Foxo case. 
ಬೆಂಗಳೂರು ಗ್ರಾಮಾಂತರ

ಫೋಕ್ಸೋ ಪ್ರಕರಣ ಹೆಚ್ಚಳ ಆತಂಕಕಾರಿ

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಇತ್ತಿಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ಜತೆಗೆ ಫೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯ ಎಂದು ಜಿಲ್ಲಾ ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎಸ್.ಸೋಮಶೇಖರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗದ ವತಿಯಿಂದ ಮಕ್ಕಳ ಹಕ್ಕುಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಪೋಕ್ಸೋ ಕಾಯ್ದೆ-2012 ರ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿ ವ್ಯಕ್ತಿಯನ್ನು ’ಮಗು’ ಎಂದು ಪರಿಗಣಿಸಲಾಗುತ್ತದೆ. ಅಪ್ರಾಪ್ತರ ಮೇಲೆ ಲೈಂಗಿಕ ಕಿರುಕುಳ ಮತ್ತು ಅಶ್ಲೀಲವಾಗಿ ವರ್ತಿಸುವುದು ಮಕ್ಕಳ ಹಕ್ಕುಗಳ ಕಾಯ್ದೆ ಪ್ರಕಾರ ಅಪರಾಧವಾಗುತ್ತದೆ. ಮಕ್ಕಳನ್ನು ಸುಮ್ಮನೆ ಮುಟ್ಟುವುದು, ಕೈ ಮಾಡುವುದು, ಅಶ್ಲೀಲಚಿತ್ರಗಳನ್ನ ತೋರಿಸುವುದು ಈ ರೀತಿ ಯಾರಾದರು ಅನುಚಿತವಾಗಿ ವರ್ತಿಸಿದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಹಿಂಸೆ ಕೊಡುವಂತಿಲ್ಲ:
ಮಕ್ಕಳಿಗೆ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ಕೊಡುವಂತಿಲ್ಲ. ಶಾಲೆಗಳಲ್ಲಿ ಮಕ್ಕಳ ಮೇಲೆ ಹಲ್ಲೆ, ನಿಂದನೆ, ಮಾನಸಿಕ ಹಿಂಸೆ ಇವೆಲ್ಲವೂ ಅಪರಾಧಗಳೇ ಎಂದು ಸೋಮಶೇಖರ್ ತಿಳಿಸಿದರು. ಶಾಲಾ ಕಾಲೇಜು ಶಿಕ್ಷಕರು, ಆಡಳಿತ ಮಂಡಳಿ ಅಥವಾ ಇತರೆ ಸಿಬ್ಬಂದಿ ಮಕ್ಕಳಿಗೆ ಮಾನಸಿಕ, ದೈಹಿಕ ಕಿರುಕುಳ ನೀಡುವುದು ಕಂಡುಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ, ಶಿಕ್ಷಣ ಸಂಸ್ಥೆಗಳಲ್ಲಿನ ಚಲನವಲನಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ತಾಕೀತು ಮಾಡಿದರು. ಕಾಲಕಾಲಕ್ಕೆ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಪಾಲಕರೂ ಮಕ್ಕಳ ಮೇಲೆ ಸದಾ ನಿಗಾ ಇಡಬೇಕು ಇದರಿಂದ ಇಂಥ ಪ್ರಕರಣಗಳಿಗೆ ಕಡಿವಾಣ ಹಾಕಬಹುದು ಎಂದು ಸಲಹೆ ನೀಡಿದರು.
ಪರಿಣಾಮ ಬೀರುತ್ತದೆ:
ಶಿಕ್ಷಕರು ಮತ್ತು ಪೊಲೀಸ್ ಅಧಿಕಾರಿಗಳು ಚೈಲ್ಡ್ ಸೈಕಾಲಜಿ ಮತ್ತು ಚೈಲ್ಡ್ ಡೆವಲಪ್‌ಮೆಂಟ್ ಬಗ್ಗೆ ತಿಳಿದುಕೊಳ್ಳಬೇಕು. ಎಷ್ಟ್ಟೋ ಮಕ್ಕಳು ತಮ್ಮ ಭಾವನೆಗಳನ್ನ ಇತರರೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ. ಅದು ಅವರ ಬೆಳೆದ ವಾತಾವರಣ ಆಗಿರಬಹುದು ಅಥವಾ ಮನೆಯ ಸ್ಥಿತಿ ಆಗಿರಬಹುದು ಅದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಿರುತ್ತದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳ ಮನಸ್ಥಿಯನ್ನು ತಿಳಿದುಕೊಂಡು ಅದನ್ನ ಸರಿಪಡಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿಗಳು ತಿಳಿಸಿದರು.
ನಮ್ಮೆಲ್ಲರ ಕರ್ತವ್ಯವಾಗಿದೆ:
ಮಕ್ಕಳಿಗೆ ಪ್ರೀತಿ, ರಕ್ಷಣೆ ಹಾಗೂ ಶಿಕ್ಷಣ ನೀಡಿ ಅಗತ್ಯತೆ ಈಡೇರಿಸುವುದು ಸರ್ಕಾರ, ಸಮಾಜ ಹಾಗೂ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಬಾಲಕಾರ್ಮಿಕ ಮಕ್ಕಳನ್ನು ದುಡಿಯುವ ಯಂತ್ರಗಳನ್ನಾಗಿ ಮಾಡಿಕೊಂಡು ಅವರ ಕನಸುಗಳನ್ನು ಛಿದ್ರ ಮಾಡುತ್ತಿದೆ. ಇದನ್ನೆಲ್ಲಾ ವಿರೋಧಿಸಿ ಮಕ್ಕಳನ್ನು ರಕ್ಷಿಸಿ ಬಾಲ್ಯಾವಸ್ಥೆಯಲ್ಲಿ ಶಿಕ್ಷಣ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧಾ ಹೇಳಿದರು. ಮಕ್ಕಳ ಮೇಲಿನ ದೌರ್ಜನ್ಯಗಳು ಕಂಡು ಬಂದಲ್ಲಿ ದೂರವಾಣಿ ಸಂಖ್ಯೆ 112 ಅಥವಾ ಚೈಲ್ಡ್ ಲೈನ್ 1098 ಗೆ ಉಚಿತ ದೂರವಾಣಿ ಕರೆ ಮಾಡಿ ದೂರು ನೀಡಿ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕ 0034 ಗೆ ಕರೆ ಮಾಡಿ ಮಕ್ಕಳ ರಕ್ಷಣೆಗೆ ಸಹಕಾರ ನೀಡಬಹುದಾಗಿದೆ ಎಂದು ಮಾಹಿತಿ ನೀಡಿದರು.