ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರತಿ ಮಳೆಗಾಲದಲ್ಲಿ ಈ ರಸ್ತೆ ತೀವ್ರ ಹದಗೆಡುತ್ತದೆ. ಎತ್ತಿನಗಾಡಿ, ಟ್ಯಾಕ್ಟರ್ ಮತ್ತಿತರ ವಾಹನಗಳ ಚಕ್ರ ಕೆಸರಿನಲ್ಲಿ ಸಿಲುಕಿ ಪರದಾಡುವ ಪರಿಸ್ಥಿತಿ ಸಾಮಾನ್ಯವಾಗಿದೆ. ಎತ್ತಿನ ಗಾಡಿ ಚಕ್ರಗಳು ಬದಿಯಲ್ಲಿ ಹುದುಗಿಹೋಗಿ ಎತ್ತುಗಳು ಗಾಯಗೊಳ್ಳುವ, ಪ್ರತಿನಿತ್ಯ ಕೆಸರಿನಲ್ಲಿ ಸಿಲುಕುವ ವಾಹನಗಳನ್ನು ಎಳೆದಾಡುವ ಪ್ರಕರಣಗಳು ಸಾಮಾನ್ಯವಾಗಿದೆ.
ಹೌದು! ಇದು ದೇವನಹಳ್ಳಿ ತಾಲೂಕು ಯಲಿಯೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಕರೆ ಗ್ರಾಮದ ಮುನೇಶ್ವರ ಸ್ವಾಮಿ ದೇವಸ್ಥಾನದಿಂದ ಟಿ.ಅಗ್ರಹಾರ ಗ್ರಾಮ ರಸ್ತೆ ಅವ್ಯವಸ್ಥೆಯ ಚಿತ್ರಣವಾಗಿದೆ.ಈ ರಸ್ತೆಯನ್ನು ನರೇಗಾ ಯೋಜನೆಯಲ್ಲಿ ಅಭಿವೃದ್ಧಿ ಮಾಡುವಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಹಲವು ಬಾರಿ ಮನವಿಪತ್ರ ನೀಡಲಾಗಿದೆ. ಜತೆಗೆ ಜನಸ್ಪಂದನದಲ್ಲೂ ದೂರು ನೀಡಲಾಗಿದ್ದು, ನರೇಗಾ ಯೋಜನೆ ಅಡಿಯಲ್ಲಿ 2024-25 ನೇ ಸಾಲಿನಲ್ಲಿ ರಸ್ತೆ ಅಭಿವೃದ್ಧಿ ಮಾಡುವುದಾಗಿ ತಿಳಿಸಿದ್ದಾರೆ. ಆದರೆ 2 ವರ್ಷ ಮುಗಿದಿದ್ದರೂ ಇಲ್ಲಿಯವರೆಗೆ ಕಾಮಗಾರಿ ಕೈಗೊಂಡಿಲ್ಲ.
ಗೋಕರೆ ಗ್ರಾಮದಲ್ಲಿನ ಡಾ. ಬಿ.ಅಂಬೇಡ್ಕರ್ ಸಮುದಾಯ ಭವನದ ಮುಂಭಾಗದ ರಸ್ತೆ ಅಭಿವೃದ್ಧಿಗೆ ಸಂಬಂಧಪಟ್ಟಂತೆ ನರೇಗಾ ಯೋಜನೆಯಡಿ ಕಾಯಕಲ್ಪ ನೀಡುವ ಚಿಂತನೆ ಇದೆ. ಇಲ್ಲವಾದರೆ ಈ ಬಾರಿ ನರೇಗಾದಲ್ಲಿ ಈ ರಸ್ತೆಯನ್ನು ಸೇರಿಸಿ ಕ್ರಿಯಾಯೋಜನೆ ಸಿದ್ದಪಡಿಸಲಾಗುವುದು. ಈ ಹಿಂದೆ ಯಾವ ಕಾರಣಕ್ಕೆ ತಡೆಯಾಗಿದೆ ಎಂಬುದನ್ನು ಪರಿಶೀಲಿಸಿ ಶೀಘ್ರದಲ್ಲೇ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಯಲಿಯೂರು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹೇಳುತ್ತಲೇ ಬಂದಿದ್ದಾರೆ ಹೊರತು ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎಂಬುದು ಗ್ರಾಮಸ್ಥರ ದೂರಾಗಿದೆ.
ದಶಕಗಳ ಹಿಂದಿನ ಪರಿಸ್ಥಿತಿ ಹೋಲಿಸಿದರೆ ಗ್ರಾಮೀಣ ಪ್ರದೇಶದ ರಸ್ತೆಗಳು ಸಾಕಷ್ಟು ಅಭಿವೃದ್ಧಿ ಕಂಡಿವೆ, ಆದರೆ ಈ ರಸ್ತೆಗೆ ಅದ್ಯಾವ ಶಾಪ ಕಾಡುತ್ತಿದೆಯೋ ತಿಳಿಯುತ್ತಿಲ್ಲ. ವರ್ಷಪೂರ್ತಿ ರಸ್ತೆಯ ಪರಿಸ್ಥಿತಿ ಒಂದು ರೀತಿಯಾದರೆ ಮಳೆಗಾಲದಲ್ಲಿ ಮತ್ತೊಂದು ಪರಿಸ್ಥಿತಿ ಎದುರಾಗುತ್ತದೆ. ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣ ಕೆಸರುಗದ್ದೆಯಂತಾಗಿ ರಸ್ತೆಯೇ ಬಂದ್ ಆದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬುದು ಗ್ರಾಮಸ್ಥರ ಅಳಲಾಗಿದೆ.
ಮಹಾತ್ಮ ಗಾಂಧಿ ನರೇಗಾ ಯೋಜನೆ ಅಥವಾ ಮತ್ತಿತರ ಯೋಜನೆ ಅಡಿಯಲ್ಲಿ ಕಡೇ ಪಕ್ಷ ಜಲ್ಲಿ ಮಿಶ್ರಿತ ಮಣ್ಣಿನ ರಸ್ತೆಯನ್ನಾಗಿಯಾದರೂ ಅಭಿವೃದ್ಧಿಪಡಿಸಬೇಕು, ಮಳೆಯ ನೀರು ಸರಾಗವಾಗಿ ಹರಿಯುವಂತೆ ಎರಡೂ ಬದಿ ಚರಂಡಿಯ ವ್ಯವಸ್ಥೆ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಮಂಜುನಾಥ್, ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ದೇವನಹಳ್ಳಿ