ. ನಿಮ್ಮ ಮನೆಯಲ್ಲಿ ನಿಮಗಾಗಿ ಕಾಯುವ ತಂದೆ-ತಾಯಿ, ಪತ್ನಿ-ಮಕ್ಕಳಿದ್ದಾರೆ ಎಂಬುದನ್ನು ನೆನಪಿನಲ್ಲಿಡಿ. ತಲೆಗೆ ಪೆಟ್ಟು ಬಿದ್ದು ಪ್ರಾಣ ಕಳೆದುಕೊಳ್ಳುವುದನ್ನು ತಪ್ಪಿಸಲು ಗುಣಮಟ್ಟದ ಪೂರ್ಣ ಪ್ರಮಾಣದ ಹೆಲೈಟ್ ಧರಿಸಿ
ಈ ಹಿಂದಿನಿಂದಲೂ ಈ ನಿಯಮ ಇದೆ, ಅದನ್ನು ಮತ್ತಷ್ಟು ಅನುಷ್ಟಾನಕ್ಕೆ ಶ್ರಮಿಸಲಾಗುತ್ತಿದೆ, ದ್ವಿಚಕ್ರವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು, ಅಪಘಾತ ಪ್ರಕರಣಗಳಲ್ಲಿ ತಲೆಗೆ ಪೆಟ್ಟುಬಿದ್ದು ಮೃತಪಡುವ ಸಾಧ್ಯತೆಯೇ ಹೆಚ್ಚಿರುತ್ತದೆ. ಆದ್ದರಿಂದ ತಲೆಯನ್ನು ಪೂರ್ಣವಾಗಿ ರಕ್ಷಣೆ ಮಾಡುವ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು.
ಸಾದಿಕ್‌ಪಾಷಾ, ಇನ್ಸ್‌ಪೆಕ್ಟರ್ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ