helath centre 
ಬೆಂಗಳೂರು ಗ್ರಾಮಾಂತರ

ಆರೋಗ್ಯ ಕೇಂದ್ರಕ್ಕೆ ಸಿಬ್ಬಂದಿ ಕೊರತೆ

ಶಿವರಾಜ.ಎಂ
ತ್ಯಾಮಗೊಂಡ್ಲು ಲಕ್ಷ್ಮಿಕಾಂತ್
ನೆಲಮಂಗಲ ತಾಲೂಕು ತ್ಯಾಮಗೊಂಡ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸೇವೆ ಮರೀಚಿಕೆಯಾಗುತ್ತಿದೆ. ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಜನರಿಗೆ ವೈದ್ಯಕೀಯ ಸೇವೆ ದೂರವಾಗುತ್ತಿದೆ.
ಕರೊನಾ ಸಮಯದಲ್ಲಿ ಈ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯಾಧಿಕಾರಿ ಸೇರಿ, ತಲಾ ಒಬ್ಬರಂತೆ ಅರಿವಳಿಕೆ ತಜ್ಞರು, ಪ್ರಸೂತಿ ತಜ್ಞೆ, ಮಕ್ಕಳ ತಜ್ಞ ಹಾಗೂ ದಂತ ವೈದ್ಯ ಮತ್ತು ಒಬ್ಬ ಆಯುಷ್ ವೈದ್ಯರು ಪೂರ್ಣ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ತಜ್ಞ ವೈದ್ಯರನ್ನು ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಿ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಗ್ರಾಮೀಣ ಸೇವೆ ಕಡ್ಡಾಯದಡಿ ತರಬೇತಿ ನಿರತ ಎಂಬಿಬಿಎಸ್ ವೈದ್ಯರನ್ನು ನೇಮಿಸಿದೆ.
ಖಾಸಗಿ ಆಸ್ಪತ್ರೆಯತ್ತ ಜನ:
ಸಮುದಾಯ ಆಸ್ಪತ್ರೆಯಲ್ಲಿ ಪ್ರತಿದಿನ 500ಕ್ಕೂ ಹೆಚ್ಚು ಮಂದಿ ಚಿಕಿತ್ಸೆಗೆ ಬರುತ್ತಿದ್ದು, ಸುತ್ತಮುತ್ತಲಿನ 40 ಹಳ್ಳಿಗಳ ಜನರು ಈ ಸಮುದಾಯ ಆರೋಗ್ಯ ಕೇಂದ್ರದ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ, ಈಗ ಬದಲಾದ ಪರಿಸ್ಥಿತಿಯಲ್ಲಿ ತಜ್ಞ ವೈದ್ಯರ ಸೇವೆಯಿಲ್ಲದ ಕಾರಣ ಖಾಸಗಿ ಆಸ್ಪತ್ರೆಗೆ ಅನಿವಾರ್ಯವಾಗಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಮಾನ್ಯ ಹೆರಿಗೆಗೆ ಸೀಮಿತ:
ಹೆರಿಗೆಗೂ ಯಾವುದೇ ತಡೆ ಇಲ್ಲದೆ ದಿನದ 24 ಗಂಟೆಯೂ ಸೇವೆ ಇದ್ದರೂ ಅದು ಸಾಮಾನ್ಯ ಹೆರಿಗೆಗೆ ಸೀಮಿತವಾಗಿದೆ. ಸಿಸೇರಿಯನ್ ಹೆರಿಗೆಗೆ ಈಗ ತಾಲೂಕು, ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ವಸತಿ ಗೃಹ ಇಲ್ಲ:
ವೈದ್ಯಾಧಿಕಾರಿಗಳ ವಸತಿಗೃಹ ಇಲ್ಲದ ಕಾರಣ ವೈದ್ಯರು ರಾತ್ರಿಯಲ್ಲಿ ತಂಗುವಿದಿಲ್ಲ. ಸರ್ಕಾರವು ವಸತಿ ಗೃಹ ನಿರ್ಮಿಸಲು ಆಸಕ್ತಿ ತೋರುತ್ತಿಲ್ಲ. ಕಳೆದ ವರ್ಷ ಆರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ವಸತಿಗೃಹದ ಬಗ್ಗೆ ಗಮನ ಸೆಳೆಯಲಾಗಿತ್ತು. ಅವರು ಜಿಲ್ಲಾ ವೈದ್ಯಾಧಿಕಾರಿಗೆ ವಸತಿಗೃಹದ ಪ್ರಸ್ತಾವನೆ ಕಳಿಸಲು ತಿಳಿಸಿದ್ದರು. ಆದರೆ ಇದುವರೆಗೂ ಅದರ ಬಗ್ಗೆ ಪ್ರಸ್ಥಾವನೆ ಸಲ್ಲಿಕೆಯಾಗಿಲ್ಲ ಎನ್ನಲಾಗಿದೆ. ಮಕ್ಕಳ ತಜ್ಞ ವೈದ್ಯರು ಮಾತ್ರ ಬಾಡಿಗೆ ಮನೆ ಮಾಡಿಕೊಂಡು ಪಟ್ಟಣದಲ್ಲಿ ನೆಲಸಿದ್ದಾರೆ. ವಸತಿಗೃಹ ನಿರ್ಮಾಣವಾದಲ್ಲಿ ಸರ್ಕಾರಿ ವೈದ್ಯರು, ದಾದಿಯರು ಕೇಂದ್ರದಲ್ಲೇ ಇರುವಂತಾಗಿ ರಾತ್ರಿ ವೇಳೆ ಬರುವ ರೋಗಿಗಳಿಗೆ ಅನುಕೂಲವಾಗಲಿದೆ.
ಆಂಬುಲೆನ್ಸ್ ಸೇವೆ ಇಲ್ಲ:
ಆಂಬುಲೆನ್ಸ್ ಸೇವೆ ಸಕಾಲದಲ್ಲಿ ತ್ಯಾಮಗೊಂಡ್ಲು ಭಾಗದ ಜನರಿಗೆ ಸಿಗುತ್ತಿಲ್ಲ. ತ್ಯಾಮಗೊಂಡ್ಲುವಿಗೆ ಮಂಜೂರಾಗಿದ್ದ ಆಂಬುಲೆನ್ಸ್ ರಿಪೇರಿಗಾಗಿ ಗ್ಯಾರೇಜ್‌ನಲ್ಲೇ ಹೆಚ್ಚಿನ ಸಮಯ ಇರುತ್ತದೆ. 108 ಕರೆ ಮಾಡಿದರೆ ಟಿ.ಬೇಗೂರು, ದಾಬಸ್ ಪೇಟೆ ಅಥವಾ ನೆಲಮಂಗಲ ಭಾಗದ ಆಂಬುಲೆನ್ಸ್ ಸಂಪರ್ಕಿಸುತ್ತಾರೆ. ಆದರೆ, ಆ ಭಾಗದಲ್ಲಿ ಕಾರ್ಯ ಒತ್ತಡ ಇರುವುದರಿಂದ ಸೇವೆ ಸಿಗುವುದಿಲ್ಲ.
ಮಹಿಳೆಯರ ಆರೋಗ್ಯಕ್ಕೆ ಸರ್ಕಾರ ಒತ್ತು ನೀಡಿದ್ದು ಅತ್ಯಂತ ಅವಶ್ಯವಾಗಿ ಬೇಕಿರುವ ಪ್ರಸೂತಿ ತಜ್ಞರನ್ನು ಈ ಕೂಡಲೇ ಮತ್ತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಡಬೇಕು, ಶಾಸಕರಿಗೂ ಈ ಬಗ್ಗೆ ಮನವಿ ಪತ್ರವನ್ನು ಗ್ರಾಪಂನಿಂದ ನೀಡಲಾಗುವುದು.
ಉಮಾ ಹರೀಶ್, ಗ್ರಾಪಂ ಅಧ್ಯಕ್ಷೆ ತ್ಯಾಮಗೊಂಡ್ಲು
ವರ್ಗಾವಣೆ ಸರ್ಕಾರದ ನೀತಿ, ಈಗ ತಾಲೂಕಿನಲ್ಲಿ ಇಬ್ಬರು ಪ್ರಸೂತಿ ತಜ್ಞರಿದ್ದು ದಿನಪೂರ್ತಿ ಗರ್ಭಿಣಿಯರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ, ಆಂಬುಲೆನ್ಸ್ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದ್ದು ಸಂಬಂದಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ. ಶೀಘ್ರವಾಗಿ ವೈದ್ಯರ ಸಮಸ್ಯೆ ಬಗೆಹರಿಸಿ ರೋಗಿಗಳು ಪಡುತ್ತಿರುವ ಕಷ್ಟಗಳನ್ನು ದೂರ ಮಾಡಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಡಾ.ಪದ್ಮಿನಿ, ಪ್ರಭಾರಿ ತಾಲೂಕು ವೈದ್ಯಾಧಿಕಾರಿ