ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿಯ ಏರೋಸ್ಪೇಸ್ ಕೈಗಾರಿಕಾ ಪ್ರದೇಶದಲ್ಲಿರುವ ಸಾಸ್ಕೋಸ್ ಏರೋಸ್ಪೇಸ್ ಕಂಪನಿಯಲ್ಲಿ ಏ.15 ರಂದು ಆಹಾರ ಸೇವಿಸಿದ 700ಕ್ಕೂ ಹೆಚ್ಚು ಕಾರ್ಮಿಕರ ಪೈಕಿ ತೀವ್ರ ಅಸ್ವಸ್ಥಗೊಂಡಿದ್ದ 90ಕ್ಕೂ ಹೆಚ್ಚು ಕಾರ್ಮಿಕರು ಚೇತರಿಸಿಕೊಂಡಿದ್ದು, ಹಲವರು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. 47 ಕಾರ್ಮಿಕರನ್ನು ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ಹಾಗೂ 50 ಜನರನ್ನು ನ್ಯೂ ಮಾನಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯಾವುದೇ ಪ್ರಾಣಪಾಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಲಕ್ಕಕೃಷ್ಣಾರೆಡ್ಡಿ ತಿಳಿಸಿದ್ದಾರೆ.
ವಿಮಾನಗಳ ಬಿಡಿಭಾಗ ತಯಾರಿಸುವ ಸಾಸ್ಕೋಸ್ ಏರೋಸ್ಪೇಸ್ ಕಂಪನಿಯಲ್ಲಿ ಮಧ್ಯಾಹ್ನ ಭೋಜನದ ಸಮಯದಲ್ಲಿ ಕಾರ್ಮಿಕರು ಅನ್ನ ಸಾಂಬಾರು ಸೇವಿಸಿದ್ದರು. ಕೆಲಸ ಮುಗಿಸಿ ಮನೆಗಳಿಗೆ ತೆರಳಿದ ನಂತರ ಹಲವರಲ್ಲಿ ವಾಂತಿ, ಭೇದಿ ಲಕ್ಷಣ ಕಾಣಿಸಿಕೊಂಡಿತ್ತು. ಇದರಲ್ಲಿ ಕೆಲವರು ತೀವ್ರ ಅಸ್ವಸ್ಥಗೊಂಡಿದ್ದರು.ಕಂಪನಿ ಸಿಬ್ಬಂದಿ ತಕ್ಷಣ ಅಸ್ವಸ್ಥ ಕಾರ್ಮಿಕರನ್ನು ದೇವನಹಳ್ಳಿಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿದ್ದರು.
ಆಹಾರ ಗುಣಮಟ್ಟದ ಮೇಲೆ ಅನುಮಾನ:
ಕಂಪನಿಯ ಭೋಜನಾಯಲದಲ್ಲಿ ತಯಾರಿಸಲಾದ ಆಹಾರದ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಸ್ವಚ್ಛತೆ ಕೊರತೆಯಿಂದ ಸೋಂಕು ಆಗಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆಹಾರ ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಲಾಗಿದ್ದು, ವರದಿ ಬಳಿಕ ಪ್ರಕರಣಕ್ಕೆ ಕಾರಣವೇನು ಎಂಬುದು ಖಚಿತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನ್ನಪ್ರಸಾದ ವೇಳೆ ಅಶುಚಿತ್ವ!
ಇತ್ತೀಚಿಗೆ ದೇವನಹಳ್ಳಿ ತಾಲೂಕು ಬೆಟ್ಟೆನಹಳ್ಳಿಯಲ್ಲಿ ಅನ್ನಪ್ರಸಾದ ಸೇವಿಸಿ ನೂರಾರು ಮಂದಿ ಅಸ್ವಸ್ಥಗೊಂಡಿದ್ದ ಪ್ರಕರಣ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ನಪ್ರಸಾದವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿಯಲ್ಲಿ ಅನ್ನಪ್ರಸಾದಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಆದರೆ ಪ್ರಸಾದ ತಯಾರಿಕೆಯಲ್ಲಿ ಸ್ವಚ್ಛತೆ ಕೊರತೆಯಿಂದ ಪುಡ್‌ಪಾಯಿಜನ್ ಆಗಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ ಇಂಥ ಸಾಮೂಹಿಕ ಭೋಜನದ ವೇಳೆ ಯಾರಿಗಾದರೂ ಆರೋಗ್ಯದಲ್ಲಿ ದಿಢೀರ್ ಏರುಪೇರಾದರೆ ಜತೆಯಲ್ಲಿರುವವರು ದಿಢೀರ್ ದಿಗಿಲುಗೊಳ್ಳುತ್ತಾರೆ ಇದರಿಂದಲೂ ಅನೇಕರಲ್ಲಿ ಆರೋಗ್ಯ ಸಮಸ್ಯೆಕಾಣಿಸಿಕೊಳ್ಳು ಸಾಧ್ಯತೆ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಡುಗೆ ಮನೆಯಲ್ಲಿ ಸ್ವಚ್ಛತೆ ಕಾಪಾಡಬೇಕು, ಗುಣಮಟ್ಟದ ಅಹಾರ ಪದಾರ್ಥ, ಶುದ್ಧ ನೀರು ಬಳಸಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಬುಧವಾರ ಮುಂಜಾನೆ ಸಾಸ್ಕೋಸ್ ಏರೋಸ್ಪೇಸ್ ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಕಂಪನಿಯಲ್ಲಿ ನೀಡಿದ್ದ ಆಹಾರ ಸೇವಿಸಿ ತೊಂದರೆಯಾಗಿರುವ ಬಗ್ಗೆ ರೋಗಿಗಳು ಮಾಹಿತಿ ನೀಡಿದ್ದಾರೆ. ರೋಗಿಗಳ ದೇಹದಲ್ಲಿ ಲವಣಾಂಶ ಹಾಗೂ ತೇವಾಂಶ ಕಡಿಮೆಯಾಗಿದ್ದು ಪ್ರಥಮ ಚಿಕಿತ್ಸೆ ನೀಡಲಾಗಿದೆ. ಈಗಾಗಲೇ ರಕ್ತ ಮತ್ತು ಮೂತ್ರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದೇವೆ ಯಾವುದೇ ಪ್ರಾಣಾಪಾಯವಿಲ್ಲ.
ಡಾ. ನರಸಾರೆಡ್ಡಿ, ವೈದ್ಯ, ನ್ಯೂ ಮಾನಸ ಆಸ್ಪತ್ರೆ.
ತಾಲೂಕು ವೈದ್ಯಾಧಿಕಾರಿಗಳು ಹಾಗೂ ಸರ್ಕಾರಿ ಆಸ್ಪತ್ರೆಯ ವೈದ್ಯರು ರೋಗಿಗಳ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ. ರಕ್ತ ಮತ್ತು ಮೂತ್ರ ಪರೀಕ್ಷೆಗೆ ಕಳುಹಿಸಲಾಗಿದೆ. ಕಂಪನಿಯ ಆಹಾರ ಮಾದರಿಗಳನ್ನು ಪರಿಶೀಲನೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು.
ಡಾ.ಲಕ್ಕಕೃಷ್ಣಾರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ, ಬೆಂಗಳೂರು ಗ್ರಾಮಾಂತರ