ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲೆಯಲ್ಲಿನ ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ವಿತರಣೆಯಲ್ಲಿ ವಿಳಂಬ ಧೋರಣೆ ಮುಂದುವರೆದಿದೆ ಜತೆಗೆ ಕೆಲವು ಪಠ್ಯ ಪುಸ್ತಕಗಳ ವಿತರಣೆಯೂ ಬಾಕಿ ಉಳಿದಿದೆ.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ 2 ತಿಂಗಳು ಕಳೆಯುತ್ತಿದ್ದರೂ ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ವಿತರಣೆಯಾಗಿಲ್ಲ ಜತೆಗೆ ಕೆಲವೊಂದು ಪಠ್ಯ ಪುಸ್ತಕಗಳ ವಿತರಣೆಯೂ ಆಗಿಲ್ಲ ಈ ಹಿನ್ನೆಲೆಯಲ್ಲಿ ಮಕ್ಕಳ ಪಾಲಕರು ಪ್ರತಿನಿತ್ಯ ಶಾಲಾ ಆಡಳಿತ ಮಂಡಳಿಯನ್ನು ಎಡತಾಕುತ್ತಿದ್ದು ಶೂ ಹಾಗೂ ಸಾಕ್ಸ್ ಕೊಡುವುದು ಯಾವಾಗ ಎಂದು ಪ್ರಶ್ನಿಸುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ಸರ್ಕಾರ ಪ್ರತಿವರ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರದೊಂದಿಗೆ ಶೂ ಮತ್ತು ಸಾಕ್ಸ್‌ಗಳನ್ನು ಉಚಿತವಾಗಿ ನೀಡುತ್ತಾ ಬಂದಿದೆ. ಕೆಲವು ವರ್ಷದಿಂದ ಈ ವಿತರಣೆಯಲ್ಲಿ ವಿಳಂಬವಾಗುತ್ತಲೇ ಇದೆ ಅದೇ ರೀತಿ ಈ ಬಾರಿಯೂ ಪುನಾವರ್ತನೆಯಾಗಿದ್ದು ಮಕ್ಕಳು ಹಳೇಯ ಶೂಗಳನ್ನೇ ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಮಕ್ಕಳ ಬಳಿ ಹಳೇ ಶೂಗಳು ಹಾಳಾಗಿದ್ದು ಚಪ್ಪಲಿ ಧರಿಸಿ ಶಾಲೆಗೆ ಬರುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಸಮವಸ ಶೂ ಹಾಗೂ ಸಾಕ್ಸ್ ಮೂಲಕ ಮಕ್ಕಳಲ್ಲಿ ಏಕರೂಪತೆ ವಾತಾವರಣ ನಿರ್ಮಿಸುವುದು ಸರ್ಕಾರದ ಉದ್ದೇಶವಾಗಿದೆ. ಆದರೆ ಕೆಲವು ಮಕ್ಕಳು ಚಪ್ಪಲಿ ಧರಿಸಿ ಬರುತ್ತಿರುವುದರಿಂದ ಸರ್ಕಾರದ ಆಶಯಕ್ಕೆ ಧಕ್ಕೆ ತರುವಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಮಕ್ಕಳು, ಪಾಲಕರಲ್ಲಿ ನಿರಾಸೆ:
ಜಿಲ್ಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಸುಮಾರು 52 ಸಾವಿರ ಮಕ್ಕಳ ದಾಖಲಾತಿ ಇತ್ತು. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 47,742 ಮಕ್ಕಳ ದಾಖಲಾತಿ ಇದೆ. ಸದ್ಯ ಮಕ್ಕಳ ಕಾಲಿನ ಅಳತೆಯ ಅನುಸಾರ 16 ರಿಂದ 32 ಸೆಂಟಿಮೀಟರ್ ಅಳತೆಯ ಶೂಗಳಿಗೆ ಬೇಡಿಕೆ ಸಲ್ಲಿಸಲಾಗಿದ್ದು, ಎಲ್ಲ ಮಕ್ಕಳಿಗೆ ಅವರ ಅಳತೆಯ ಅನುಸಾರವಾಗಿ ಶೂಗಳನ್ನು ನೀಡಬೇಕಿದೆ. ಆದರೆ 2 ತಿಂಗಳು ಕಳೆದರೂ ಈ ಪ್ರಕ್ರಿಯೆ ಪೂರ್ಣಗೊಳ್ಳದಿರುವುದು ಮಕ್ಕಳು ಹಾಗೂ ಪಾಲಕರಲ್ಲಿ ನಿರಾಸೆ ಮೂಡಿಸಿದೆ.
ಸರ್ಕಾರಿ ಶಾಲೆಗಳಲ್ಲಿ ಕೆಲವು ವಿಷಯಗಳ ಪುಸ್ತಕಗಳ ಪೂರೈಕೆ ಇನ್ನು ಬಾಕಿ ಇದೆ ಎನ್ನಲಾಗಿದೆ. ಶಾಲೆಯ ಮೊದಲ 2 ತಿಂಗಳು ಪೂರ್ಣಗೊಂಡಿದ್ದರು ಪಠ್ಯಪುಸ್ತಕಗಳು ಮಕ್ಕಳ ಕೈಸೇರಿಲ್ಲ. ಇಲಾಖೆ ಹೇಳುವಂತೆ ಪ್ರಮುಖ ವಿಷಯಗಳ ಪಠ್ಯಪುಸ್ತಕಗಳು ಈಗಾಗಲೇ ಪೂರೈಕೆ ಆಗಿದ್ದು, ಹೆಚ್ಚುವರಿ ವಿಷಯಗಳ ಪಠ್ಯಪುಸ್ತಕ ಮಾತ್ರ ಪೂರೈಕೆಯಾಗಿಲ್ಲ. ಇಲ್ಲಿಯವರೆಗೂ ಜಿಲ್ಲೆಗೆ ಶೇ.94 ಪಠ್ಯಪುಸ್ತಕಗಳು ಪೂರೈಕೆಯಾಗಿವೆ ಉಳಿದ ಪುಸ್ತಕಗಳಿಗಾಗಿ ಇಲಾಖೆ ಎದುರು ನೋಡುತ್ತಿದೆ. ಇನ್ನೂ 2 ಜತೆಗೆ ಸಮವಸ್ತವನ್ನು ಕೆಲವೆಡೆ ಮಕ್ಕಳಿಗೆ ನೀಡಲಾಗಿದ್ದು, ಇನ್ನೂ ಕೆಲವು ಶಾಲೆಗಳಿಗೆ ಕೇವಲ 1 ಜತೆ ಸಮವಸ ಮಾತ್ರ ನೀಡಲಾಗಿದೆ. ಪಠ್ಯಪುಸ್ತಕಗಳಿಲ್ಲದೇ ಕೆಲ ಶಾಲೆಗಳ ವಿದ್ಯಾರ್ಥಿಗಳು ಪುಸ್ತಕ ಬ್ಯಾಂಕ್, ಜೆರಾಕ್ಸ್ ಮೊರೆ ಹೋಗಿದ್ದು ಪಠ್ಯ ಪುಸ್ತಕಗಳಿಗಾಗಿ ಕಾತುರದ ಕಣ್ಣಿನಿಂದ ಕಾಯುತ್ತಿದ್ದಾರೆ.
ಪ್ರತಿ ವರ್ಷ ಸರ್ಕಾರ ಇದೇ ರೀತಿ ಮೈಮರೆವು ಪ್ರದರ್ಶಿಸುತ್ತದೆ, ಶಾಲೆ ಆರಂಭಕ್ಕೂ ಮೊದಲೇ ಸಮವಸ, ಪಠ್ಯಪುಸ್ತಕ ಹಾಗೂ ಶೂ ಸಾಕ್ಸ್‌ಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಬೇಕು. ಶಾಲೆ ಆರಂಭವಾಗುತ್ತಿದ್ದಂತೆ ಅವುಗಳನ್ನು ತಕ್ಷಣ ಮಕ್ಕಳಿಗೆ ಪೂರೈಸುವ ಕೆಲಸ ಮಾಡಬೇಕು. ಆದರೆ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂಥ ಪರಿಸ್ಥಿತಿ ಪುನಾವರ್ತನೆಯಾಗುತ್ತಲೇ ಇರುತ್ತದೆ.
ಸರ್ಕಾರಿ ಶಾಲೆಗಳಿಗೆ ಸಮವಸದ ಜತೆಯಲ್ಲಿಯೇ ಶೂ ಹಾಗೂ ಸಾಕ್ಸ್‌ಗಳ ವಿತರಣೆಯಾಗುತ್ತದೆ ಆದರೆ ಈ ಬಾರಿ ರಾಜ್ಯಮಟ್ಟದಲ್ಲಿ ಟೆಂಟರ್ ಪ್ರಕ್ರಿಯೆಯಲ್ಲಿ ತುಸು ವಿಳಂಬವಾಗಿದ್ದು ಶೀಘ್ರದಲ್ಲೇ ಗ್ರಾಮಾಂತರ ಜಿಲ್ಲೆಯ ಎಲ್ಲ ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ವಿತರಣೆಯಾಗಲಿದೆ ದಾಸ್ತಾನು ಬಂದ ಕೂಡಲೇ ಅವುಗಳನ್ನು ಮಕ್ಕಳಿಗೆ ವಿತರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ಬೈಲಾಂಜಿನಪ್ಪ ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂ.ಗ್ರಾಮಾಂತರ