ವಿಜಯಪುರ&ದೇವನಹಳ್ಳಿ ರಸ್ತೆಯ 10 ಕಿ.ಮೀ. ವ್ಯಾಪ್ತಿಯ ರಸ್ತೆಯ ಎರಡೂ ಬದಿಗಳಲ್ಲಿ ಬಿದ್ದಿರುವ ಕಸದ ರಾಶಿ.  
ಬೆಂಗಳೂರು ಗ್ರಾಮಾಂತರ

ವಿಜಯಪುರ-ದೇವನಹಳ್ಳಿ ರಸ್ತೆಯಲ್ಲಿ ಕಸದ ರಾಶಿ

> ಕೊಳೆತ ಹಣ್ಣು, ಪ್ಲಾಸ್ಟಿಕ್​ ತ್ಯಾಜ್ಯದಿಂದ ದುರ್ನಾತ > ಪುರಸಭೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

ವಿಜಯಪುರ : ದೇಶದೆಲ್ಲೆಡೆ ಸ್ವಚ್ಛತಾ ಹೀ ಸೇವಾ ಧ್ಯೇಯವಾಕ್ಯದೊಂದಿಗೆ ಸ್ವಚ್ಛತಾ ಅಭಿಯಾನ ನಡೆಯುತ್ತಿರುವ ಬೆನ್ನಲ್ಲೇ ವಿಜಯಪುರ&ದೇವನಹಳ್ಳಿ ರಸ್ತೆಯ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ.

ಸುಮಾರು 10 ಕಿ.ಮೀ. ವ್ಯಾಪ್ತಿಯ ರಸ್ತೆಯ ಎರಡೂ ಬದಿ ಕೊಳೆತ ಹಣ್ಣುಗಳು, ಪ್ಲಾಸ್ಟಿಕ್​ ತ್ಯಾಜ್ಯ, ಕಟ್ಟಡ ನಿರ್ಮಾಣದ ಅವಶೇಷಗಳು ಸೇರಿ ವಿವಿಧ ಬಗೆಯ ತ್ಯಾಜ್ಯ ತುಂಬಿಕೊಂಡಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಸಂಚರಿಸುವಂತಾಗಿದೆ. ತಿಂಗಳುಗಳಿಂದ ನಿರಂತರವಾಗಿ ತ್ಯಾಜ್ಯ ಸುರಿಯುತ್ತಿರುವುದರಿಂದ ಮಳೆ ನೀರಿನೊಂದಿಗೆ ಕೊಳೆತು ದುರ್ವಾಸನೆ ಬೀರುತ್ತಿದೆ.

ಅಲ್ಲದೇ ಸತ್ತ ಪ್ರಾಣಿಗಳ ಮೃತದೇಹಗಳನ್ನೂ ಎಸೆಯುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಕೂಡಲೇ ಸಂಬಂಧಿಸಿದ ಇಲಾಖೆಗಳು ವ್ಯಾಪ್ತಿಯ ಗೊಂದಲ ಬದಿಗಿಟ್ಟು ಸಮನ್ವಯದಿಂದ ಕಾರ್ಯನಿರ್ವಹಿಸಿ. ತ್ಯಾಜ್ಯ ತೆರವು, ಎಚ್ಚರಿಕೆ ಫಲಕ, ಸಿಸಿ ಕ್ಯಾಮರಾ ಅಳವಡಿಕೆ ಹಾಗೂ ಕಸ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

ಒಳಗೆ ಸ್ವಚ್ಛತೆ, ಹೊರಗೆ ಗಬ್ಬು! : ಈ ಭಾಗದಲ್ಲಿ ಹಲವು ವಿಲ್ಲಾ ಹಾಗೂ ಅಪಾರ್ಟ್​ಮೆಂಟ್​ಗಳು ನಿರ್ಮಾಣವಾಗುತ್ತಿವೆ. ವಸತಿ ಸಮುಚ್ಚಯಗಳ ಒಳಭಾಗದಲ್ಲಿ ಸ್ವಚ್ಛತೆ ಕಾಪಾಡಿಕೊಂಡಿದ್ದರೂ, ಹೊರಭಾಗದ ಪರಿಸರ ಮಾತ್ರ ಕಸದ ರಾಶಿಯಿಂದ ಗಬ್ಬು ನಾರುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಎಚ್ಚರಿಕೆ ಫಲಕಗಳೇ ಇಲ್ಲ : ಸವೋರ್ದಯ ಮಂಡಳಿ ಅಧ್ಯಕ್ಷ ಡಾ.ವಿ.ಪ್ರಶಾಂತ್​ ಮಾತನಾಡಿ, ಜನರು ಮನೆಗಳನ್ನು ಸ್ವಚ್ಛವಾಗಿಟ್ಟುಕೊಂಡು, ರಸ್ತೆ ಬದಿಯ ಅರಣ್ಯ ಇಲಾಖೆಗೆ ಸೇರಿದ ಮಳೆನೀರು ಹರಿಯುವ ಕಾಲುವೆಗಳಲ್ಲಿ ಗೃಹಬಳಕೆಯ ವಸ್ತುಗಳು ಸೇರಿ ಇತರೆ ತ್ಯಾಜ್ಯ ಎಸೆಯುತ್ತಿದ್ದಾರೆ. ಆದರೂ, ಪುರಸಭೆ ಈ ಭಾಗದಲ್ಲಿ ಕಸ ಹಾಕದಂತೆ ನಾಮಫಲಕ ಅಳವಡಿಸಿಲ್ಲ ಎಂದು ಆರೋಪಿಸಿದರು.

ಪುರಸಭೆ ವ್ಯಾಪ್ತಿಯಲ್ಲಿ ಯಾವುದೇ ಕಸ ಇಲ್ಲ. ಆದರೆ ಪಟ್ಟಣದ ಸ್ವಚ್ಛತೆ ಪೌರಕಾರ್ಮಿಕರಿಗೆ ದೊಡ್ಡ ಸವಾಲಾಗಿದೆ. ನಮ್ಮ ವ್ಯಾಪ್ತಿಯ ಹೊರಗಿನ ಪ್ರದೇಶಗಳಲ್ಲಿ ನಿರಂತರವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳುವುದು ಸಾಧ್ಯವಾಗುತ್ತಿಲ್ಲ.
> ಸತ್ಯನಾರಾಯಣ ಪುರಸಭೆ ಮುಖ್ಯಾಧಿಕಾರಿ