ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
ನಗರದಲ್ಲಿ ಬಿಗಡಾಯಿಸಿರುವ ಕಸದ ಬ್ಲ್ಯಾಕ್‌ಸ್ಪಾಟ್‌ಗಳ ಮುಕ್ತಿಗೆ ಹರಸಾಹಸ ನಡೆಸುತ್ತಿರುವ ನಗರಸಭೆ ಕಸದ ಬ್ಲ್ಯಾಕ್‌ಸ್ಪಾಟ್‌ಗಳನ್ನು ತೆರವುಗೊಳಿಸಿ ಆ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಅದೇ ಸ್ಥಳದಲ್ಲಿ ಪೌರಕಾರ್ಮಿಕರಿಂದ ರಂಗೋಲಿಗಳನ್ನು ಬಿಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದೆ.
ನಗರದಲ್ಲಿ ಕಸ ವಿಲೇವಾರಿ ಬಗ್ಗೆ ಸಾರ್ವಜನಿಕರು ಹಾಗೂ ನಗರಸಭೆ ನಡುವೆ ಹಗ್ಗ ಜಗ್ಗಾಟ ನಡೆಯುತ್ತಲೇ ಇದೆ. ನಗರಸಭೆ ಸರಿಯಾದ ಸಮಯಕ್ಕೆ ಪ್ರತಿದಿನ ಕಸದ ವಾಹನಗಳನ್ನು ಕಳುಹಿಸಲ್ಲ ಹಸಿ ಕಸವನ್ನು ಎಷ್ಟು ದಿನ ಮನೆಯಲ್ಲಿ ಇಟ್ಟುಕೊಳ್ಳುವುದು ಎಂಬುದು ಸಾರ್ವಜನಿಕರ ಆರೋಪವಾದರೆ, ಎಲ್ಲ ಕಡೆಗಳಲ್ಲಿ ಕಸ ಸಂಗ್ರಹಣೆ ಆಟೋಗಳನ್ನು ಕಳುಹಿಸಿಕೊಡಲಾಗುತ್ತಿದೆ ಆದರೂ ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಕಸ ಎಸೆಯುವ ಕೃತ್ಯ ಮುಂದುವರೆಸಿದ್ದಾರೆ ಎಂಬುದು ನಗರಸಭೆ ಸಿಬ್ಬಂದಿ ಪ್ರತ್ಯಾರೋಪವಾಗಿದೆ. ಇದರ ನಡುವೆ ನಗರದಲ್ಲಿ ಎಲ್ಲೆಂದರಲ್ಲಿ ಕಸದ ಬ್ಲ್ಯಾಕ್‌ಸ್ಟಾಟ್‌ಗಳು ಉದ್ಭವಿಸಿದ್ದು, ನಗರದ ಅಂದ ಕೆಡಿಸುತ್ತಿವೆ. ಆಗಾಗ ನಗರ ಸಭೆ ಸಿಬ್ಬಂದಿ ಕಸದ ಬ್ಲ್ಯಾಕ್‌ಸ್ಪಾಟ್‌ಗಳನ್ನು ತೆರವುಗೊಳಿಸುತ್ತಿದ್ದರೂ ಮತ್ತೆ ಕೆಲವೇ ದಿನಗಳಲ್ಲಿ ಅದೇ ಜಾಗದಲ್ಲಿ ಕಸದ ರಾಶಿ ಬಂದು ಬೀಳುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು ಹಲವು ಕಡೆಗಳಲ್ಲಿ ಇದು ಯಶಸ್ವಿಯೂ ಆಗಿದೆ.
ಈ ಹಿಂದೆಯೂ ಪ್ರಯತ್ನ ನಡೆದಿತ್ತು:
ಈ ಹಿಂದೆಯೂ ಇಂಥ ಸಾಕಷ್ಟು ಪ್ರಯತ್ನ ನಡೆಸಿತ್ತಾದರೂ ಕೆಲವು ಕಡೆಗಳಲ್ಲಿ ನಿರೀಕ್ಷಿತ ಯಶಸ್ಸು ಕಂಡುಬಂದಿರಲಿಲ್ಲ. ಕೆಲವು ದಿನಗಳ ಕಾಲ ನಿಯಂತ್ರಣಕ್ಕೆ ಬಂದರೂ ಮತ್ತೆ ಇಂಥಹ ಕೃತ್ಯ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಭಾರಿ ಮತ್ತಷ್ಟು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ನಗರಸಭೆ ಕಸದ ಬ್ಲ್ಯಾಕ್‌ಸ್ಪಾಟ್‌ಗಳನ್ನು ಸಂಪೂರ್ಣ ತೆರವುಗೊಳಿಸಿ ಈ ಭಾಗದಲ್ಲಿ ಕಸದ ರಾಶಿ ಇತ್ತೆಂಬ ಕುರುಹೂ ಇಲ್ಲದಂತೆ ಸ್ವಚ್ಛಗೊಳಿಸಿ, ಆ ಜಾಗದಲ್ಲಿ ನಗರಸಭೆಯ ಬ್ಯಾನರ್ ಪ್ರದರ್ಶನಕ್ಕಿಟ್ಟು, ಮನೆಗಳ ಮುಂದೆ ರಂಗೋಲಿ ಬಿಡಿಸುವಂತೆ ವಿವಿಧ ಚಿತ್ತಾರಗಳನ್ನು ಮೂಡಿಸುವುದರ ಜತೆಗೆ ಆ ಭಾಗದಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸಕ್ಕೆ ಮುಂದಾಗಿದೆ. ಈ ಮೂಲಕ ಜನರಿಗೆ ಇಂಥ ಸ್ವಚ್ಛ ಜಾಗವನ್ನು ಹಾಳು ಮಾಡುವುದು ಬೇಡ ಎಂಬ ಭಾವನೆ ಮೂಡಿಸುವುದು ಇದರ ಉದ್ದೇಶವಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ಶುಕ್ರವಾರ ಕಾರ್ಯಕ್ರಮ:
ಹೊಸಕೋಟೆ ನಗರವನ್ನು ಕಸಮುಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿರುವ ನಗರಸಭೆ ಪ್ರತಿ ಶುಕ್ರವಾರ ಇಂಥ ಕಸದ ಬ್ಲ್ಯಾಕ್‌ಸ್ಪಾಟ್‌ಗಳನ್ನು ಮುಕ್ತಗೊಳಿಸುವ ಅಭಿಯಾನ ಹಮ್ಮಿಕೊಂಡಿದೆ. ಇಂಥ ಜಾಗಗಳನ್ನು ಸ್ವಚ್ಛಗೊಳಿಸಿ ಅದೇ ಜಾಗದಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಬೆಂಚ್‌ಗಳನ್ನು ಹಾಕುವ ಮೂಲಕ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಪ್ರಯತ್ನಕ್ಕೆ ಮುಂದಾಗಿದೆ.
ನಗರದ ಹಲವು ಭಾಗಗಳಲ್ಲಿ ರಾತ್ರಿ ಪಾಳೆಯದಲ್ಲಿ ಉದ್ಯೋಗಕ್ಕೆ ಹೊರಡುವ ಜನರಿಗಾಗಿ ವಿಶೇಷವಾಗಿ ಕಸದ ಆಟೋಗಳನ್ನು ಕಳುಹಿಸುವ ಚಿಂತನೆಯೂ ನಡೆದಿದೆ. ಈಗಾಗಲೇ ತಡರಾತ್ರಿವರೆಗೆ ಕಾರ್ಯನಿರ್ವಹಿಸುವ ಹೋಟೆಲ್‌ಗಳ ಬಳಿ ಆಟೋಗಳನ್ನು ಕಳುಹಿಸಿಕೊಡಲಾಗುತ್ತಿದೆ. ಮತ್ತಷ್ಟು ಪ್ರಯೋಗಗಳ ಮೂಲಕ ಹೊಸಕೋಟೆ ನಗರವನ್ನು ಕಸಮುಕ್ತಗೊಳಿಸುವ ಪಣ ತೊಡಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸಕೋಟೆ ನಗರವನ್ನು ಕಸಮುಕ್ತಗೊಳಿಸುವ ನಿಟ್ಟಿನಲ್ಲಿ ಹಲವು ಪ್ರಯತ್ನ ನಡೆದಿದೆ. ಈ ಪ್ರಯತ್ನದ ಭಾಗವಾಗಿ ಪ್ರತಿ ಶುಕ್ರವಾರ ಕಸದ ಬ್ಲ್ಯಾಕ್‌ಸ್ಪಾಟ್‌ಗಳನ್ನು ತೆರವುಗೊಳಿಸುವ ಅಭಿಯಾನ ಆರಂಭಿಸಲಾಗಿದೆ. ಆ ಭಾಗವನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ, ಸಾಧ್ಯವಾದ ಕಡೆಗಳಲ್ಲಿ ಸಸಿಗಳನ್ನು ನೆಟ್ಟು, ಸಾರ್ವಜಕರು ಕುಳಿತುಕೊಳ್ಳಲು ಬೆಂಚ್‌ಗಳನ್ನು ಹಾಕುವ ಮೂಲಕ ಕಸದ ಜಾಗಕ್ಕೆ ಮುಕ್ತಿಕೊಡುವ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನಕ್ಕೆ ಸಾರ್ವಜನಿಕರು ಮುಖ್ಯವಾಗಿ ಸಹಕಾರ ನೀಡಬೇಕು.
ನೀಲಲೋಚನ ಪ್ರಭು, ಆಯುಕ್ತ ಹೊಸಕೋಟೆ ನಗರಸಭೆ