ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ (ಎಸ್‌ಐಆರ್) ಕರ್ತವ್ಯಕ್ಕೆ ತೆರಳುವಾಗ ತುಮಕೂರಿನ ಗೂಳೂರು ಬಳಿ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಶನಿವಾರ ಕೊನೆಯುಸಿರೆಳೆದಿದ್ದ ನೆಲಮಂಗಲ ತಾಲೂಕಿನ ಟಿ.ಬೇಗೂರಿನ ಭುವನಾ (26) ಅಂತ್ಯಸಂಸ್ಕಾರವನ್ನು ಸ್ವಗ್ರಾಮ ವರದನಾಯನಹಳ್ಳಿಯ ಜಮೀನಿನಲ್ಲಿ ಭಾನುವಾರ ನೆರವೇರಿಸಲಾಯಿತು.
ಭಾನುವಾರ ಮಧ್ಯಾಹ್ನದವರೆಗೆ ವರದನಾಯಕನಹಳ್ಳಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ವಾಡಲಾಗಿತ್ತು. ತಾಲೂಕು ಆಡಳಿತ, ಕಂದಾಯ ಅಧಿಕಾರಿಗಳು, ಗ್ರಾಮಸ್ಥರು ಸೇರಿ ಸಾಕಷ್ಟು ಮಂದಿ ಅಂತಿಮ ದರ್ಶನ ಪಡೆದರು.
ಅಪಘಾತಕ್ಕೆ ಕಾರಣವಾದ ತಮಿಳುನಾಡು ಮೂಲದ ಲಾರಿ ಚಾಲಕ ಮುರುಗನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಭುವನಾ ಸಂಬಂಧಿಕರು ತುಮಕೂರು ಗ್ರಾವಾಂತರ ಠಾಣೆಗೆ ದೂರು ದಾಖಲಿಸಿದ್ದರು. ಜತೆಗೆ ಕರ್ತವ್ಯದ ಒತ್ತಡ ನೀಡಿ ಮಗಳ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪಾಲಕರು ಒತ್ತಾಯಿಸುತ್ತಿದ್ದ ದೃಶ್ಯ ಕಂಡುಬಂತು.
ನೆಲಮಂಗಲ ತಾಲೂಕು ಟಿ.ಬೇಗೂರು ಸಮೀಪದ ವರದನಾಯಕಹಳ್ಳಿಯ ರಮೇಶ್ ಹಾಗೂ ಸರೋಜಮ್ಮ ದಂಪತಿ ಪುತ್ರಿ ಭುವನಾ ಅವಿವಾಹಿತೆಯಾಗಿದ್ದು ಇತ್ತೀಚೆಗೆ ವಿವಾಹವೂ ನಿಶ್ಚಯವಾಗಿತ್ತು ಎನ್ನಲಾಗಿದೆ. ಆರು ವರ್ಷಗಳ ಹಿಂದೆ ಮೆರಿಟ್ ಆಧಾರದ ಮೇಲೆ ಗ್ರಾಮ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದರು.
ತುಮಕೂರಿನ ಹುಲ್ಲೇನಹಳ್ಳಿಯ ಗ್ರಾಮ ಆಡಳಿತಾಧಿಕಾರಿ ಟಿ.ಭುವನಾ ಜು.4ರಂದು ಶನಿವಾರ ಬೆಳಗ್ಗೆ ಗೂಳೂರು ಬಳಿ ಬೈಕ್‌ನಲ್ಲಿ ಎಸ್‌ಐಆರ್ ಪ್ರಕ್ರಿಯೆಯ ವಿಎಒ ಸೂರ್ಪವೈಸರ್ ಆಗಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಕೂಡಲೇ ಭುವನಾ ಅವರನ್ನು ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದರು. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು.
ಜಿಲ್ಲಾಡಳಿತದ ವಿರುದ್ಧ ಆಕ್ರೋಶ:
ವಿಎಒ ಸಾವಿಗೆ ಕಾರಣವಾಗಿರುವ ಜಿಲ್ಲಾಡಳಿತದ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು. ಬದುಕಿ ಬಾಳಬೇಕಾದ ನೌಕರರ ಜೀವವನ್ನು ಅಧಿಕಾರ ವರ್ಗ ತೆಗೆದಿದೆ. ಎಸ್‌ಐಆರ್ ಕಾರ್ಯಕ್ಕೆ ಅಧಿಕಾರಿಗಳ ಕಿರುಕುಳ, ಒತ್ತಡದಿಂದಲೇ ಭುವನ ಸಾವು ಆಗಿದೆ. ಸರ್ಕಾರದ ಸುತ್ತೋಲೆ ವಿರುದ್ಧವಾಗಿ ರಾತ್ರಿವರೆಗೆ ಕೆಲಸ ಮಾಡಿಸಿಕೊಂಡು ಬೆಳಗ್ಗೆ 7.30 ಹೊತ್ತಿಗೆ ಕೆಲಸದಲ್ಲಿ ಹಾಜರಿರುವಂತೆ ಒತ್ತಡ ಹೇರಲಾಗಿದೆ. ಇದಕ್ಕೆ ಹೊಣೆಯಾದವರು ಕ್ರಮ ಆಗಲೇಬೇಕು. ಭುವನಾ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಅಧ್ಯಕ್ಷ, ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘದ ಅಧ್ಯಕ್ಷ ಯೋಗೀಶ್ ನಾಯಕ್ ಒತ್ತಾಯಿಸಿದ್ದಾರೆ.
ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿ ಬೇಕಾ ನಿಮಗೆ? ಕಂದಾಯ ಗ್ರಾಮ, ಪೋಡಿ, ಪೌತಿ ಖಾತೆ ಎಲ್ಲದರಲ್ಲೂ ನಮ್ಮ ಜಿಲ್ಲೆ ಸ್ಟ್ ಇದೆ. ರ‌್ಯಾಂಕ್ ಏಕೆ ಬೇಕು. ನಮ್ಮನ್ನು ಸಾಯಿಸಲು ಬಂದಿದ್ದೀರಾ, ಈ ಹಿಂದೆ ಜಿಲ್ಲಾಧಿಕಾರಿಗಳೆಲ್ಲಾ ಕೆಲಸ ಮಾಡಿಲ್ಲವಾ?. ಮಂತ್ರಿ, ಮುಖ್ಯಮಂತ್ರಿಗಳು ಮಾಡಿರಲಿಲ್ಲವಾ? ಈ ಘಟನೆಗೆ ಜಿಲ್ಲಾಧಿಕಾರಿಗಳೇ ಕಾರಣ. ಎಸ್‌ಐಆರ್ ಮಾತ್ರವಲ್ಲ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಒತ್ತಡ ಹೇರಲಾಗುತ್ತಿದ್ದು, ಇದು ಇಡೀ ರಾಜ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಕಂದಾಯ ಇಲಾಖೆ ನೌಕರರ ಸಂಘ ಜಿಲ್ಲಾಧ್ಯಕ್ಷ ನರಸಿಂಹರಾಜು ಡಿಸಿ ವಿರುದ್ಧ ಹರಿಹಾಯ್ದಿದ್ದಾರೆ.