ವಿಜಯಪುರ ಹೋಬಳಿಯ ಪುರ ಗ್ರಾಮದ ಹೊರವಲಯದಲ್ಲಿ ನಿರ್ಮಿಸಲ್ಪಟ್ಟ ಮಲೆಸೊಣ್ಣಪ್ಪ ಎಂಬುವರ ಮನೆಯ ಕಪಾಟಿನಲ್ಲಿನ ಸಾಮಾನುಗಳನ್ನು ಕಳ್ಳರ ಗುಂಪು ಚೆಲ್ಲಾಪಿಲ್ಲಿಯಾಗಿ ಹರಡಿರುವುದು.  
ಬೆಂಗಳೂರು ಗ್ರಾಮಾಂತರ

ಕುತ್ತಿಗೆಗೆ ಚಾಕು ಹಿಡಿದು ಚಿನ್ನಾಭರಣ, ನಗದು ಸುಲಿಗೆ!

> ವಿಜಯಪುರ ಹೋಬಳಿಯ ಪುರ ಗ್ರಾಮದಲ್ಲಿ ಕೃತ್ಯ

ವಿಜಯಪುರ : ಹೋಬಳಿಯ ಪುರ ಗ್ರಾಮದ ತೋಟದ ಮನೆಯೊಂದಕ್ಕೆ ಸೋಮವಾರ ಬೆಳಗಿನ ಜಾವ ನುಗ್ಗಿದ ದರೋಡೆಕೋರರು, ಮನೆ ಮಾಲೀಕರ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿ 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 8 ಸಾವಿರ ರೂಪಾಯಿ ನಗದು ದೋಚಿದ್ದಾರೆ.

ಪುರ ಗ್ರಾಮದ ನಿವಾಸಿ ಮಲೆಸೊಣ್ಣಪ್ಪ, ಮಂಜುಳಾ ದಂಪತಿಗೆ ಸೇರಿದ ತೋಟದಲ್ಲಿ ಎರಡು ತಿಂಗಳ ಹಿಂದಷ್ಟೇ ಈ ಮನೆ ನಿರ್ಮಿಸಿಕೊಂಡು ವಾಸವಿದ್ದರು. ಬೆಳಗಿನಜಾವ ಮೂವರು ಕಳ್ಳರು ಸಿಮೆಂಟ್​ ಇಟ್ಟಿಗೆಯಿಂದ ಮನೆಯ ಬಾಗಿಲನ್ನು ಒಡೆದು ಒಳನುಗ್ಗಿ ದಂಪತಿ ಕುತ್ತಿಗೆಗೆ ಚಾಕು ಹಿಡಿದು ಪ್ರಾಣಬೆದರಿಕೆ ಹಾಕಿದ್ದು, ಮಾಂಗಲ್ಯ ಸರ, ನೆಕ್ಲೆಸ್​, ಉಂಗುರಗಳು ಹಾಗೂ ಓಲೆಗಳು ಸೇರಿ ಒಟ್ಟು 117 ಗ್ರಾಂ ಚಿನ್ನಾಭರಣ, 8 ಸಾವಿರ ರೂ. ನಗದನ್ನು ಸುಲಿಗೆ ಮಾಡಿದ್ದಾರೆ.

ತನಿಖೆಗೆ ಎರಡು ವಿಶೇಷ ತಂಡ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಚಂದ್ರಕಾಂತ್​ ಸ್ಥಳ ಪರಿಶೀಲಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ಈಗಾಗಲೇ ಎರಡು ವಿಶೇಷ ತನಿಖಾ ತಂಡ ರಚಿಸಲಾಗಿದೆ. ಶ್ರೀದಲ್ಲೇ ಸುಲಿಗೆಕೋರರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಎಎಸ್ಪಿ ಲಕ್ಷ್ಮೀನಾರಾಯಣ್​ ಹಾಗೂ ಡಿವೈಎಸ್​ಪಿ ಪಾಂಡುರಂಗ ತನಿಖೆಗೆ ಮಾರ್ಗದರ್ಶನ ನೀಡಿದರು.

ಸಲಹೆ: ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡಿರುವ ವಿಜಯಪುರ ವೃತ್ತ ನಿರೀಕ್ಷಕ ಲಕ್ಷ್ಮೀನಾರಾಯಣ್​ ಸಾರ್ವಜನಿಕರಿಗೆ ಸುರಕ್ಷತಾ ಸಲಹೆ ನೀಡಿದ್ದಾರೆ. ಸಾರ್ವಜನಿಕರು ಬೆಲೆಬಾಳುವ ಚಿನ್ನಾಭರಣ ಹಾಗೂ ನಗದನ್ನು ಮನೆಯಲ್ಲಿ ಇಟ್ಟುಕೊಳ್ಳುವ ಬದಲು ಸಾಧ್ಯವಾದಷ್ಟು ಬ್ಯಾಂಕ್​ಲಾಕರ್​ಗಳಲ್ಲಿ ಸುರತವಾಗಿಡಬೇಕು ಎಂದರು.

ಆಧುನಿಕ ತಂತ್ರಜ್ಞಾನ ಅಳವಡಿಕೆ: ವಿಶೇಷವಾಗಿ ತೋಟದ ಮನೆಗಳು ಹಾಗೂ ಒಂಟಿ ಮನೆಗಳಲ್ಲಿ ವಾಸಿಸುವವರು ಮನೆ ಬಾಗಿಲುಗಳಿಗೆ ಸೈರನ್​ ಹೊಂದಿರುವ ಹಾಗೂ ತುರ್ತು ಸಂದರ್ಭದಲ್ಲಿ ಪೊಲೀಸರಿಗೆ ನೇರ ಮಾಹಿತಿ ರವಾನಿಸುವ ನೂತನ ತಂತ್ರಜ್ಞಾನದ ಭದ್ರತಾ ಲಾಕರ್​ಗಳನ್ನು ಅಳವಡಿಸಿಕೊಳ್ಳಬೇಕು ಸಲಹೆ ನೀಡಿದರಲ್ಲದೆ, ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಮತ್ತು ದರೋಡೆಕೋರರನ್ನು ಪತ್ತೆಹಚ್ಚಲು ಅನುಕೂಲವಾಗುವಂತೆ ಪ್ರತಿಯೊಬ್ಬರೂ ತಮ್ಮ ಮನೆಗಳ ಸುತ್ತಮುತ್ತ ಸಿಸಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.