ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕೊಲ್ಲಿ ದೇಶಗಳಲ್ಲಿ ಯುದ್ಧದ ಪರಿಸ್ಥಿತಿ ಹಿನ್ನೆಲೆಯಲ್ಲಿ ಗ್ಯಾಸ್ ಸಿಲಿಂಡರ್‌ಗಳ ಕೃತಕ ಅಭಾವ ಸೃಷ್ಟಿ ಆಗಿದ್ದು ಜಿಲ್ಲೆಯಲ್ಲಿ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಗ್ಯಾಸ್ ಏಜೆನ್ಸಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್.ಅನುರಾಧಾ ಎಚ್ಚರಿಕೆ ನೀಡಿದರು.
ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಗ್ಯಾಸ್ ಏಜೆನ್ಸಿ ಮುಖ್ಯಸ್ಥರ ತುರ್ತು ಸಭೆಯಲ್ಲಿ ಮಾತನಾಡಿದರು. ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ಕಾಯ್ದೆಯಡಿ ನಿಗದಿತ ಬೆಲೆಗೆ ಮಾರಾಟ ಮಾಡಬೇಕು, ಸಿಲಿಂಡರ್‌ಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಅಥವಾ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹ ಏಜೆನ್ಸಿಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದರು.
ಸುಳ್ಳು ಸುದ್ದಿಗೆ ಕಿವಿಗೊಡಬೇಡಿ:
ಜಿಲ್ಲೆಯಲ್ಲಿ ಐಓಸಿಎಲ್, ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್ ಕಂಪನಿಗಳ ಅಡಿಯಲ್ಲಿ 24 ಗ್ಯಾಸ್ ಏಜೆನ್ಸಿ ಕಾರ್ಯ ನಿರ್ವಹಿಸುತ್ತಿದೆ. ಗೃಹ ಉಪಯೋಗಿ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಗೃಹ ಉಪಯೋಗಿ ಅನಿಲ ಸಿಲಿಂಡರ್ ಬುಕ್ ಮಾಡಲು 25 ದಿನ ಆಗಿರಬೇಕು. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಹಾಗೂ ಸುಳ್ಳು ಸುದ್ದಿಗೆ ಕಿವಿಗೊಡಬಾರದು ಎಂದು ಡಿಸಿ ತಿಳಿಸಿದರು. ಗೃಹ ಬಳಕೆಯ ಸಿಲಿಂಡರ್‌ಗಳನ್ನು ಹೋಟೆಲ್, ರೆಸ್ಟೋರೆಂಟ್ ಅಥವಾ ಇತರ ವಾಣಿಜ್ಯ ಉದ್ದೇಶಗಳಿಗೆ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಗತ್ಯ ಸೇವೆಗಳಾದ ಶಾಲೆಗಳು ಮತ್ತು ಸರ್ಕಾರಿ ಹಾಗೂ ಖಾಸಗಿ ವಸತಿ ನಿಲಯಗಳಲ್ಲಿ ಅಡುಗೆ ಅನಿಲದ ಕೊರತೆಯಾಗದಂತೆ ವಿತರಕರು ಸರಬರಾಜು ಮಾಡಲು ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಬಿಸಿಯೂಟಕ್ಕೆ ಯಾವುದೇ ಅಡೆತಡೆಯಾಗಿಲ್ಲ, ಮುಂದೆಯೂ ಯಾವುದೇ ತೊಂದರೆಯಾಗದಂತೆ ಅಗತ್ಯವಾಗಿ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿಕೊಂಡು ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.
ವಸತಿ ಶಾಲೆಗಳ ಮೇಲೆ ನಿಗಾ ಇರಲಿ:
ಪ್ರಸ್ತುತ ಪದವಿ ಪೂರ್ವ ಪರೀಕ್ಷೆಗಳು ನಡೆಯುತ್ತಿವೆ, ನಂತರ ಎಸ್‌ಎಸ್‌ಎಲ್‌ಸಿ ಮತ್ತು ಪದವಿ ಪರೀಕ್ಷೆಗಳು ನಡೆಯುವುದರಿಂದ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಊಟದಲ್ಲಿ ತೊಂದರೆಯಾಗದಂತೆ ನಿರಂತರ ಅನಿಲ ಪೂರೈಕೆಯಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು. ಇದುವರೆಗೆ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿನ ಎಲ್ಲ ವಸತಿ ಶಾಲೆಗಳ ಬಗ್ಗೆ ವರದಿ ಪಡೆಯಲಾಗಿದ್ದು ಎಲ್ಲಿಯೂ ಗ್ಯಾಸ್ ಸಿಲಿಂಡರ್ ವ್ಯತ್ಯಯವಾಗಿಲ್ಲ, ಬಿಸಿಯೂಟ ಸೇರಿ ತಿಂಡಿ ತಯಾರಿಕೆಗೆ ಯಾವುದೇ ತೊಂದರೆಯಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಸಂಬಂಧಪಟ್ಟ ಅಧಿಕಾರಿಗಳು ಸಿಲಿಂಡರ್ ಕೊರತೆಯಾಗದಂತೆ ನೋಡಿಕೊಳ್ಳಬೇಕು ಗ್ಯಾಸ್ ಏಜೆನ್ಸಿಗಳು ವಸತಿ ನಿಲಯಗಳಿಗೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅನುರಾಧಾ ಸೂಚನೆ ನೀಡಿದರು.
ಕುಡಿಯುವ ನೀರಿನ ಸಮಸ್ಯೆಗೆ ಆಸ್ಪದ ಬೇಡ:
ಗ್ಯಾಸ್ ಏಜೆನ್ಸಿ ಮುಖ್ಯಸ್ಥರ ಸಭೆ ಬಳಿಕ ಅಧಿಕಾರಿಗಳೊಂದಿಗೆ ಸಭೆ ಮುಂದುವರೆಸಿದ ಜಿಲ್ಲಾಧಿಕಾರಿ ಬೇಸಿಗೆ ಆರಂಭವಾದ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕು ತಾಲೂಕು ವ್ಯಾಪ್ತಿಯ ಗ್ರಾಮಗಳು ಹಾಗೂ ನಗರಗಳಲ್ಲಿ ಯಾವುದೇ ಕುಡಿಯುವ ನೀರಿನ ಅಭಾವ ಎದುರಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಮುನ್ನಚ್ಚರಿಕೆ ವಹಿಸಬೇಕು ಎಂದು ತಾಕೀತು ಮಾಡಿದರು. ನೀರಿನ ಸಮಸ್ಯೆ ಉಂಟಾಗುವ ಪ್ರದೇಶಗಳಲ್ಲಿ ಬತ್ತಿದ ಕೊಳವೆಬಾವಿಗಳ ಮರು ಭರ್ತಿ ಮಾಡಿ ಹಾಗೂ ಅಗತ್ಯವಿದ್ದಲ್ಲಿ ಹೊಸ ಕೊಳವೆಬಾವಿಗಳನ್ನು ಕೊರೆಯಲು ಜಿಲ್ಲಾಧಿಕಾರಿಗಳು ಸೂಚಿಸಿದರು.