ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬೆಂಗಳೂರಿನ ತ್ಯಾಜ ವಿಲೇವಾರಿ ಘಟಕ ಎಂಎಸ್‌ಜಿಪಿದಿಂದಾಗಿ ಈಗಾಗಲೇ ಭಕ್ತರಹಳ್ಳಿ, ಸಕ್ಕರೆಗೊಲ್ಲಹಳ್ಳಿ, ಸಾಸಲು ಗ್ರಾಮ ಪಂಚಾಯತಿ ಜನತೆ ತತ್ತರಿಸಿದ್ದಾರೆ. ಇದೀಗ ಮತ್ತೊಂದು ಕಸದ ಘಟಕ ತಾಲೂಕಿನಲ್ಲಿ ನಿರ್ಮಾಣವಾಗುವುದು ಬಹುತೇಕ ಖಚಿತವಾಗುತ್ತಿದ್ದು, ಇದರ ವಿರುದ್ಧ ಮತ್ತೊಂದು ಸುತ್ತಿನ ಹೋರಾಟಕ್ಕೆ ವೇದಿಕೆ ಸಿದ್ದವಾಗುತ್ತಿದೆ.
ಬೆಳಗಾವಿ ವಿಧಾನಸಭೆ ಕಲಾಪದ ಪ್ರಶೋತ್ತರ ಕಲಾಪದ ವೇಳೆ ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಈ ಹಿಂದೆ ಮುಚ್ಚಿರುವ ಕಸ ಘಟಕ ಸ್ಥಳಾಂತರಿಸಬೇಕು ಜತೆಗೆ ಟೆರ್ರಾಾರ್ಮಾ ಪುನಾರಂಭಕ್ಕೆ ಅವಕಾಶ ನೀಡಬಾರದು ಎಂಬ ಶಾಸಕ ಧೀರಜ್ ಮುನಿರಾಜು ಅವರ ಪ್ರಶ್ನೆಗೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿ, ಗುಂಡ್ಲಹಳ್ಳಿಯಲ್ಲಿ 134 ಎಕರೆ ಜಾಗವನ್ನು ಈಗಾಗಲೇ ನಿಗಧಿ ಮಾಡಲಾಗಿದೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಉತ್ತರಕ್ಕೆ ತಾಲೂಕಿನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಮತ್ತೊಂದು ಕಸ ಘಟಕದ ವಿರುದ್ಧದ ಯುದ್ಧಕ್ಕೆ ಅಣಿಯಾಗುವ ಮುನ್ಸೂಚನೆ ರವಾನೆಯಾಗಿದೆ.
ಬೂದಿಮುಚ್ಚಿದ ಕೆಂಡದಂತಿದ್ದ ಕಸ ಘಟಕ ಆರಂಭದ ಸುದ್ದಿ ಮುನ್ನೆಲೆಗೆ ಬರುತ್ತಿದ್ದಂತೆ ದೊಡ್ಡಬೆಳವಂಗಲ ವ್ಯಾಪ್ತಿಯ ರೈತ ಮುಖಂಡರು ತುರ್ತು ಸಭೆಗಳನ್ನು ನಡೆಸಲು ಮುಂದಾಗಿದ್ದಾರೆ. ಅಲ್ಲದೆ ಕಸ ಘಟಕದ ವಿರುದ್ಧ ಹೋರಾಟ ನಡೆಸಲು ಸಮಿತಿ ರಚನೆ ಮಾಡಲು ಚಿಂತನೆ ನಡೆಸಿದ್ದು ಶೀಘ್ರದಲ್ಲೇ ರೈತ ಮುಖಂಡರ ಸಭೆ ನಡೆಸಿ ಸಮಿತಿ ರಚನೆ ಮಾಡಲಿ ದೊಡ್ಡಮಟ್ಟದಲ್ಲಿ ಸರ್ಕಾರದ ಕ್ರಮದ ವಿರುದ್ಧ ಹೋರಾಟಕ್ಕೆ ಸಜ್ಜುಗೊಳ್ಳಲು ತೀರ್ಮಾನಿಸಿದ್ದಾರೆ.
ಈ ಹಿಂದೆ ಪ್ರಾಂತ ರೈತ ಸಂಘ, ಮಠಾಧೀಶರು, ವಿವಿಧ ರೈತ ಪರ ಸಂಘಟನೆಗಳ ಸಹಕಾರದಲ್ಲಿ ಟೆರ್ರಾಾರ್ಮ ಕಸ ಘಟಕದ ವಿರುದ್ಧ ಸರಣಿ ಧರಣಿ, ಪ್ರತಿಭಟನೆಗಳನ್ನು ನಡೆಸಲಾಗಿತ್ತು. ಕಸ ಸಾಗಣೆ ಮಾಡುತ್ತಿದ್ದ ಲಾರಿಗಳನ್ನು ತಡೆದು ಪ್ರತಿಭಟಿಸಲಾಗಿತ್ತು. ರಾಷ್ಟ್ರೀಯ ಮಟ್ಟದಲ್ಲಿ ಕಸ ಘಟಕ ಸುದ್ದಿ ಸದ್ದು ಮಾಡಿತ್ತು. ಕಡೆಗೆ ರೈತರ ಹೋರಾಟಕ್ಕೆ ಮಣಿದ ಅಂದಿನ ಕಾಂಗ್ರೆಸ್ ಸರ್ಕಾರದ ಸಿಎಂ ಆಗಿದ್ದ ಸಿದ್ದರಾಮಯ್ಯ 2017 ಕಸ ಘಟಕವನ್ನು ಬಂದ್ ಮಾಡಿಸಿದ್ದರು. ಮತ್ತೆ ಇದೀಗ 7 ವರ್ಷದ ತರುವಾಯ ಇದೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಸ ಘಟಕ ಆರಂಭಕ್ಕೆ ಹಸಿರು ನಿಶಾನೆ ದೊರೆತಿರುವುದು ರೈತ ಹೋರಾಟಗಾರರ ತಾಳ್ಮೆ ಪರೀಕ್ಷೆಗೊಡ್ಡಿದಂತಾಗಿದೆ.
ಈಗಾಗಲೇ ಮುಚ್ಚಿರುವ ಟೆರ್ರಾಾರ್ಮಾ ಘಟಕದಲ್ಲಿ 25 ಲಕ್ಷ ಮೆಟ್ರಿಕ್‌ಟನ್‌ನಷ್ಟು ಕಸದ ರಾಶಿ ಬೆಟ್ಟದಂತೆ ಕಂಡುಬರುತ್ತಿದೆ. ಅದನ್ನೇ ಇನ್ನೂ ವಿಲೇವಾರಿ ಮಾಡಿಲ್ಲ. ಘಟಕ ಮುಚ್ಚುವ ವೇಳೆ ಸರ್ಕಾರ ಅಷ್ಟೂ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಇದುವರೆಗೆ ಅಂಥ ಪ್ರಯತ್ನವೇ ನಡೆದಿಲ್ಲ. ವೈಜ್ಞಾನಿಕ ಕಸ ವಿಲೇವಾರಿ, ಕಸ ಸಂಸ್ಕರಣೆ, ಎರೆಹುಳ ಗೊಬ್ಬರ ತಯಾರಿಕೆ, ಬಯೋಗ್ಯಾಸ್ ಉತ್ಪಾದನೆ ಇವೆಲ್ಲ ಸರ್ಕಾರ ರೈತರ ಕಣ್ಣಿಗೆ ಮಣ್ಣರೆಚುವ ಕೆಲಸವಷ್ಟೇ ಎಂಬುದು ಈ ಭಾಗದ ರೈತರ ಆಕ್ರೋಶದ ನುಡಿಗಳಾಗಿವೆ. ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿಯೂ ಎಲ್ಲಿಯೂ ಇಲ್ಲದ ಆಸಕ್ತಿ ದೊಡ್ಡಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲೇ ಏಕೆ ಎಂಬುದು ರೈತ ಮುಖಂಡರ ಪ್ರಶ್ನೆಯಾಗಿದೆ.
ಬೆಳಗಾವಿ ಅಧಿವೇಶನದಲ್ಲಿ ನಡೆದ ಚರ್ಚೆಯ ಬಗ್ಗೆ ಮಾಹಿತಿ ಸಿಕ್ಕಿದೆ, ಇದು ರೈತರ ತಾಳ್ಮೆಯನ್ನು ಪರೀಕ್ಷೆ ಮಾಡಲು ಸರ್ಕಾರ ಮತ್ತೊಮ್ಮೆ ಮುಂದಾದಂತಿದೆ. ಈಗಾಗಲೇ ಎಂಎಸ್‌ಜಿಪಿ ಕಸ ಘಟಕದಿಂದಾಗಿ ಸಾಕಷ್ಟು ತೊಂದರೆ ಎದುರಿಸುತ್ತಿದ್ದೇವೆ. ಮತ್ತೊಂದು ಘಟಕ ಆರಂಭಿಸಲು ಮುಂದಾದರೆ ಸಹಿಸಲು ಯಾರೂ ಸಿದ್ದರಿಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಕಸ ಘಟಕದ ವಿರುದ್ಧ ಹೋರಾಟ ಸಮಿತಿ ರಚನೆ ಮಾಡಿ ಸರ್ಕಾರದ ಕ್ರಮದ ವಿರುದ್ಧ ಹೋರಾಟ ಮುಂದುವರೆಸಲು ಸಿದ್ದತೆ ನಡೆಸಲಾಗುತ್ತಿದೆ.
ರಾಮಕೃಷ್ಣಯ್ಯ, ರೈತ ಮುಖಂಡ, ದೊಡ್ಡಬೆಳವಂಗಲ