ವಿಜಯಪುರ : ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಕುಸಿದಿದ್ದು, ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ವರಮಹಾಲಕ್ಷ್ಮೀ ಹಾಗೂ ಗೌರಿ-ಗಣೇಶ ಹಬ್ಬದಲ್ಲಿ ಗಗನಕ್ಕೇರಿದ್ದ ಹೂವಿನ ಬೆಲೆಯು ಪಿತೃಪಕ್ಷದಲ್ಲಿ ಪಾತಾಳಕ್ಕಿಳಿದು ಸಂಕಷ್ಟ ಎದುರಿಸುವಂತಾಗಿದೆ.
ತಿಂಗಳ ಹಿಂದೆ ವರಮಹಾಲಕ್ಷ್ಮೀ ಹಬ್ಬದ ವೇಳೆ ವಿವಿಧ ಹೂವುಗಳು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾಗಿದ್ದವು. ಮಲ್ಲಿಗೆ, ಕನಕಾಂಬರ ಸೇರಿ ಹಲವು ಹೂವುಗಳಿಗೆ ಉತ್ತಮ ಬೇಡಿಕೆ ಇತ್ತು, ಸೆ.26ರ ಹುಣ್ಣಿಮೆ ಬಳಿಕ ಪಿತೃಪಕ್ಷ ಆರಂಭವಾಗಿದ್ದು, ಈ ಅವಧಿಯಲ್ಲಿ ಶುಭ ಸಮಾರಂಭಗಳು ನಡೆಯದ ಕಾರಣ ಹೂ ಬೇಡಿಕೆ ಕುಸಿದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಕೇಳಿದ ಬೆಲೆಗೆ ಹೂವುಗಳನ್ನು ಮಾರಾಟ ಮಾಡುವ ಸ್ಥಿತಿ ನಿಮಾರ್ಣವಾಗಿದೆ.
ಪುಷ್ಪೋದ್ಯಮಕ್ಕೆ ಹೆಸರುವಾಸಿ : ವಿಜಯಪುರ-&ದೇವನಹಳ್ಳಿ ಸುತ್ತಮುತ್ತ ಹಲವು ವರ್ಷಗಳಿಂದ ಪುಷ್ಪೋದ್ಯಮಕ್ಕೆ ಹೆಸರಾಗಿದೆ. ರೈತರು ಕನಿಷ್ಠ ನಾಲ್ಕೆ$ದು ಗುಂಟೆಯಿಂದ ಹಿಡಿದು ಎಕರೆಗಟ್ಟಲೇ ಹೂವು ಬೆಳೆಯುತ್ತಿದ್ದಾರೆ. ಕೊಳವೆಬಾವಿ ನೀರನ್ನು ಆಶ್ರಯಿಸಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಹೂವು ಬೆಳೆಯಲಾಗುತ್ತಿದೆ. ಜಿಲ್ಲೆಯ ಹೂವುಗಳು ಹೊಸಕೋಟೆ, ಚಿಕ್ಕಬಳ್ಳಾಪುರ, ಬೆಂಗಳೂರು, ಹೈದರಾಬಾದ್ ಸೇರಿ ಪ್ರಮುಖ ಮಾರುಕಟ್ಟೆಗಳಿಗೆ ರವಾನೆಯಾಗುತ್ತವೆ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಹೂವಿನ ಉತ್ಪಾದನೆ ಪ್ರಮಾಣ ಹೆಚ್ಚಾಗಿದ್ದು, ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದಲೂ ಬೇಡಿಕೆ ಕಡಿಮೆಯಾಗಿರುವುದೂ ಬೆಲೆ ಕುಸಿಯಲು ಕಾರಣವಾಗಿದೆ.
ಕೆಜಿಗೆ 50ರಿಂದ 100 ರೂ. ವರೆಗೆ : ಪ್ರಸ್ತುತ ವಿವಿಧ ಹೂವುಗಳು ಗುಣಮಟ್ಟಕ್ಕೆ ಅನುಗುಣವಾಗಿ ಕೆಜಿಗೆ 50ರಿಂದ 100 ರೂ. ವರೆಗೆ ಮಾರಾಟವಾಗುತ್ತಿವೆ. ಕೆಲವು ಮಾರುಕಟ್ಟೆಗಳಲ್ಲಿ ಒಂದು ಬ್ಯಾಗ್ ಹೂವಿಗೆ 100ರಿಂದ 150 ರೂ. ಬೆಲೆ ಸಿಗುತ್ತಿದ್ದರೆ, ಹೂವು ತುಂಬುವ ಖಾಲಿ ಬ್ಯಾಗ್ಗೇ 40ರಿಂದ 50 ರೂ. ವೆಚ್ಚವಾಗುತ್ತಿದೆ. ಕಾರ್ಮಿಕರಿಗೆ ಕೂಲಿ ನೀಡುವುದಕ್ಕೂ ರೈತರು ಪರದಾಡುವಂತಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವುದರಿಂದ ಹೂವು ಕೀಳುವ ಕೂಲಿ, ಸಾಗಣೆ ವೆಚ್ಚ, ಔಷಧ ಹಾಗೂ ರಸಗೊಬ್ಬರಕ್ಕೆ ಮಾಡಿದ ಹಣವೂ ವಾಪಸ್ ಬಾರದ ಪರಿಸ್ಥಿತಿ ನಿಮಾರ್ಣವಾಗಿದೆ. ಹೀಗಾಗಿ ಕೆಲ ರೈತರು ತೋಟದಲ್ಲಿರುವ ಹೂವುಗಳನ್ನು ಕೀಳದೆ ಬಿಡುತ್ತಿದ್ದಾರೆ. ಇದರಿಂದ ಹೂವುಗಳು ತೋಟದಲ್ಲೇ ಕೊಳೆಯುವಂತಾಗಿದೆ. ಕೆಲವರು ಬೆಳೆದ ಗಿಡಗಳನ್ನೇ ನಾಶಪಡಿಸಲು ಮುಂದಾಗಿದ್ದಾರೆ.
ಮಳೆಯಿಂದಲೂ ಹೊಡೆತ : ಗ್ರಾಮಾಂತರ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ಹೂವಿನ ಗುಣಮಟ್ಟವೂ ಕುಸಿಯುತ್ತಿದೆ. ಗುಣಮಟ್ಟ ಕಳೆದುಕೊಂಡ ಹೂವುಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ. ಮಳೆಯಿಂದ ಹೂವನ್ನು ರಕ್ಷಿಸಲು ಕೆಲವು ರೈತರು ತೋಟಗಳಿಗೆ ಪ್ಲಾಸ್ಟಿಕ್ ಹೊದಿಕೆ ಅಳವಡಿಸಲು ಮುಂದಾಗಿದ್ದಾರೆ.
ಎಕರೆಗೆ ರೂ. 2 ಲಕ್ಷಕ್ಕೂ ಅಧಿಕ ವೆಚ್ಚ : ಒಂದು ಎಕರೆ ಪ್ರದೇಶದಲ್ಲಿ ಸುಮಾರು 20 ಸಾವಿರ ಸುವರ್ಣ ಎಲ್ಲೋ ಹೂವಿನ ಸಸಿ ನಾಟಿ ಮಾಡಲಾಗುತ್ತದೆ. ನಾಟಿ ಕಾರ್ಯಕ್ಕೆ 50 ಸಾವಿರ ರೂ. ವೆಚ್ಚವಾಗುತ್ತದೆ. ಹನಿ ನೀರಾವರಿ, ಕೂಲಿ, ಮಚ್ಚಿಂಗ್ ಪೇಪರ್ ಸೇರಿ ಒಟ್ಟು ಸುಮಾರು 2 ಲಕ್ಷ ರೂ. ವೆಚ್ಚವಾಗುತ್ತದೆ. ಆದರೆ ಪ್ರಸ್ತುತ ಹೂವಿಗೆ ಸೂಕ್ತ ಬೆಲೆ ಸಿಗದಿರುವುದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ.
ಹೂವು ದರ ಕೆ.ಜಿ.ಗೆ
ಐಶ್ವರ್ಯ 20-40ರೂ.
ಸುವರ್ಣ ಎಲ್ಲೋ 20-40ರೂ.
ಹಳದಿ ಚೆಂಡು 5-10ರೂ.
ಕೆಂಪು ಚೆಂಡು 5-10ರೂ.
ಮಿರಾಬಲ್ ಹೂವು 60-100ರೂ.
ಮಾರಿಗೋಲ್ಡ್ 20-40ರೂ.
ಚಾಮಂತಿ ಹಳದಿ 20-60ರೂ.
ಚಾಮಂತಿ ಬಿಳಿ 80-100ರೂ.
ಮಸ್ಟಿನ್ 50-60ರೂ.
ಚಾಕಲೇಟ್ 10-20ರೂ.
ಅಸ್ಟ್ರಾ 50-60
ಪರ್ಪಲ್ 40-60ರೂ.
ಮಲ್ಲಿಗೆ 600ರೂ.
ಕನಕಾಂಬರ 800ರೂ.
ಕಾಕಾಡ 600ರೂ.
ಸಾಮಾನ್ಯ ದಿನಗಳಲ್ಲಿ ಚಾಕಲೇಟ್ ಹೂವು ಕೆಜಿಗೆ 60ರಿಂದ 80 ರೂ. ವರೆಗೆ ಮಾರಾಟವಾಗುತ್ತಿತ್ತು. ಈಗ 10ರಿಂದ 20 ರೂ. ಗೆ ಮಾರಾಟವಾಗುತ್ತಿದೆ. ಈ ಬೆಲೆಗೆ ಮಾರಾಟ ಮಾಡಿದರೆ ಹಾಕಿದ ಬಂಡವಾಳವೂ ಕೈಗೆ ಸಿಗುವುದಿಲ್ಲ.> ರಾಮಕೃಷ್ಣ, ರೈತ ವಿಜಯಪುರ
ಪಿತೃಪಕ್ಷ ಆರಂಭವಾದ ಬಳಿಕ ಶುಭ ಸಮಾರಂಭಗಳು ನಡೆಯದಿರುವುದು, ಹೊರ ಜಿಲ್ಲೆಗಳಿಗೆ ಹೂವಿನ ರವಾನೆ ಕಡಿಮೆಯಾಗಿರುವುದು ಹಾಗೂ ಸ್ಥಳಿಯ ಬೇಡಿಕೆ ಕುಸಿದಿರುವುದು ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿದೆ. ನವರಾತ್ರಿ ಆರಂಭವಾದ ಬಳಿಕ ಹೂವಿನ ಬೆಲೆ ಮತ್ತೆ ಉತ್ತಮಗೊಳ್ಳುವ ನಿರೀಕ್ಷೆ ಇದೆ.> ವೇಣುಗೋಪಾಲ್, ಹೂವಿನ ವ್ಯಾಪಾರಿ ವಿಜಯಪುರ
ಒಬ್ಬ ಕಾರ್ಮಿಕ ದಿನಕ್ಕೆ 35ರಿಂದ 45 ಕೆಜಿ ಹೂವು ಕೀಳುತ್ತಾರೆ. ಹೂವು ಕೀಳುವವರಿಗೆ ಊಟ, ಕಾಫಿ ನೀಡಿ 500 ರೂ. ಕೂಲಿ ನೀಡಬೇಕು. ಸುಮಾರು 25 ಕೆಜಿ ತೂಕದ ಹೂವಿನ ಒಂದು ಬ್ಯಾಗ್ ಮಾರುಕಟ್ಟೆಯಲ್ಲಿ ಕೇವಲ 200 ರೂಪಾಯಿಗೆ ಮಾರಾಟವಾಗುತ್ತಿದೆ.> ಮುನಿರಾಜು, ಹೂವು ಬೆಳೆಗಾರ, ಬೀಡಿಗಾನಹಳ್ಳಿ