elephant-travel 
ಬೆಂಗಳೂರು ಗ್ರಾಮಾಂತರ

ವರ್ಷಾಂತ್ಯದಲ್ಲಿ ಆನೆಗಳು ನಡೆದದ್ದೇ ದಾರಿ!

ಶಿವರಾಜ.ಎಂ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರತೀ ವರ್ಷ ಅಕ್ಟೋಬರ್‌ನಿಂದ ಡಿಸೆಂಬರ್‌ನ ವರ್ಷಾಂತ್ಯದ ದಿನಗಳಲ್ಲಿ ಕರ್ನಾಟಕ-ತಮಿಳುನಾಡು ಗಡಿ ಪ್ರದೇಶಗಳಲ್ಲಿ ಗಜಪಡೆಗಳ ಹಾವಳಿ ಸಾಮಾನ್ಯವಾಗಿದೆ. ಅದೇ ರೀತಿ ಈ ಬಾರಿಯೂ ಡಿ.3ರಂದು ನೂರಾರು ಆನೆಗಳ ಹಿಂಡು ಗಡಿ ಅರಣ್ಯ ಪ್ರದೇಶಗಳಲ್ಲಿ ಸಂಚಾರ ನಡೆಸಿರುವ ದೃಶ್ಯಗಳು ಅರಣ್ಯ ಇಲಾಖೆ ಸಿಬ್ಬಂದಿಯ ಡ್ರೋಣ್ ಕಣ್ಗಾವಲಿನಲ್ಲಿ ಸೆರೆಯಾಗಿದೆ. ಆನೆ ನಡೆದದ್ದೇ ದಾರಿ ಎಂಬ ನಾಣ್ನುಡಿಯಂತೆ ಇವೆರಡು ತಿಂಗಳ ಅವಧಿಯಲ್ಲಿ ಆನೆಗಳು ಸಿಕ್ಕ ಸಿಕ್ಕ ಕಡೆ ಸಂಚಾರ ನಡೆಸುವುದು ಕಂಡುಬರುತ್ತದೆ.
ಪ್ರತೀ ವರ್ಷದಂತೆ ಈ ಬಾರಿಯೂ ಆನೆಗಳ ಪ್ರವಾಸ ಮುಂದುವರೆದಿದ್ದು ಹೊಸೂರು, ರಾಯಕೋಟೈ, ಟೆಂಕಣಿಕೋಟೈ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದ ಸಿಬ್ಬಂದಿ ಆನೆಗಳ ಚಲನವಲನಗಳ ಮೇಲೆ ನಿಗಾ ವಹಿಸಿದ್ದಾರೆ. ಇಲಾಖೆಯ ಡ್ರೋಣ್ ಕಾರ್ಯಾಚರಣೆಯಲ್ಲಿ ಆನೆಗಳ ಪ್ರತಿ ಹೆಜ್ಜೆಗಳು ದಾಖಲಾಗುತ್ತಿವೆ.
ಆಂದ್ರ ಗಡಿಗೆ ಮರಳುತ್ತವೆ:
ಪ್ರತಿ ವರ್ಷ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮತ್ತು ಕಾವೇರಿ ವನ್ಯಜೀವಿ ಅಭಯಾರಣ್ಯದಿಂದ 200ಕ್ಕೂ ಹೆಚ್ಚು ಆನೆಗಳು ಕೃಷ್ಣಗಿರಿ ಜಿಲ್ಲೆಯ ಹೊಸೂರು ಅರಣ್ಯ ಪ್ರದೇಶವನ್ನು ಪ್ರವೇಶಿಸುತ್ತವೆ, ತಳಿ ಮತ್ತು ಜವಳಗಿರಿ ಮೀಸಲು ಪ್ರದೇಶಗಳನ್ನು ದಾಟಿಕೊಂಡು ಡಂಕಣಿಕೊಟ್ಟೈ, ನೊಗನೂರು, ಉಡೇದುರ್ಗಂ, ಶನಮಾವು, ಚೆಟ್ಟಿಪಲ್ಲಿ ಮತ್ತು ಮಹಾರಾಜಕದೈ ಮೀಸಲು ಪ್ರದೇಶಗಳ ಮೂಲಕ ಹಾದುಹೋಗುತ್ತವೆ, ಏಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ಆಂಧ್ರಪ್ರದೇಶದ ಗೌಂಡನ್ಯಾ ಅಭಯಾರಣ್ಯ ಮತ್ತು ಶ್ರೀ ವೆಂಕಟೇಶ್ವರ ಅಭಯಾರಣ್ಯಕ್ಕೆ ಮರಳುತ್ತವೆ. ಇವೆಲ್ಲ ದೃಶ್ಯಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ದಾಖಲಿಸುತ್ತಾರೆ.
ಅಪಾರ ಬೆಳೆ ಹಾನಿ:
ನೂರಾರು ಆನೆಗಳು ಏಕಕಾಲದಲ್ಲಿ ದಾಳಿ ನಡೆಸುವುದರಿಂದ ಹೊಸೂರು ಅರಣ್ಯ ಮೀಸಲು ಪ್ರದೇಶಗಳ ಅಕ್ಕಪಕ್ಕದಲ್ಲಿರುವ ಕೃಷಿ ಭೂಮಿ ನಾಶವಾಗುತ್ತದೆ, ಜಮೀನುಗಳಲ್ಲಿ ಬೆಳೆದು ನಿಂತ ಬೆಳೆಗಳು ಹಾನಿಗಳ ದಾಳಿಗೆ ನಲುಗಿಹೋಗುತ್ತವೆ, ಜತೆಗೆ ಹಲವು ವೇಳೆ ಮನುಷ್ಯರ ಮೇಲೆ ದಾಳಿ ನಡೆದು ಸಾವಿನ ಪ್ರಕರಣಗಳೂ ದಾಖಲಾಗುತ್ತವೆ ಕೆಲವು ಸಂದರ್ಭಗಳಲ್ಲಿ ಜಾನುವಾರುಗಳೂ ಬಲಿಯಾಗಿರುವ ದೃಶ್ಯಗಳು ಕಂಡುಬರುತ್ತವೆ.
ಅಭಯಾರಣ್ಯದ ಗಡಿಯಲ್ಲಿ ತಡೆಗೋಡೆ ಇಲ್ಲ:
ಕಾವೇರಿ ಉತ್ತರ ವನ್ಯಜೀವಿ ಅಭಯಾರಣ್ಯದ ಗಡಿಯಲ್ಲಿ ಆಧುನಿಕ ತಡೆಗೋಡೆಗಳಿಲ್ಲದ ಕಾರಣದಿಂದ ಆನೆಗಳು ನಿರಾಯಾಸವಾಗಿ ಗಡಿ ದಾಟುತ್ತವೆ. ಪ್ರಸಕ್ತ ವರ್ಷದ ನವೆಂಬರ್‌ನಲ್ಲಿ ಸುಮಾರು 50 ಆನೆಗಳಹಿಂಡು ಉದೇದುರ್ಗಂ ಮೀಸಲು ಪ್ರದೇಶ ಮೂಲಕ ಶನಮಾವು ಮೀಸಲು ಪ್ರದೇಶ ಪ್ರವೇಶಿಸಿದ್ದವು. ರಾತ್ರಿ ವೇಳೆಯಲ್ಲಿ ಮೀಸಲು ಪ್ರದೇಶದಿಂದ ಹೊರಟು ಅಕ್ಕಪಕ್ಕದ ಜಮೀನುಗಳಲ್ಲಿನ ಬೆಳೆ ಹಾನಿ ಮಾಡಿದ್ದವು. ಆನೆಗಳ ಸಂಚಾರದ ಬಗ್ಗೆ ನಿಗಾ ವಹಿಸಿರುವ ಅರಣ್ಯ ಸಿಬ್ಬಂದಿ ಹಾಗೂ ಬೇಟೆ ನಿಗ್ರಹ ದಳ ಡಿ.3ರಂದು ಶನಮಾವು ಮೀಸಲು ಪ್ರದೇಶದಿಂದ ಆನೆಗಳನ್ನು ಓಡಿಸಲು ಸಲವಾಗಿದ್ದರು. ನಂತರ ಆನೆಗಳು ಹಲವು ಗ್ರಾಮೀಣ ಪ್ರದೇಶಗಳಲ್ಲಿ ಹಾದು ರೈಲು ಹಳಿಗಳನ್ನು ದಾಟಿ ಟೆಂಕಣಿಕೊಟ್ಟೈ ಮೀಸಲು ಪ್ರದೇಶದ ಕಡೆ ಸಾಗಿರುವ ದೃಶ್ಯಗಳನ್ನು ಡ್ರೋನ್ ಕ್ಯಾಮರಾಗಳ ಮೂಲಕ ಪತ್ತೆಹಚ್ಚಲಾಗಿದೆ.
ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯಾಚರಣೆ:
ಧರ್ಮಪುರಿ ವಲಯ, ಹೊಸೂರು ಅರಣ್ಯ ಸಂರಕ್ಷಣಾಧಿಕಾರಿ ಪಹಾನ್‌ಜಗದೀಶ್ ಸುಧಾಕರ್ ಆದೇಶದಂತೆ ಹೊಸೂರು ಅರಣ್ಯ ಅಧಿಕಾರಿ ಆರ್. ಪಾರ್ಥಸಾರಥಿ, ರಾಯಕೊಟ್ಟೈ ಅರಣ್ಯ ಮೀಸಲು ಅಧಿಕಾರಿ ಶಕ್ತಿವೇಲು ಮತ್ತು ಟೆೆಂಕಣಿಕೊಟ್ಟೈ ಅರಣ್ಯ ಮೀಸಲು ಅಧಿಕಾರಿ ವಿಜಯನ್ ನೇತೃತ್ವದ ಅರಣ್ಯ ಸಿಬ್ಬಂದಿ ಹೊಸೂರು, ರಾಯಕೊಟ್ಟೈ ಮತ್ತು ಟೆಂಕಣಿಕೊಟ್ಟೈ ಅರಣ್ಯ ಮೀಸಲು ಅರಣ್ಯ ಪ್ರದೇಶಗಳಲ್ಲಿ ಆನೆಗಳ ಸಂಚಾರದ ಬಗ್ಗೆ ನಿಗಾವಹಿಸುವುದರ ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರೆ ಜತೆಗೆ ಯಾವುದೇ ಪ್ರಾಣಹಾನಿಯಾಗದಿರುವ ಬಗ್ಗೆ ಖಚಿತಪಡಿಸಿದ್ದಾರೆ.