ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಮಧ್ಯಪ್ರಾಚ್ಯ ಯುದ್ಧದಿಂದಾಗಿ ಎಲ್ಲೆಡೆ ವಾಣಿಜ್ಯ ಸಿಲಿಂಡರ್‌ಗ ವ್ಯತ್ಯಯ ಬಿಗಡಾಯಿಸಿದೆ, ಆದರೆ ಗೃಹಬಳಕೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ಯಾವುದೇ ತೊಂದರೆ ಇಲ್ಲ ಎನ್ನುತ್ತಿರುವ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಪ್ರತಿನಿಧಿಸುವ ದೇವನಹಳ್ಳಿ ಕ್ಷೇತ್ರದಲ್ಲೇ ಗೃಹಬಳಕೆ ಗ್ಯಾಸ್ ಸಿಲಿಂಡರ್‌ಗೆ ಪರದಾಟ ಎದುರಾಗಿದೆ.
ಕಳೆದ ಮೂರು ದಿನಗಳಿಂದ ದೇವನಹಳ್ಳಿ ಪಟ್ಟಣದ ಎಚ್‌ಪಿ ಗ್ಯಾಸ್ ಏಜೆನ್ಸಿ ಮುಂದೆ ಜಮಾಯಿಸಿರುವ ಗ್ರಾಹಕರು ಗ್ಯಾಸ್ ಸಿಲಿಂಡರ್‌ಗಾಗಿ ಮುಗಿಬಿದ್ದಿದ್ದಾರೆ. ಸುಮಾರು 1 ತಿಂಗಳ ಹಿಂದೆಯೇ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ್ದರೂ ಇದುವರೆಗೆ ಸಿಲಿಂಡರ್ ಪೂರೈಕೆಯಾಗಿಲ್ಲ ಎಂಬುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಟಿಪಿ ಬಂದಿದೆ ಸಿಲಿಂಡರ್ ಸಿಕ್ತಿಲ್ಲ:
ಗ್ಯಾಸ್ ಬುಕಿಂಗ್ ಆಗಿ ಓಟಿಪಿ ಸಹ ಬಂದಿದೆ, ಆದರೆ ಏಜೆನ್ಸಿ ಅವರನ್ನು ಕೇಳಿದರೆ ಇನ್ನೂ ಸಿಲಿಂಡರ್ ಬಂದಿಲ್ಲ ಎನ್ನುತ್ತಾರೆ. ಹೀಗಾದರೆ ಮನೆ ನಡೆಸುವುದಾದರೂ ಹೇಗೆ ಎಂಬುದು ಗ್ರಾಹಕರ ಆಕ್ರೋಶವಾಗಿದೆ. ಬೆಳಗ್ಗೆಯಿಂದ ಬಿಸಿಲಲ್ಲಿ ಕಾದು ಕುಳಿತಿದ್ದೇವೆ. ಕೆಲವರಿಗಷ್ಟೇ ಸಿಲಿಂಡರ್ ಸಿಕ್ಕಿದೆ ಬಹುಪಾಲು ಜನರು ದಿನ ಬೆಳಗ್ಗೆ ಬಂದು ಸಂಜೆವರೆಗೆ ಕಾದು ಖಾಲಿ ಸಿಲಿಂಡರ್‌ಗಳೊಂದಿಗೆ ಮನೆಗೆ ಮರಳಬೇಕಿದೆ ಎಂದು ಅಲವತ್ತುಗೊಳ್ಳುತ್ತಿದ್ದಾರೆ.
ಸಮಸ್ಯೆ ಇಲ್ಲ ಅಂತಾರೆ ಸಚಿವರು:
ಇತ್ತೀಚಿಗೆ ದೇವನಹಳ್ಳಿಯ ಜಿಲ್ಲಾಡಳಿತ ಭವನದ ಸಭೆಯಲ್ಲಿ ಗೃಹಬಳಕೆ ಸಿಲಿಂಡರ್‌ಗಳಿಗೆ ಯಾವುದೇ ಕೊರತೆಯಾಗಿಲ್ಲ, ವದಂತಿಗಳಿಗೆ ಕಿವಿಗೊಡಬೇಡಿ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದರು. ಆದರೆ ಅವರೇ ಪ್ರತಿನಿಧಿಸುವ ದೇವನಹಳ್ಳಿ ಕ್ಷೇತ್ರದಲ್ಲಿ ಗೃಹಬಳಕೆ ಸಿಲಿಂಡರ್‌ಗೆ ಪರದಾಡುವಂತಾಗಿದೆ. ಸಚಿವರು ತಮ್ಮ ಕ್ಷೇತ್ರದಲ್ಲಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲವೇ ಎಂದು ಗ್ರಾಹಕರು ಪ್ರಶ್ನಿಸುತ್ತಿದ್ದಾರೆ. ಉಪಚುನಾವಣೆ ಪ್ರಚಾರದಲ್ಲಿ ಸಚಿವರು ಬಿಜಿಯಾಗಿದ್ದಾರೆ. ಏ.5ರಂದು ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಎಲ್ಲೆಡೆ ವಾಣಿಜ್ಯ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯವಾಗಿದ್ದರೆ ದೇವನಹಳ್ಳಿಯಲ್ಲಿ ಗೃಹ ಬಳಕೆ ಸಿಲಿಂಡರ್‌ಗಳಿಗೂ ತತ್ವಾರ ಎದುರಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಈ ಹಿಂದೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ ಬಳಿಕ ಒಟಿಪಿ ಬರುತ್ತಿತ್ತು. ಒಟಿಪಿ ಬಂದ ಎರಡ್ಮೂರು ದಿನದಲ್ಲೇ ಏಜೆನ್ಸಿ ಸಿಬ್ಬಂದಿ ಮನೆಗೆ ಸಿಲಿಂಡರ್ ಪೂರೈಕೆ ಮಾಡುತ್ತಿದ್ದರು. ಆದರೆ ಪ್ರಸ್ತುತ ಇಂಥ ಸನ್ನಿವೇಶ ಇಲ್ಲವಾಗಿದೆ, ಗ್ಯಾಸ್ ಸಿಬ್ಬಂದಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲ್ಲ, ಖಾಲಿ ಸಿಲಿಂಡರ್ ಹಿಡಿದುಕೊಂಡು ಏಜೆನ್ಸಿ ಬಳಿಯೇ ಬರಬೇಕಾಗಿದೆ. ಆದರೂ ಗ್ಯಾಸ್ ಸಿಲಿಂಡರ್ ಸಿಗುತ್ತಿಲ್ಲ ಎಂದು ಗ್ರಾಹಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
25 ದಿನಕ್ಕೆ ನಗರದಲ್ಲಿ 45 ದಿನಕ್ಕೆ ಗ್ರಾಮೀಣ ಪ್ರದೇಶಗಳಿಗೆ ಎಲ್‌ಪಿಜಿ ಪೂರೈಕೆಯಾಗಲಿದೆ. ಎಲ್‌ಪಿಜಿ ಕೊರತೆ ಬಗ್ಗೆ ಏ.5 ರಂದು ಸಭೆ ನಡೆಸಲಿದ್ದೇನೆ. ವದಂತಿಗಳಿಗೆ ಕಿವಿಗೊಡಬಾರದು, ಖಾಸಗಿಯಲ್ಲಿ ಹೆಚ್ಚಿನ ದರ ಕೇಳಿದರೆ ಕ್ರಮಕೈಗೊಳ್ಳಲಾಗುವುದು, ಚುನಾವಣೆಗಳು ನಡೆಯುತ್ತಿರುವುದರಿಂದ ಸಭೆ ನಡೆಸಲು ಆಗಿಲ್ಲ. ಯುದ್ಧ ನಿಲ್ಲುವವರೆಗೆ ಸಮಸ್ಯೆ ಇರುತ್ತದೆ ಪರಿಹಾಕ್ಕೆ ಎಲ್ಲ ಕ್ರಮಕೈಗೊಳ್ಳಲಾಗುತ್ತಿದೆ.
ಕೆ.ಎಚ್.ಮುನಿಯಪ್ಪ ಜಿಲ್ಲಾ ಉಸ್ತುವಾರಿ ಸಚಿವ
ಕಳೆದ 20 ದಿನದ ಹಿಂದೆ ಎಚ್‌ಪಿ ಗೃಹಬಳಕೆ ಅನಿಲ ಸಿಲಿಂಡರ್ ಬುಕ್ ಮಾಡಿದ್ದೇವೆ. 3 ದಿನದ ಹಿಂದೆ ಓಟಿಪಿ ಬಂದಿದೆ. ಆದರೆ ಗ್ಯಾಸ್ ಏಜೆನ್ಸಿ ಬಳಿ ಬಂದು ಕೇಳಿದರೆ ಸ್ಟಾಕ್ ಇಲ್ಲ ನಾವೇ ಕರೆ ಮಾಡುತ್ತೇವೆ ಈಗ ಮನೆಗೆ ಹೋಗಿ ಎನ್ನುತ್ತಿದ್ದಾರೆ. ಗ್ಯಾಸ್ ಸಿಲಿಂಡರ್ ಇಲ್ಲದೆ ಮನೆ ನಡೆಸುವುದಾದರೂ ಹೇಗೆ? ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಸ್ಥಿತಿ ಏನಾಗಬೇಡ.
ಹರೀಶ್, ದೇವನಹಳ್ಳಿ ಟೌನ್ ನಿವಾಸಿ