ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನೆಲಮಂಗಲ ತಾಲೂಕು ಸೋಂಪುರ ಗ್ರಾಮ ಪಂಚಾಯಿತಿ ಕಟ್ಟಡದ ಆವರಣದಲ್ಲಿ ಬುಧವಾರ ತಿಮ್ಮನಾಯಕನಹಳ್ಳಿ ಗ್ರಾಮಸ್ಥರು ಕಸ ಸುರಿದು ಪ್ರತಿಭಟಿಸುವ ಮೂಲಕ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿರುವುದು ಹೋಬಳಿಯಲ್ಲಿ ದೊಡ್ಡ ಸದ್ದು ಮಾಡಿದೆ.
ಬೆಳ್ಳಂಬೆಳಗೆ ನೂರಾರು ರೈತರು ಕಸದ ರಾಶಿ ತಂದು ಪಂಚಾಯಿತಿ ಆವರಣದಲ್ಲಿ ಸುರಿಯುವ ಮೂಲಕ ಸಿಬ್ಬಂದಿಯನ್ನು ಎಚ್ಚರಿಸುವ ಕೆಲಸ ಮಾಡಿದರು. ಇದುವರೆಗೆ ಕಸ ವಿಂಗಡಣೆ ಮಾಡದೆ ಎಲ್ಲೆಂದರಲ್ಲಿ ಕಸ ವಿಲೇವಾರಿ ಮಾಡುವವರನ್ನು ಪತ್ತೆ ಮಾಡಿ ಅವರ ಮನೆ ಮುಂದೆ ಅಥವಾ ಸಂಬಂಧಪಟ್ಟವರ ಮಳಿಗೆ ಅಂಗಡಿಗಳ ಮುಂದೆ ಕಸ ಸುರಿದು ಎಚ್ಚರಿಕೆ ನೀಡುತ್ತಿದ್ದ ಸ್ಥಳೀಯ ಆಡಳಿತವೇ ಈ ಬಾರಿ ಸಾರ್ವಜನಿಕರಿಂದ ಛೀಮಾರಿಗೆ ಒಳಗಾಗಿದ್ದು ಪಂಚಾಯಿತಿ ಸಿಬ್ಬಂದಿ ಕಸಿವಿಸಿ ಅನುಭವಿಸುವಂತಾಗಿದೆ.
ಕಂದಾಯ ಭೂಮಿಯಲ್ಲಿ ಕಸದ ರಾಶಿ:
ಸೋಂಪುರ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಒಳಪಡುವ ತಿಮ್ಮನಾಯಕನಹಳ್ಳಿಯಲ್ಲಿನ ಸುಮಾರು 2 ಎಕರೆ ಕಂದಾಯ ಇಲಾಖೆ ಜಮೀನು ಕಸ ಸುರಿಯುವ ತಾಣವಾಗಿ ರೂಪಗೊಂಡಿರುವುದು ಗ್ರಾಮಸ್ಥರನ್ನು ಕೆರಳಿಸಿದೆ. ಸರ್ಕಾರಿ ಜಾಗಕ್ಕೆ ಯಾವುದೇ ತಡೆಗೋಡೆ ಮತ್ತಿತರ ರಕ್ಷಣಾತ್ಮಕ ಕಾರ್ಯಕೈಗೊಳ್ಳದೆ ಇರುವುದರಿಂದ ಕೈಗಾರಿಕೆಗಳಲ್ಲಿ ಉತ್ಪತ್ತಿಯಾಗುವ ಟನ್‌ಗಟ್ಟಲೆ ಕಸ ಈ ಪ್ರದೇಶಕ್ಕೆ ತಲುಪುತ್ತಿದೆ ಎಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸೋಂಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಕಾಂಪೌಂಡ್ ನಿರ್ಮಾಣ ಮಾಡದೆ ಹಾಗೆಯೇ ಬಿಟ್ಟಿರುವುದರಿಂದ ಸುಮಾರು ಕೈಗಾರಿಕಾ ಪ್ರದೇಶದಲ್ಲಿರುವ ತ್ಯಾಜ್ಯಗಳನ್ನು ತಿಮ್ಮ ನಾಯಕನಹಳ್ಳಿಯಲ್ಲಿ ಸುರಿಯಲಾಗುತ್ತಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಕೇವಲ ಕೈಗಾರಿಕಾ ತ್ಯಾಜ್ಯವಷ್ಟೇ ಅಲ್ಲದೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನೂ ಪಂಚಾಯಿತಿ ವತಿಯಿಂದಲೇ ತಂದು ಸುರಿಯುತ್ತಿರುವುದರಿಂದ ಇಲ್ಲಿನ ಸ್ಮಶಾನ ಜಾಗವೂ ಕಸದ ರಾಶಿಯಿಂದ ತುಂಬಿಹೋಗಿ ಸ್ಮಶಾನದ ಜಾಗವೇ ಕಣ್ಮರೆಯಾಗುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸ್ಕಾರಕ್ಕೆ ಬಂದವರು ಕಕ್ಕಾಬಿಕ್ಕಿ:
ಬುಧವಾರ ಗ್ರಾಮದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನದ ದಾರಿ ಹಿಡಿದ ವೇಳೆ ಇಲ್ಲಿನ ತ್ಯಾಜ್ಯ ಮಾಫಿಯಾ ಕಂಡುಬಂದಿದೆ. ಇದನ್ನು ಕಂಡು ಅವಕ್ಕಾದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಇಲ್ಲಿನ ಸಾಕಷ್ಟು ಕಸವನ್ನು ತಂದು ಪಂಚಾಯಿತಿ ಆವರಣದಲ್ಲಿ ಸುರಿದು ಪ್ರತಿಭಟಿಸಿದ್ದಾರೆ. ಸೋಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ತಿಮ್ಮನಾಯಕನಹಳ್ಳಿ ಸ್ಮಶಾನದಲ್ಲಿ ಸೋಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಷ್ಟೂ ಗ್ರಾಮಗಳ ಕಸ ಸುರಿಯುವ ಮೂಲಕ ಸ್ಮಶಾನ ಜಾಗವನ್ನು ಕಣ್ಮರೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅವರ ಅಂತ್ಯಸಂಸ್ಕಾರಕ್ಕಾಗಿ ಕಂದಾಯ ಇಲಾಖೆಯಿಂದ ಜಮೀನು ಮಂಜೂರಾಗಿದೆ ಆದರೆ ಇದನ್ನು ಭದ್ರಪಡಿಸಬೇಕಾದ ಪಂಚಾಯಿತಿ ಅವರೇ ಕೈಗಾರಿಕೆಗಳ ಮಾಲೀಕರ ಜತೆ ಕೈಜೋಡಿಸಿದಂತಿದೆ. ಸ್ಮಶಾನವನ್ನು ಮುಚ್ಚಿಹಾಕಲು ಹುನ್ನಾರ ನಡೆಸುವಂತೆ ಕಂಡುಬರುತ್ತಿದೆ. ಇದರಿಂದ ಆಕ್ರೋಶಗೊಂಡು ಪಂಚಾಯಿತಿ ಎದುರು ಕಸ ಸುರಿದು ಪ್ರತಿಭಟಿಸಿದ್ದೇವೆ ಇನ್ನಾದರೂ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.
ಮಹದೇವಯ್ಯ, ತಿಮ್ಮನಾಯಕನಹಳ್ಳಿ
ಈ ಭಾಗದಲ್ಲಿ ಯಾವುದೇ ಕೈಗಾರಿಕೆಗಳ ಕಸ ತಂದು ಸುರಿಯದಂತೆ ಎಚ್ಚರಿಕೆ ವಹಿಸಲಾಗುವುದು. ಅಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ತಂದು ಸುರಿಯದಂತೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಜತೆಗೆ ಸ್ಮಶಾನ ಜಾಗದ ಅಭಿವೃದ್ಧಿಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು.
ಇಂದ್ರಮ್ಮ ಆರ್.ರಮೇಶ್, ಗ್ರಾಪಂ ಅಧ್ಯಕ್ಷೆ ಸೋಂಪುರ