ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸೂಲಿಬೆಲೆ ಹಳೇ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣಕ್ಕೆ ಸಂಪರ್ಕ ಹೊಂದಿರುವ ರಸ್ತೆ ಎರಡು ಬದಿಯಲ್ಲಿ ಪಾದಚಾರಿ ಮಾರ್ಗ ಒತ್ತವರಿ ಮಾಡಿಕೊಂಡು ಬೀದಿ ಬದಿ ವ್ಯಾಪಾರ ಮಾಡುತ್ತಿದ್ದವರನ್ನು ತೆರವು ಮಾಡಿಸಲು ಮುಂದಾದ ಪಂಚಾಯಿತಿ ಸಿಬ್ಬಂದಿ ವಿರುದ್ಧ ಪುಟ್‌ಪಾತ್ ವ್ಯಾಪಾರಿಗಳು ತಿರುಗಿಬಿದ್ದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ಮಂಗಳವಾರ ನಡೆದಿದೆ.
ಪಾದಚಾರಿ ಮಾರ್ಗದಲ್ಲಿ ಅಕ್ರಮವಾಗಿ ಅಂಗಡಿಗಳು ತಲೆ ಎತ್ತಿದ್ದು, ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪಿಡಿಒ ನೇತೃತ್ವದಲ್ಲಿ ಪಂಚಾಯಿತಿ ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾಗಿತ್ತು. ಈ ವೇಳೆ ಪುಟ್‌ಪಾತ್ ವ್ಯಾಪಾರಿಗಳು ಸಿಬ್ಬಂದಿಗೆ ದಮ್ಕಿ ಹಾಕಿದರು ಎನ್ನಲಾಗಿದ್ದು ಈ ವೇಳೆ ಪಿಡಿಒ ಮಂಜುನಾಥ್ ಹಾಗೂ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾದರಿ ಶಾಲೆ ಹಾಗೂ ಉರ್ದು ಶಾಲೆಯ ತಡೆಗೋಡೆ ರಸ್ತೆಗೆ ಹೊಂದಿಕೊಂಡಿದ್ದು, ಶಾಲೆ ಆವರಣದೊಳಗಿರುವ ಮರವನ್ನು ಅರಣ್ಯ ಇಲಾಖೆ ಅಥವಾ ಸ್ಥಳೀಯ ಗ್ರಾಪಂ ಅನುಮತಿಯಿಲ್ಲದೆ ಕತ್ತರಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಗ್ರಾಪಂಗೆ ದೂರು ನೀಡಿದ್ದರು. ವ್ಯಾಪಾರಕ್ಕೆ ಅಡ್ಡಿಯಾಗುತ್ತಿದೆ ಎಂಬ ಕಾರಣಕ್ಕೆ ಮರ ಕತ್ತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಪುಟ್‌ಪಾತ್ ವ್ಯಾಪಾರಿಗಳ ತೆರವಿಗೆ ಗ್ರಾಪಂ ಮುಂದಾಗಿತ್ತು. ಅಕ್ರಮವಾಗಿ ಪುಟ್ ಬಾತ್ ಮೇಲೆ ಹಾಕಿದ ಅಂಗಡಿಗಳನ್ನು ತೆರವು ಮಾಡಲು ಮುಂದಾದ ವೇಳೆ ಮಾತಿನ ಚಕಮಕಿ ನಡೆದಿದೆ.
ಅರಣ್ಯ ಇಲಾಖೆಯಿಂದ ಕಾನೂನು ಕ್ರಮ:
ಮರ ಕತ್ತರಿಸಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಇದಕ್ಕೆ ಕಾರಣವಾದವರ ಪತ್ತೆ ಮಾಡಿ ಕಾನೂನು ಜರುಗಿಸಲಾಗುವುದು ಎಂದು ತಿಳಿಸಿದರು.
ಸೂಲಿಬೆಲೆ ಶಾಲೆ ಆವರಣಕ್ಕೆ ಹೊಂದಿಕೊಂಡಿರುವ ರಸ್ತೆ ಬದಿಯ ಪಾದಚಾರಿ ಮಾರ್ಗವನ್ನು ಅಂಗಡಿಗಳವರು ಸ್ವಂತ ಜಾಗವಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಇದನ್ನು ಪ್ರಶ್ನಿಸಿದರ ಮೇಲೆ ಅಂಗಡಿಗಳವರು ದೌರ್ಜನ್ಯದಿಂದ ವರ್ತಿಸುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ. ಶಾಲಾ ಮಕ್ಕಳು ಪಾದಚಾರಿ ಮಾರ್ಗ ಅತಿಕ್ರಮದಿಂದಾಗಿ ರಸ್ತೆಗಳ ಮಧ್ಯೆ ನಡೆದಾಡುವಂತಾಗಿದೆ ಇದರಿಂದ ಪಾಲಕರು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕೆಲವರು ಅಡುಗೆ ತಯಾರಿಸಿ ಮಾರಾಟಕ್ಕೆ ತಂದಿರುವುದಾಗಿ ಹೇಳಿದ ಕಾರಣ ಒಂದು ದಿನ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಸಂಚರಿಸುವ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಇದನ್ನು ತೆರವು ಮಾಡಲಾಗುವುದು. ಮುಂದೆ ಇದು ಪುನಾವರ್ತನೆಯಾದರೆ ಕಾನೂನು ಕ್ರಮ ಜರುಗಿಸಲಾಗುವುದು.