ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತ
ರಾಜ್ಯದಲ್ಲಿ 2 ಲಕ್ಷ 6 ಸಾವಿರ ಪೋಡಿ ಪ್ರಕರಣಗಳ ದುರಸ್ತಿ ಮಾಡಲಾಗಿದ್ದು ಮುಂದಿನ ಎರಡು ವರ್ಷಗಳಲ್ಲಿ 5 ಲಕ್ಷ ಪೋಡಿ ದುರಸ್ತಿ ಮಾಡುವ ಗುರಿ ಹೊಂದಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.
ಹೊಸಕೋಟೆ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಬೆಂಗಳೂರು ಜಿಲ್ಲೆಯ ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ಮಾತನಾಡಿದರು. ಸರ್ಕಾರ ಏನು ಕೆಲಸ ಮಾಡಿದೆ ಅದನ್ನು ತೋರಿಸಬೇಕು ಎನ್ನುವ ಉದ್ದೇಶದಿಂದ ಸಮರ್ಪಣಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಕಳೆದ ವರ್ಷ 1238 ಪೋಡಿ ದುರಸ್ತಿ ಆಗಿತ್ತು, ಪ್ರಸ್ತುತ 4238 ಪೋಡಿ ಪ್ರಕರಣ ದುರಸ್ತಿ ಮಾಡಲಾಗಿದೆ. ಅರ್ಜಿ ಕೊಡಿ, ಕಚೇರಿಗೆ ಬನ್ನಿ, ಮಧ್ಯವರ್ತಿಗಳ ಹಾವಳಿಗೆ ಅವಕಾಶ ನೀಡದೇ ಸ್ವಯಂ ಪ್ರೇರಿತರಾಗಿ ರೈತರ ಮನೆ ಬಾಗಿಲಿಗೆ ಪೋಡಿ ದುರಸ್ತಿ ಮಾಡಿಕೊಡಲಾಗಿದೆ. ಇದು ನಮ್ಮ ಗ್ಯಾರಂಟಿ ಎಂದರು. ಕಂದಾಯ ಕೆಲಸಗಳು ಕ್ಷಿಪ್ರವಾಗಿ ನಡೆಯಲು 1219 ಲೈಸೆನ್ಸ್ ಸರ್ವೇಯರ್ ಇದ್ದಾರೆ. ಅವರಿಗೆ ರೋಬೋ ಮಿಷನರಿ ಕೊಟ್ಟು ಕೆಲಸದ ಒತ್ತಡ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ. ವಿಎಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು ರೈತರ ಮನೆಬಾಗಿಲಿಗೆ ಹೋಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೆ 1 ಸಾವಿರ ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. 750 ಸರ್ವೆಯರ್ ನೇಮಕಾತಿ ಮಾಡಲಾಗುತ್ತಿದೆ. ರಾಜ್ಯಾದ್ಯಂತ 7850 ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸ್ಥಾಪಿಸಲಾಗಿದೆ. ಇವೆಲ್ಲವೂ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಾಡುತ್ತಿರುವ ಕೆಲಸಗಳು ಎಂದು ಸಚಿವರು ವಿವರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, 75 ವರ್ಷಗಳಿಂದ ಸಾಕಷ್ಟು ರೈತರ ಭೂಮಿ ಪೋಡಿ, ಆಕಾರ್‌ಬಂದ್, ಹಕ್ಕು ಪತ್ರ ಸಿಕ್ಕಿಲ್ಲ ಎಂಬ ಸಮಸ್ಯೆ ಇತ್ತು. ಇದನ್ನು ಬಗೆ ಹರಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೃಷ್ಣ ಬೈರೇಗೌಡ ಅವರಿಗೆ ಕಂದಾಯ ಇಲಾಖೆ ನೀಡಿದೆ ಎಂದರು. ರೈತರು ಕಚೇರಿಗೆ ಅಲೆಯುವುದು, ರೈತರ ಸಮಯ ವ್ಯರ್ಥ, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕಂದಾಯ ಸಚಿವರು ನಿರಂತರವಾಗಿ ಕೆಲಸ ಮಾಡಿ ಮನೆ ಮನೆಗೆ ಹಕ್ಕು ಪತ್ರ ನೀಡುವ ಕೆಲಸ ಮಾಡುತ್ತಿದ್ದಾರೆ. ರಿಯಲ್ ಎಸ್ಟೇಟ್ ಮಾಫಿಯಾಗಳು ಅನಗತ್ಯವಾಗಿ ರೈತರಿಗೆ ಕಿರುಕುಳ, ದಾಖಲೆ ತಿರುಚುವುದು, ತಿದ್ದುಪಡಿ ಮಾಡುವುದು, ನಕಲಿ ದಾಖಲೆ ಸೃಷ್ಟಿಸುವುದು, ದಾಖಲೆಗಳ ಕಳವು ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ ಎಂದರು. ಪ್ರತಿ ತಾಲೂಕಿನಲ್ಲಿ 5 ಸಾವಿರ ಮನೆ, ನಿವೇಶನಗಳ ಅವಶ್ಯಕತೆ ಇದೆ. ಪಂಚಾಯಿತ್‌ರಾಜ್ ಸಚಿವರು, ಕಂದಾಯ ಸಚಿವರು ಒಟ್ಟಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜತೆ ಸಭೆ ನಡೆಸಿ. ಎಲ್ಲೆಲ್ಲಿ ನಿವೇಶನ ಹಾಗೂ ಮನೆ ನೀಡಲು ಅವಕಾಶ ಇದೆ ಅಲ್ಲಿ ಅತ್ಯಂತ ಜರೂರಾಗಿ ವಿಶೇಷ ಸಭೆ ಕರೆದು ಹಂತಹಂತವಾಗಿ ಮನೆ, ನಿವೇಶನ ಒದಗಿಸಲಿದ್ದಾರೆ ಎಂದರು.
ಕೆಳವರ್ಗದ ಏಳಿಗೆಗಾಗಿ ಶ್ರಮಿಸುತ್ತಿದೆ:
ಸರ್ಕಾರದ ಕಾರ್ಯಕ್ರಮ, ಯೋಜನೆಗಳು ಸಮಾಜದ ಕೆಳವರ್ಗದ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದು ಶಾಸಕ ಶರತ್‌ಬಚ್ಚೇಗೌಡ ಹೇಳಿದರು. ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಉಳುವವನಿಗೆ ಭೂಮಿ ಎಂದು ರೈತರ ಪರವಾಗಿ ಕ್ರಾಂತಿ ಮಾಡಿದರು. ಈಗ ಸಚಿವ ಕೃಷ್ಣಭೈರೇಗೌಡರು ಕಂದಾಯ ಇಲಾಖೆಯ ವತಿಯಿಂದ ಪೋಡಿ, ಪೌತಿಖಾತೆ, ಸಾಮಾಜಿಕ ಭದ್ರತಾ ಯೋಜನೆ ಹಾಗೂ ವಿವಿಧ ಯೋಜನೆಗಳ ಮೂಲಕ ಸಮಾಜದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
15,675 ಕಂದಾಯ ಸೇವೆಗಳ ದಾಖಲೆ ವಿತರಣೆ:
ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ಜಿಲ್ಲೆಯ 3500 ದರಖಾಸ್ತು ಪೋಡಿ, 75 ಕಂದಾಯ ಗ್ರಾಮಗಳ ಹಕ್ಕುಪತ್ರ, 10,100 ಪೌತಿ ಖಾತೆ, 2 ಸಾವಿರ ಸಾಮಾಜಿಕ ಭದ್ರತೆಯ ಅಭಿಯಾನ ಸೇರಿ 15,675 ಕಂದಾಯ ಸೇವೆಗಳ ದಾಖಲೆಗಳನ್ನ ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು.