ಡಿ. 25 ರಂದು ಬ್ರಹ್ಮರಥೋತ್ಸವ 
ಬೆಂಗಳೂರು ಗ್ರಾಮಾಂತರ

ಘಾಟಿ ಬ್ರಹ್ಮ ರಥೋತ್ಸವಕ್ಕೆ ಸಕಲ ಸಿದ್ಧತೆ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಡಿ. 25 ರಂದು ಬ್ರಹ್ಮರಥೋತ್ಸವ ನಡೆಯಲಿದ್ದು ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎಬಿ ಬಸವರಾಜು ಮಾಹಿತಿ ನೀಡಿದರು.
ದೇವನಹಳ್ಳಿಯ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. 25 ರಂದು ಮಧ್ಯಾಹ್ನ 12 ರಿಂದ 12.15 ಶುಭ ಮೂಹರ್ತದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ಕಳೆದ ವರ್ಷ 1.50 ಲಕ್ಷದವರೆಗೂ ಭಕ್ತರು ಭಾಗಿಯಾಗಿದ್ದರು. ಈ ಬಾರಿ ಬ್ರಹ್ಮರಥೋತ್ಸವವು ರಜೆ ದಿನ ಬಂದಿರುವುದರಿಂದ 2 ಲಕ್ಷಕ್ಕೂ ಹೆಚ್ಚು ಭಕ್ತರು ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಾಹನದಟ್ಟಣೆ, ಜನಸಂದಣಿ ನಿಯಂತ್ರಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ ಎಂದರು.
ಪುಟ್‌ಪಾತ್‌ಗಳ ತೆರವು:
ಘಾಟಿ ಕ್ಷೇತ್ರಕ್ಕೆ ಆಗಮಿಸಲು ಪ್ರಮುಖವಾಗಿ ಎರಡು ರಸ್ತೆ ಸಂಪರ್ಕಗಳಿದ್ದು ಮಾಕಳಿ ಹಾಗೂ ಕಂಟನಕುಂಟೆ ರಸ್ತೆಗಳಲ್ಲಿ ಸ್ವಚ್ಚತೆ ಕಾರ್ಯ, ಪಾದಚಾರಿ ಮಾರ್ಗ ಒತ್ತುವರಿ ತೆರವು ಮಾಡಲಾಗಿದೆ. ಇಲ್ಲಿ ಮೂಲಸೌಕರ್ಯ ವ್ಯವಸ್ಥೆ ಮಾಡಲಾಗಿದೆ. ದೇವಾಲಯ ಸುತ್ತಮುತ್ತಲಿನ ಪಾದಚಾರಿ ಮಾರ್ಗದ ಮೇಲಿನ ಅಂಗಡಿಗಳನ್ನು ತೆರವುಮಾಡಲಾಗಿದ್ದು ಭಕ್ತರ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದಂತೆ ಕ್ರಮವಹಿಸಲಾಗಿದೆ ಎಂದು ಡಿಸಿ ತಿಳಿಸಿದರು.
ಭಕ್ತರಿಗೆ ಉಚಿತ ಬಸ್ ವ್ಯವಸ್ಥೆ:
ರಥೋತ್ಸವಕ್ಕೆ ಬರುವ ಭಕ್ತರ ವಾಹನಗಳಿಗೆ ಕಂಟನಕುಂಟೆ ಮಾರ್ಗ ಹಾಗೂ ಮಾಕಳಿ ಮಾರ್ಗ ಬಳಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕು. ಪಾರ್ಕಿಂಗ್ ಸ್ಥಳದಿಂದ ದೇವಾಲಯದ ಬಳಿಗೆ ತೆರಳಲು ಜಿಲ್ಲಾಡಳಿತದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು ಭಕ್ತರು ಆ ಬಸ್‌ಗಳ ಮೂಲಕವೇ ಬಂದು ದರ್ಶನ ಪಡೆದು ಮತ್ತೇ ಅದೇ ಬಸ್‌ಗಳ ಮೂಲಕ ಮರಳಬಹುದು. ದೇವಾಲಯದ ಬಳಿ ವಾಹನ ಸಂಚಾರ ದಟ್ಟಣೆ, ಸಂಚಾರಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕ್ಷೇತ್ರಕ್ಕೆ ಬರುವ ವಾಹನಗಳಿಗೆ ಸುಂಕ ವಿನಾಯಿತಿ ನೀಡಲಾಗಿದೆ. ಭಕ್ತರಿಗೆ ಸುಗಮ ದರ್ಶನ ವ್ಯವಸ್ಥೆಗಾಗಿ ಧರ್ಮ ದರ್ಶನ ಮತ್ತು 50 ರೂ. ವಿಶೇಷ ದರ್ಶನ ವ್ಯವಸ್ಥೆ ಇರಲಿದೆ. 28 ರವರೆಗೆ ಕ್ಷೇತ್ರದಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದೆ ಎಂದರು.
100 ಸಿಸಿ ಟಿವಿ ಕ್ಯಾಮರಾ:
ಎಸ್‌ಪಿ ಸಿ.ಕೆ ಬಾಬಾ ಅವರು ಮಾತನಾಡಿ, ಬ್ರಹ್ಮರಥೋತ್ಸವದಲ್ಲಿ 2 ಲಕ್ಷದವರೆಗೂ ಸಾರ್ವಜನಿಕರು ಸೇರುವ ನಿರೀಕ್ಷೆ ಇದೆ. ಭಕ್ತರಿಗೆ ಪಾರ್ಕಿಂಗ್ ಸಮಸ್ಯೆ ಬಗೆ ಹರಿಸಲು ಕ್ರಮ ವಹಿಸಲಾಗಿದ್ದು, ಕಾರು ಸೇರಿ ಇತರೆ ವಾಹನಗಳಿಗೆ 14 ಪಾರ್ಕಿಂಗ್‌ಸ್ಥಳ, ದ್ವಿಚಕ್ರ ವಾಹನಗಳಿಗೆ 4 ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿದೆ. ಭದ್ರತೆಗಾಗಿ ಈ ವರ್ಷ 1 ಸಾವಿರ ಪೊಲೀಸ್‌ಸಿಬ್ಬಂದಿ ನಿಯೋಜನೆ ಮಾಡಲಾಗಿದೆ, ಅಗ್ನಿಶಾಮಕ ವಾಹನ ವ್ಯವಸ್ಥೆ ಮಾಡಲಾಗಿದೆ. ಜತೆಗೆ 100 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದ್ದು ಅದರ ವೀಕ್ಷಣೆಗೆ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಎಂದರು.
ಡಿ.24.25 ಸಾಂಸ್ಕೃತಿಕ ಕಾರ್ಯಕ್ರಮಗಳು:
ಘಾಟಿಯ ರಂಗ ಮಂದಿರದಲ್ಲಿ ಡಿ. 24, 25 ರಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 70 ಕಲಾ ತಂಡಗಳು ನೋಂದಣಿ ಆಗಿದ್ದು ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಈಗಲೂ ಅವಕಾಶವಿದ್ದು ರಂಗ ಮಂದಿರ ಬಳಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಆಗಿ ನೋಂದಾಯಿಸಬಹುದಾಗಿದೆ ಎಂದು ಜಿಪಂ ಸಿಇಒ ಡಾ.ಕೆ.ಎನ್.ಅನುರಾಧಾ ತಿಳಿಸಿದರು. ಕಂಟನಕುಂಟೆ , ಹಾಡೋನಹಳ್ಳಿ ಗ್ರಾಪಂ ವ್ಯಾಪ್ತಿಯ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ತುರ್ತು ಸೇವೆಗಳ ನಿಮಿತ್ತ 4 ಅಂಬುಲೆನ್ಸ್, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸೆ, ಹೆಚ್ಚುವರಿ ಆರೋಗ್ಯ ಸಿಬ್ಬಂದಿ ನೇಮಿಸಲಾಗಿದೆ, ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರು, ಮೊಬೈಲ್ ಶೌಚಗೃಹ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು