ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹೋಬಳಿಯ 13 ಹಳ್ಳಿಗಳ 1,777 ಎಕರೆ ಭೂಮಿಯನ್ನು ಸ್ವಾಧೀನದಿಂದ ಕೈಬಿಡುವ ಆದೇಶದಲ್ಲಿ ಪಹಣಿಯಲ್ಲಿ ಶಾಶ್ವತ ವಿಶೇಷ ಕೃಷಿ ವಲಯ’ ಎಂದು ನಮೂದಿಸುವುದು, ಭೂಮಿ ನೀಡುವ ರೈತರಿಗೆ 3 ತಿಂಗಳ ಕಾಲಾವಕಾಶ ನೀಡಿ ಭೂಮಿ ಪಡೆಯುವುದು ಎನ್ನುವ ಷರತ್ತುಗಳನ್ನು ವಿಧಿಸಿರುವ ಷರತ್ತುಗಳನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಹೋರಾಟದ ಮೂಲಕ ಬುದ್ದಿ ಕಲಿಸಬೇಕಾಗುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ನ್ಯಾ.ಗೋಪಾಲಗೌಡ ಎಚ್ಚರಿಕೆ ನೀಡಿದರು.
ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಧರಣಿ ಸ್ಥಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಚನ್ನರಾಯಪಟ್ಟಣ ಹೋಬಳಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಸರ್ಕಾರ ವಿಧಿಸಿರುವ ಷರತ್ತುಗಳು ರೈತರ ಮೇಲೆ ಸೇಡು ತೀರಿಸಿಕೊಳ್ಳುವ ಮತ್ತು ರೈತರನ್ನು ಭಯಪಡಿಸಿ ಭೂಮಿಯನ್ನು ಕಬಳಿಸುವ ತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೂಸ್ವಾಧೀನಕ್ಕೆ ಮುಂದಾಗಿದ್ದ ಸರ್ಕಾರಕ್ಕೆ ಭೂಸ್ವಾಧೀನ ಕೈಬಿಡುವ ಅಧಿಕಾರವೂ ಇದೆ. ಆದ್ಧರಿಂದ ಭೂಸ್ವಾಧೀನ ಕೈಬಿಡುವ ನಿರ್ಣಯವನ್ನು ಮಾಡಿದ್ದರೆ ಸಾಕಾಗಿತ್ತು. ಎಲ್ಲೂ ಚಾಲ್ತಿಯಲ್ಲಿಲ್ಲದ ಶಾಶ್ವತ ವಿಶೇಷ ಕೃಷಿ ವಲಯ ಮಾಡಲು ಇವರಿಗೇನು ಅಧಿಕಾರವಿದೆ? ಯಾವುದೇ ವಲಯಗಳನ್ನು ಮಾಡುವ ಅಧಿಕಾರ ಯೋಜನ ಪ್ರಾಧಿಕಾರಗಳದ್ದು. ವಲಯಗಳನ್ನು ಮಾಡಲು ಅವರದೇ ಆದ ಪ್ರತ್ಯೇಕ ಮಾರ್ಗಸೂಚಿಗಳಿವೆ. ಅದ್ಯಾವುದೂ ಇಲ್ಲದೆ, ಶಾಶ್ವತ ವಿಶೇಷ ಕೃಷಿ ವಲಯ ಎಂದು ಘೋಷಿಸಲು ಇವರಿಗೆ ಯಾವ ಅಧಿಕಾರವೂ ಇಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.
ಇವರ ಸರ್ಕಾರವೇ ಶಾಶ್ವತವಲ್ಲ, ಇನ್ನು ಶಾಶ್ವತ ವಿಶೇಷ ಕೃಷಿ ವಲಯ ಮಾಡಲು ಇವರು ಯಾರು? ಇದು ಕಾನೂನು ಬಾಹಿರವಾಗಿ ರೈತರನ್ನು ಎದುರಿಸುವ ತಂತ್ರ. ರೈತರ ಮಕ್ಕಳು ತಮ್ಮ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಏಕೆ ಬಳಸಬಾರದು? ಇದನ್ನು ಹೇಗೆ ನಿರ್ಬಂಧಿಸುತ್ತೀರಾ? ಕಾನೂನನ್ನು ಸರಿಯಾಗಿ ಓದಿಕೊಂಡಿದ್ದರೆ ಈ ರೀತಿ ಆದೇಶ ಮಾಡುತ್ತಿರಲಿಲ್ಲ. ತಕ್ಷಣವೆ ಈ ಷರತ್ತುಗಳನ್ನು ಹಿಂಪಡೆಯಬೇಕು ಎಂದು ಗೋಪಾಲಗೌಡರು ಆಗ್ರಹಿಸಿದರು.
ಭೂಮಿ ಕಿತ್ತುಕೊಳ್ಳುವ ತಂತ್ರ:
ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಮಾತನಾಡಿ, ಇದು ರೈತರ ಒಗ್ಗಟ್ಟಿನ ಹೋರಾಟಕ್ಕೆ ಸಿಕ್ಕಿರುವ ಜಯ. ಭೂಸ್ವಾಧೀನ ಕೈಬಿಟ್ಟಿದ್ದಾರೆ, ಆದರೆ ಕೆಲವು ನಿಬಂಧನೆಗಳನ್ನು ಹಾಕಿದ್ದಾರೆ. ಇಂದಿನ ಸರ್ಕಾರ ಕಾರ್ಪೊರೇಟ್ ಕಂಪೆನಿಗಳ ಪರ ನಿಂತು ಸಾಧ್ಯವಾದಷ್ಟು ಭೂಮಿಯನ್ನು ಕಿತ್ತುಕೊಂಡುಬಿಡೋಣ ಎನ್ನುವ ರೀತಿಯಲ್ಲಿ 3 ತಿಂಗಳ ಗಡುವು ಕೊಟ್ಟಿದ್ದಾರೆ ಎಂದು ದೂರಿದರು. ರೈತರನ್ನು ಎದುರಿಸಲು ಶಾಶ್ವತ ಕೃಷಿ ವಲಯದ ಗುಮ್ಮನ ಕಥೆ ಹೇಳುತ್ತಿದ್ದಾರೆ. ನಾಲ್ಕು ವರ್ಷಗಳ ಸುದೀರ್ಘ ಹೋರಾಟ ಮಾಡಿರುವ ನಿಮ್ಮನ್ನು ಭಯಪಡಿಸಲು ಸಾಧ್ಯವಿಲ್ಲ. ಇದು ಮಾದರಿ ಹೋರಾಟ, ಮುಂದೆಯು ಮಾದರಿಯಾಗಿರುತ್ತದೆ ಎಂದರು.
ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿ ಕಾರಳ್ಳಿ ಶ್ರೀನಿವಾಸ್ ಮಾತನಾಡಿ, ಸರ್ಕಾರ ಕೂಡಲೇ ಈ ಷರತ್ತುಗಳನ್ನು ಹಿಂಪಡೆಯಬೇಕು ಮತ್ತು ಭೂಮಿಯನ್ನು ಹಸಿರು ವಲಯವನ್ನಾಗಿ ಮುಂದುವರಿಸಬೇಕು. ಇಲ್ಲವಾದಲ್ಲಿ ರೈತರ ವಿರುದ್ಧ ದ್ವೇಷ ಸಾಧಿಸುವಂತಿರುವ ಈ ಕಾನೂನುಬಾಹಿರ ಆದೇಶದ ವಿರುದ್ಧ ಬೃಹತ್ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.