halasu mela 
ಬೆಂಗಳೂರು ಗ್ರಾಮಾಂತರ

ತೂಬಗೆರೆ ಚಂದ್ರ ಹಲಸು ಸವಿದ ಮಾಜಿ ಪ್ರಧಾನಿ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಏರ್ಪಡಿಸಿರುವ ಹಲಸು ಮೇಳದಲ್ಲಿ ಪ್ರದರ್ಶನಕ್ಕಿಟ್ಟಿದ್ದ ತೂಬಗೆರೆ ಚಂದ್ರ ಹಲಸು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಗಮನ ಸೆಳೆಯಿತು.
ತೂಬಗೆರೆ ಹಲಸು ಬೆಳೆಗಾರರ ಸಂಘದ ಸದಸ್ಯ ನಟರಾಜ ಬೆಳೆದಿರುವ ಈ ಹಲಸನ್ನು ವೀಕ್ಷಿಸಿದ ದೇವೇಗೌಡರು ಅದರ ರುಚಿ ಸವಿದು, ಗುಣಮಟ್ಟ ಹಾಗೂ ವಿಶೇಷತೆಗಳ ಕುರಿತು ಮಾಹಿತಿ ಪಡೆದರು. ವಿಶಿಷ್ಟ ಬಣ್ಣ, ಸುವಾಸನೆ ಮತ್ತು ರುಚಿಯಿಂದ ಹೆಸರುವಾಸಿಯಾಗಿರುವ ತೂಬಗೆರೆ ಹಲಸು ರಾಜ್ಯದ ಪ್ರಮುಖ ಸ್ಥಳೀಯ ತಳಿಗಳಲ್ಲಿ ಒಂದಾಗಿದೆ. ಈ ಭಾಗದಲ್ಲಿ ಬೆಳೆಯುವ ಎಂಟು ಹಲಸು ತಳಿಗಳಿಗೆ ವಿಶೇಷ ಪೇಟೆಂಟ್ ಸಿಕ್ಕಿದೆ ಎನ್ನಲಾಗಿದೆ. ಕೇಂದ್ರ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸಸ್ಯ ಪ್ರಭೇದಗಳು ಮತ್ತು ರೈತರ ಹಕ್ಕುಗಳ ಸಂರಕ್ಷಣಾ ಪ್ರಾಧಿಕಾರ (ಪಿಪಿಎಫ್‌ಆರ್‌ಎ) ದಿಂದತೂಬಗೆರೆ ಸುತ್ತಮುತ್ತಲಿನ ಎಂಟು ಹಲಸು ತಳಿಗಳಿಗೆ, ಹಲಸಿನ ಹಣ್ಣಿನಲ್ಲೇ ಉತ್ಕೃಷ್ಟ ಎಂದು ಗುರುತಿಸಿರುವ ಹಕ್ಕು ಸ್ವಾಮ್ಯ (ಪೇಟೆಂಟ್) ಪ್ರಮಾಣಪತ್ರ ನೀಡಿದೆ. ಇದರಿಂದ ಈ ತಳಿಗಳ ವಿಶಿಷ್ಟತೆ ಹಾಗೂ ಸಂರಕ್ಷಣೆಗೆ ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ದೊರೆತಂತಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
---